Belagavi NewsBelgaum NewsKannada NewsKarnataka NewsLatest

*ಸಿರಾಮಿಕ್ ಕಾರ್ಖಾನೆಗೆ ಸೇರಿದ ನಿವೇಶನಗಳ ಮಾಲೀಕತ್ವ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಭೆ* ; *ಇಬ್ಬರಿಗೆ ಗಂಭೀರ ಗಾಯ: 15ಕ್ಕೂ ಹೆಚ್ಚು ಜನರಿಗೆ ಸಣ್ಣ ಪುಟ್ಟ ಗಾಯ*

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಯ ಬದಿಯಲ್ಲಿರುವ ಸಿರಾಮಿಕ್ ಕಾರ್ಖಾನೆಗೆ ಸೇರಿದ ಖಾಲಿ ಜಾಗದಲ್ಲಿರುವ ನಿವೇಶನಗಳ ಮಾಲೀಕತ್ವ ವಿಚಾರವಾಗಿ ಸ್ಥಳೀಯ ಶಾಹುನಗರ ಕಾಲನಿಯ ನಿವಾಸಿಗಳು ಮತ್ತು ಸೆರಾಮಿಕ್ ಕಾರ್ಖಾನೆಯಿಂದ ನಿವೇಶನಗಳನ್ನು ಪಡೆದಿರುವವರ ನಡುವೆ ಭಾನುವಾರ ಪರಸ್ಪರ ಮಾತಿನ ಚಕಮಕಿ ಮತ್ತು ವಾಗ್ವಾದ ಆರಂಭವಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಗಲಭೆ ನಡೆದು ಹಿಂಸಾಚಾರ ಸಂಭವಿಸಿದೆ.

ಎರಡೂ ಗುಂಪಿನ ಕಡೆಯವರು ನಡೆಸಿದ ಕಲ್ಲು ತೂರಾಟ, ಮಾರಕಾಸ್ತ್ರಗಳಿಂದ ಹಲ್ಲೆ ಮತ್ತು ಪರಸ್ಪರ ತಳ್ಳಾಟದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 15ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪಟ್ಟಣದ ಶಾಹುನಗರ ಕಾಲನಿ ಪಕ್ಕಕ್ಕೆ ಹೊಂದಿಕೊಂಡಿರುವ ರಿ.ಸ.ನಂ.93ರಲ್ಲಿ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕರಿಗಾಗಿ ಕಾರ್ಖಾನೆ ಮಂಜೂರು ಮಾಡಿದ ಖುಲ್ಲಾ ಜಾಗವಿದೆ. ಖುಲ್ಲಾ ಜಾಗದ ವಿಷಯವಾಗಿ ಕಾರ್ಖಾನೆಯ ನಿವೇಶನಗಳ ಮಾಲೀಕರು ಮತ್ತು ಶಾಹುನಗರ ಕಾಲನಿಯ ನಾಗರಿಕರ ನಡುವೆ ಕಳೆದ ಹಲವು ವರ್ಷಗಳಿಂದ ವಿವಾದ ನಡೆಯುತ್ತಿದೆ.

ಈ ಜಾಗದ ಸಲುವಾಗಿ ಮೇಲಿಂದ ಮೇಲೆ ಎರಡೂ ಕಡೆಗಳಿಂದ ನ್ಯಾಯಾಲಯದ ಪ್ರಕರಣಗಳು, ಕಚೇರಿ, ಪೊಲೀಸ್ ಠಾಣೆಗಳಲ್ಲಿ ದೂರುಗಳು ಮತ್ತು ಪ್ರತಿಭಟನೆಗಳು ನಡೆಯುತ್ತಲೇ ಇವೆ. ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ಹಿಂದೊಮ್ಮೆ ಎರಡೂ ಗುಂಪುಗಳ ನಡುವೆ ಸಭೆ ನಡೆಸಿ ರಾಜಿ ಸಂಧಾನದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗಿತ್ತು.

