
ಪ್ರಗತಿವಾಹಿನಿ ಸುದ್ದಿ, ಮೈಸೂರು : : ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಆದರೆ ಅದನ್ನು ಲಾಭದಾಯಕವಾಗಿಸಲು ಎಲ್ಲಾ ಪ್ರಯತ್ನಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಚರ್ಚೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ ಮಂಡ್ಯ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಇವರ ವತಿಯಿಂದ ಆಯೋಜಿಸಲಾಗಿದ್ದ ಗಗನ ಚುಕ್ಕಿ ಜಲಪಾತೋತ್ಸವ -2025 ನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಂಡ್ಯ ಸಕ್ಕರೆ ಕಾರ್ಖಾನೆಗೆ 113 ಕೋಟಿಗಳನ್ನು ಒದಗಿಸಲಾಗಿದೆ. ಅಧಿಕಾರಕ್ಕೆ ಬಂದ ಕೂಡಲೇ 50 ಕೋಟಿಗಳನ್ನು ಒದಗಿಸಿ, ನಂತರ 52 ಕೋಟಿ ರೂ.ಗಳನ್ನು ವಿದ್ಯುತ್ ಶಕ್ತಿಯ ಬಾಕಿ ಬಲ್ಲುಗಳನ್ನು ಮನ್ನಾ ಮಾಡಲಾಯಿತು. ಇದಲ್ಲದೆ 10 ಕೋಟಿ ಇವುಗಳನ್ನು ಒದಗಿಸಲಾಗಿದೆ. ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ನಷ್ಟವಿಲ್ಲದ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕು. ಇದಕ್ಕೆ ಅಗತ್ಯವಿರುವ ಬಾಯ್ಲಿಂಗ್ ಹೌಸ್ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
*ಗಗನಚುಕ್ಕಿ ಪ್ರಮುಖ ಪ್ರವಾಸೋದ್ಯಮ ಕೇಂದ್ರ*

ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಾಗೂ ಪ್ರಕೃತಿ ಸೌಂದರ್ಯವನ್ನು ಜನರು ಕಾಣಲು ಬರಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಜಲಪಾತೋತ್ಸವವನ್ನು ಆಚರಿಸುತ್ತಾ ಬಂದಿದೆ. ಕರ್ನಾಟಕದಲ್ಲಿ ಅನೇಕ ನದಿಗಳಿವೆ. ಕಾವೇರಿ, ಕೃಷ್ಣಾ, ತುಂಗಭದ್ರೆ, ಶರಾವತಿ, ನದಿಗಳು ನಮ್ಮ ರಾಜ್ಯದ ಆರ್ಥಿಕತೆ ವೃದ್ಧಿಸಲು ಸಹಕಾರಿಯಾಗಿವೆ. ಗಗನಚುಕ್ಕಿ ಕಾವೇರಿ ನದಿ ಕವಲೊಡೆದು 300 ಅಡಿ ಎತ್ತರದಿಂದ ನೆಲಕ್ಕೆ ಬೀಳುತ್ತದೆ. ಇದು ಅತ್ಯಂತ ಸುಂದರ ಹಾಗೂ ಸೊಗಸಾದ ಪ್ರದೇಶವಾಗಿದ್ದು, ಇದು ಪ್ರಮುಖ ಪ್ರವಾಸೋದ್ಯಮ ಕೇಂದ್ರವಾಗಿದೆ. ಈ ವಾತಾವರಣವನ್ನು ಅನುಭವಿಸಲು ಹೆಚ್ಚು ಜನ ಬರಬೇಕು. ಇದಕ್ಕಾಗಿಯೇ ನಾವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಮಂಡ್ಯ ಜಿಲ್ಲೆಯಲ್ಲಿ 3200 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಬೇಕು ಹಾಗೂ ಮಹಿಳೆಯರೂ ಸ್ವಾವಲಂಬಿಗಳಾಗಬೇಕೆಂಬ ಕಾರಣದಿಂದ ಈ ಯೋಜನೆಗಳನ್ನು ಜಾರಿ ಮಾಡಿದೆ ಎಂದರು.
