*ಚಿಕ್ಕೋಡಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ: ಡಿಸಿ ನಿತೇಶ್ ಪಾಟೀಲರಿಂದ ಅಹವಾಲು ಸ್ವೀಕಾರ*
ಪ್ರಗತಿವಾಹಿನಿ ಸುದ್ದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕೃತವಾಗುವ ಸಾರ್ವಜನಿಕ ಅಹವಾಲುಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ತ್ವರಿತವಾಗಿ ಸ್ಪಂಧಿಸುವದರ ಮೂಲಕ ಸಮಸ್ಯಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೂಚನೆ ನೀಡಿದರು.
ಚಿಕ್ಕೋಡಿ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬುಧವಾರ (ಜೂ.೨೬) ಜರುಗಿದ ಚಿಕ್ಕೋಡಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಆಡಳಿತವೆ ಜನರ ಮನೆ ಬಾಗಿಲಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸ್ಪಂಧನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಂದ ಸ್ವೀಕೃತವಾದಂತಹ ಅಹವಾಲುಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವುದು ಹಾಗೂ ಸಾರ್ವಜನಿಕರು ಸರಕಾರಿ ಕಚೇರಿಗೆ ಅಲೆದಾಡುವದನ್ನು ತಪ್ಪಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವದರ ಮೂಲಕ ಸಮಸ್ಯೆಗಳ ನಿವಾರಣಗೆ ಮುಂದಾಗಬೇಕು.
ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯಡಿ ದಾಖಲಾಗುವ ಸಾರ್ವಜನಿಕ ಅಹವಾಲುಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಲಮಿತಿಯೊಳಗಾಗಿಯೇ ಇತ್ಯರ್ಥ ಪಡಿಸಬೇಕು. ಜನಸ್ಪಂಧನ ಕಾರ್ಯಕ್ರಮದಡಿ ಸ್ವೀಕೃತವಾಗುವ ಅಹವಾಲುಗಳ ಕುರಿತು ಯಾವುದೇ ರೀತಿಯ ಉದಾಸಿನತೆ, ನಿರ್ಲಕ್ಷ್ಯ ಮನೋಭಾವ ತೋರದಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಟ್ಟುನಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಜಿ. ಪಂ. ಸಿ.ಇ.ಓ. ರಾಹುಲ್ ಶಿಂಧೆ, ಚಿಕ್ಕೋಡಿ ತಹಶೀಲ್ದಾರ ಚಿದಂಬರ ಕುಲಕರ್ಣಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಜನಸ್ಪಂಧನ ಕಾರ್ಯಕ್ರಮದಡಿ ರಸ್ತೆ, ಚರಂಡಿ, ಬೆಳೆವಿಮೆ, ಪಹಣಿ ಪತ್ರ ತಿದ್ದುಪಡಿ, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸಾರ್ವಜನಿಕರಿಂದ ಸ್ವೀಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