Home add -Advt

ಆದರೆ ಶಾಹುನಗರ ಬಡಾವಣೆಯವರು ಇದಕ್ಕೆ ಒಪ್ಪದ್ದರಿಂದ ಸೆರಾಮಿಕ್ ನಿವೇಶನಗಳ ಮಾಲೀಕರು ಸದರಿ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಆದೇಶದಂತೆ ಅವರು ಕಳೆದ ಎಂಟು ದಿನಗಳ ಹಿಂದೆ ಸ್ಥಳದ ಸರ್ವೇ ಕಾರ್ಯ ಕೈಗೊಂಡು ನಿವೇಶನಗಳ ಅಳತೆ ಮಾಡಿಸಿ ಕಂಬಗಳನ್ನು ಹೂಳಿದ್ದರು. ನಿವೇಶನವನ್ನು ಸ್ವಚ್ಛಗೊಳಿಸಿ ಒಳಗೆ ಸುತ್ತಾಡಲು ರಸ್ತೆ ನಿರ್ಮಿಸಲು ಮುಂದಾಗಿದ್ದರು.

ಭಾನುವಾರ ಜೆಸಿಬಿ ಬಳಸಿ ನಿವೇಶನದ ಸುತ್ತಲೂ ಕಂಪೌಂಡ್ ನಿರ್ಮಾಣಕ್ಕಾಗಿ ಜಮೀನು ಅಗೆಯಲು ಆರಂಭಿಸಿದ್ದನ್ನು ಗಮನಿಸಿದ ಶಾಹುನಗರದ ನಿವಾಸಿಗಳು ಘಟನಾ ಸ್ಥಳಕ್ಕೆ ತೆರಳಿ ಸ್ಥಳದಲ್ಲಿದ್ದವರ ಜೊತೆ ವಾಗ್ವಾದ ನಡೆಸಲು ಆರಂಭಿಸಿದರು. ಶಾಹುನಗರದ ನಾಗರಿಕರು ಸೆರಾಮಿಕ್ ನಿವೇಶನಗಳ ಮಾಲೀಕರ ಮೇಲೆ ಬಾಟಲಿ, ಕಲ್ಲು ಮತ್ತು ಇತರೆ ವಸ್ತುಗಳಿಂದ ದಾಳಿ ನಡೆಸಿದರು.

ಈ ದಾಳಿಯಲ್ಲಿ ಸೆರಾಮಿಕ್ ನಿವೇಶನದ ಮಾಲೀಕರಾದ ಸಂದೀಪ ಪಾಟೀಲ ಮತ್ತು ಅಂಕುಶ ಪಾಟೀಲ ಗಂಭೀರವಾಗಿ ಗಾಯಗೊಂಡರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ ಬಳಿಕ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಈ ಘಟನೆಯಲ್ಲಿ ಗಾಯಗೊಂಡ ಇನ್ನುಳಿದ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯವರು ಪರಸ್ಪರ ದೂರು-ಪ್ರತಿದೂರು ದಾಖಲಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಬಳಿಕ ಖಾನಾಪುರ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಖಾನಾಪುರ ಪಟ್ಟಣದಲ್ಲಿ ಮಾರ್ಚ್ 30ರಂದು ನಡೆದ ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶಾಂತಿ-ಸೌಹಾರ್ದತೆಗೆ ಹೆಸರಾದ ಖಾನಾಪುರದಲ್ಲಿ ಯುಗಾದಿ ಹಬ್ಬದಂದು ಇಂತಹ ಘಟನೆ ನಡೆದಿರುವುದು ಸರಿಯಲ್ಲ. ಯಾವುದೇ ಅಹಿತಕರ ಘಟನೆ ನಡೆಯದಂತೆ ಗಮನಹರಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಎರಡೂ ಕಡೆಯವರಿಂದ ಮಾಹಿತಿ ಸಂಗ್ರಹಿಸಿ ಈ ಸಮಸ್ಯೆಗೆ ಶಾಂತಿಯುತವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.
-ವಿಠ್ಠಲ ಹಲಗೇಕರ, ಶಾಸಕರು, ಖಾನಾಪುರ.


Related Articles

Back to top button