*ಕೊಟ್ಟ ಮಾತನ್ನು ಉಳಿಸಿಕೊಂಡ ಸರ್ಕಾರ*
ಪ್ರತಿಯೊಬ್ಬರೂ ಆರ್ಥಿಕವಾಗಿ ಸಾಮಾಜಿಕವಾಗಿ ಶಕ್ತಿಯುತರಾದಾಗ ಮಾತ್ರ ಸ್ವಾತಂತ್ರ್ಯ ಬಂದದ್ದು ಸಾರ್ಥಕ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ತಿಳಿಸಿದ್ದಾರೆ. ಕಳೆದ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಜನರಿಗೆ ನೀಡಿದ್ದ ಭರವಸೆಗಳನ್ನು ಬಹುತೇಕ ಪೂರೈಸಿದ್ದೇವೆ. 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಲಾಗಿದೆ. ಈ ಬಾರಿ 492 ಭರವಸೆಗಳಲ್ಲಿ 242 ಭರವಸೆಗಳನ್ನು ಈಡೇರಿಸಲಾಗಿದೆ ಎಂದರು. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿ ಕೊಂಡಿದೆ ಎಂದರು.
*ತಮಿಳುನಾಡಿಗೆ ನಿಗದಿಯಾಗಿದ್ದಕ್ಕಿಂತಲೂ ಹೆಚ್ಚು ನೀರು ನೀಡಲಾಗಿದೆ*
ಮಂಡ್ಯ ಕೃಷಿ ಪ್ರಧಾನವಾದ ಜಿಲ್ಲೆ. ಕಾವೇರಿ ನದಿಯ ಕುರಿತು ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ವ್ಯಾಜ್ಯ ಈಗ ಇಲ್ಲ. ಮಳೆ ಸರಿಯಾಗಿ ಆಗಿದ್ದರೆ ಮಾತ್ರ 177.25 ಟಿಎಂಸಿ ನೀರನ್ನು ತಮಿಳುನಾಡಿಗೆ ಒದಗಿಸಬೇಕೆಂದು ತೀರ್ಮಾನವಾಗಿದೆ. ಮಳೆಯಾಗಿಲ್ಲದಿದ್ದರೆ ಸಂಕಷ್ಟ ಸೂತ್ರ ಜಾರಿಗೆ ಬಂದು, ಅದರಂತೆ ನೀರನ್ನು ಹಂಚಿಕೆ ಮಾಡಲಾಗುವುದು. ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಏಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ರಾಜಕೀಯಕ್ಕಾಗಿ ಇದನ್ನು ಆಕ್ಷೇಪಿಸುತ್ತಿದ್ದಾರೆ. ರಾಜ್ಯವು 98 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಆದರೆ ಇಂದಿನವರೆಗೆ 221 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು ಕೊಡಬೇಕಿದ್ದ ನೀರಿಗಿಂತಲೂ 122 ಟಿಎಂಸಿ ನೀರು ಹೆಚ್ಚಾಗಿ ಹರಿದು ಹೋಗಿದೆ. ಮಳೆ ಉತ್ತಮವಾಗಿಯಾದರೆ ನೀರನ್ನು ಕೊಟ್ಟೆ ಕೊಡುತ್ತೇವೆ ಎಂದರು.
*ಈ ವರ್ಷ ವಿದ್ಯುತ್ ಅಭಾವವಿಲ್ಲ*
ಅದೃಷ್ಟವಶಾತ್ ಎರಡು ವರ್ಷವೂ ಒಳ್ಳೆ ಮಳೆಯಾಗಿದೆ. ರಾಜ್ಯದ ಎಲ್ಲಾ ಜಲಾಶಯಗಳು ತುಂಬಿವೆ. ಈ ವರ್ಷ ವಿದ್ಯುತ್ ಅಭಾವ ಬರಲು ಸಾಧ್ಯವಿಲ್ಲ. ನಮಗೂ ತಮಿಳುನಾಡಿಗೂ ನೀರಿನ ವಿಷಯವಾಗಿ ವಿವಾದವೂ ಬರುವುದಿಲ್ಲ. ಮಳೆ ಸಕಾಲಕ್ಕೆ ಆದರೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು.
*ಮೇಕೆದಾಟು ಯೋಜನೆ; ತಕರಾರು ಸಲ್ಲದು*
ಮೇಕೆದಾಟು ಯೋಜನೆ ಜಾರಿಗೆ ತರಲು ತಮಿಳುನಾಡು ಹಾಗೂ ಕೇಂದ್ರ ಸರ್ಕಾರ ತಕರಾರು ಮಾಡಬಾರದು. ಮೇಕೆದಾಟು ಅಣೆಕಟ್ಟಿನಿಂದ 66 ಟಿಎಂಸಿ ನೀರನ್ನು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಇದರಿಂದ ತಮಿಳುನಾಡು ಹಾಗೂ ಕರ್ನಾಟಕಕ್ಕೂ ಉಪಯೋಗವಾಗುತ್ತದೆ. ಮಳೆ ಬಾರದಿದ್ದಾಗ ತಮಿಳುನಾಡಿಗೆ ನೀರನ್ನು ಹರಿಸಲು ಮತ್ತು ಮಳೆ ಬಾರದೇ ಹೋದಾಗ ಮಳೆ ನೀರನ್ನು ಸಂಗ್ರಹ ಮಾಡಲು ಅನುಕೂಲವಾಗಲಿದೆ ಎಂದರು.
*ಮೂರು ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ*
ಗಗನಚುಕ್ಕಿ ಜಲಪಾತ ಅಭಿವೃದ್ಧಿಗೆ 6 ಕೋಟಿ ವೆಚ್ಚ ಮಾಡಲಾಗಿದೆ. ಜನ ಕೋಟಿ ನೋಡಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.ಹೆಚ್ಚಿನ ಜನರು ಜಲಪಾತ ವೀಕ್ಷಿಸಲು ಬರಬೇಕು. ಕಳೆದ ಮೂರು ವರ್ಷಗಳಲ್ಲಿ 22 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದರು. ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು. ಶಿವನಸಮುದ್ರ ಜಲಾಶಯದಲ್ಲಿ 1902 ರಲ್ಲಿ ಏಷ್ಯಾದಲ್ಲಿಯೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಮಾಡಿದ ಕೇಂದ್ರ ಎಂಬ ಹೆಗ್ಗಳಿಕೆ ನಮ್ಮದು.
ರಾಜ್ಯ ಇಂದು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೆ ಅದಕ್ಕೆ ಶಿವನಸಮುದ್ರ ಮೂಲಕ ಕಾರಣ ಎಂದರು.
ಪ್ರಸ್ತುತ ಕರ್ನಾಟಕಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಅದನ್ನು ಬಳಸಿಕೊಳ್ಳುವ ಕೆಲಸವೂ ಆಗುತ್ತಿದೆ. ವಿದ್ಯುತ್ ಉತ್ಪಾದಿಸಿ ರೈತರಿಗೆ ಉಪಯೋಗವಾಗುವ ಕೆಲಸವಾಗುತ್ತಿದೆ ಎಂದರು.
*5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ*.
ಈ ವರ್ಷ ಸುಮಾರು 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಬಿತ್ತನೆ ಆಗಿದೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಳೆ ಯಿಂದ ಬೆಳೆ ಹಾನಿಯಾಗಿದೆ. ಅವೆಲ್ಲಕ್ಕೂ ಕೂಡಾ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
*ಮಳೆಯಿಂದಾದ ಬೆಳೆ ಹಾನಿಗೆ ಪರಿಹಾರ*
ಈಗಾಗಲೇ ಮಳೆಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ, ಜಾನುವಾರು ಪ್ರಾಣ ಹಾನಿಗೆ, ಮನೆಗಳನ್ನು ಕಳೆದುಕೊಂಡವರಿಗೆ ಜಿಲ್ಲಾಡಳಿತದಿಂದ ಪರಿಹಾರ ಕೊಡಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ, ಇನ್ನು ಹತ್ತು ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ . ವರದಿ ಆಧರಿಸಿ ಆದಷ್ಟು ಬೇಗನೆ ಬೆಳೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
*ಅನುದಾನದ ಕೊರತೆಯಿಲ್ಲ*
ಪರಿಹಾರ ನೀಡಲು ಸರ್ಕಾರದಲ್ಲಿ ಹಣದ ಕೊರತೆಯಿಲ್ಲ. ಆದರೂ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ, ಅಭಿವೃದ್ಧಿ ಕಾರ್ಯಗಳಿಗೆ ದುಡ್ಡಿಲ್ಲ ಎಂದು ವಿರೋಧ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ.
ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ ಸರ್ಕಾರ 99 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ. ಶೀಘ್ರದಲ್ಲೇ 1ಲಕ್ಷ ಕೋಟಿ ರೂಪಾಯಿಗಳನ್ನು ಮುಟ್ಟುತ್ತೇವೆ.
ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ ಅನುದಾನ ಸರ್ಕಾರದಲ್ಲಿ ಲಭ್ಯವಿದೆ ಎಂದು ಸ್ಪಷ್ಟಪಡಿಸಿದರು.
*ಸಮಾಜ ಒಡೆಯುವ ಶಕ್ತಿಗಳಿಂದ ದೂರ ಇರಬೇಕು*
ವಿರೋಧ ಪಕ್ಷದವರ ಸುಳ್ಳು ಪ್ರಚಾರದಲ್ಲಿ, ಆಪಾದನೆಗಳಲ್ಲಿ ಯಾವುದೇ ಹುರುಳಿಲ್ಲ, ಸುಳ್ಳು ಸುದ್ದಿಗಳನ್ನು ಹೇಳಿ ಜನರನ್ನು ಪ್ರಚೋದಿಸಿ ಸಮಾಜದಲ್ಲಿ ಶಾಂತಿಯನ್ನು ಕದಡುವುದೇ ಅವರ ಕೆಲಸ . ಜನರು ಇದಕ್ಕೆ ಅವಕಾಶ ನೀಡದೆ ಅವರು ಮಾತುಗಳಿಗೆ ಕಿವಿಗೊಡುವುದು ಬೇಡ ಎಂದರು.
ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವುದು, ಜನರನ್ನು ಎತ್ತಿ ಕಟ್ಟುವುದು ವಿರೋಧಪಕ್ಷದ ಕೆಲಸ. ಕುವೆಂಪು ಹೇಳಿದ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ನಾವೆಲ್ಲರೂ ಮನುಷ್ಯರಾಗಿ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಬಾಳಬೇಕು ಹಾಗೂ ಸಮಾಜ ಒಡೆಯುವ ಶಕ್ತಿಗಳಿಂದ ದೂರ ಇರಬೇಕು ಎಂದರು.
ಕಳೆದ ಲೋಕಸಭಾ ಚುನಾವಣೆಯಿಂದ ಜೆಡಿಎಸ್ ಪಕ್ಷವು, ಬಿಜೆಪಿಯೊಂದಿಗೆ ಸೇರಿ ಬಿಟ್ಟಿದೆ. ಮುಂದೆ ಅದೇ ಪಕ್ಷದೊಂದಿಗೆ ಸೇರಿ ಹೋದರೂ ಆಶ್ಚರ್ಯವಿಲ್ಲ. ಕೇವಲ ಕಾಂಗ್ರೆಸ್ ಸರ್ಕಾರ ಮಾತ್ರ ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆ ಇಟ್ಟು ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಲು ಶ್ರಮಿಸುತ್ತಿದೆ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸೌಹಾರ್ದತೆಯನ್ನು ಪ್ರತಿಪಾದಿಸುತ್ತಿದೆ ಎಂದರು.
*ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು*
ದ್ವೇಷ ಸಮಾಜವನ್ನು ಒಡೆಯುತ್ತದೆ, ಪ್ರೀತಿ ಮನಸುಗಳನ್ನು ಬೆಸೆಯುತ್ತದೆ. ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು . ಆಗ ಮಾತ್ರ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲು ಸಾಧ್ಯ ಎಂದರು.
ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವರಾದ ಚೆಲುವರಾಯಸ್ವಾಮಿ, ಶಾಸಕರಾದ ಪಿ. ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ರವಿ ಗಣಿಗ, ಮಂಜುನಾಥ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಂದ್ರಮ್ಮ ಮೊದಲಾದವರು ಉಪಸ್ಥಿತರಿದ್ದರು.