NationalPolitics

ಸಿಎಂ ಅರವಿಂದ ಕೇಜ್ರಿವಾಲ್ ಆರೆಸ್ಟ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. 9 ಬಾರಿ ಸಮನ್ಸ್ ನೀಡಿದರೂ ಕೇಜ್ರಿವಾಲ್ ನ್ಯಾಯಾಯಕ್ಕೆ ಹಾಜರಾಗಿರಲಿಲ್ಲ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ ಕೇಜ್ರಿವಾಲ್‌ ಅವರನ್ನು ಗುರುವಾರ ರಾತ್ರಿ ಜಾರಿ ನಿರ್ದೇಶನಾಲಯ( ED) ಅಧಿಕಾರಿಗಳು ಬಂಧಿಸಿದ್ದಾರೆ.

ಕೇಜ್ರಿವಾಲ್‌ ಬಂಧನ ವಿರೋಧಿಸಿ ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ದೆಹಲಿ, ಪಂಜಾಬ್‌ ಸಹಿತ ಹಲವು ಕಡೆ ಪ್ರತಿಭಟನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.

ಕೇಜ್ರಿವಾಲ್ ಅವರ ಬಂಧನವನ್ನು ರದ್ದುಗೊಳಿಸುವಂತೆ ಪಕ್ಷವು ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ ಎಂದು ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಹೇಳಿದ್ದಾರೆ. “ನಾವು ಇಂದು ರಾತ್ರಿಯೇ ಸುಪ್ರೀಂ ಕೋರ್ಟ್ನಿಂದ ತುರ್ತು ವಿಚಾರಣೆಯನ್ನು ಕೇಳಿದ್ದೇವೆ” ಎಂದು ಅತಿಶಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಬಕಾರಿ ಹಗರಣ ಪ್ರಕರಣದಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಸೇರಿದಂತೆ ಸುಮಾರು 12 ಜನರನ್ನು ಈಗಾಗಲೇ ಬಂಧಿಸಿದೆ. ಕಳೆದ ವರ್ಷದ ಫೆಬ್ರವರಿಯಲ್ಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರ ಬಂಧನವಾಗಿತ್ತು.

ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಇಡಿ ಸಮನ್ಸ್ ನೀಡಿತ್ತು, ಆದರೆ ಕೇಜ್ರಿವಾಲ್ ಇಲ್ಲಿಯವರೆಗೆ ಎಲ್ಲಾ ಸಮನ್ಸ್‌ಗಳನ್ನು ತಪ್ಪಿಸಿಕೊಂಡಿದ್ದರು. ಜಾರಿ ನಿರ್ದೇಶನಾಲಯದ ಸಮನ್ಸ್ ಅಸಾಂವಿಧಾನಿಕ ಎಂದು ಪ್ರಶ್ನಿಸಿ ಕೇಜ್ರಿವಾಲ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಂತದಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶಿಸುವ ಉದ್ದೇಶವಿಲ್ಲ ಎಂದು ನ್ಯಾಯಾಲಯ ಗುರುವಾರ ಹೇಳಿದ ನಂತರ ಕೇಜ್ರಿವಾಲ್ ಅವರಿಗೆ ಬಂಧನದ ಭೀತಿ ಎದುರಾಗಿತ್ತು.

ಜಾರಿ ನಿರ್ದೇಶನಾಲಯದ ಬಲವಂತದ ಕ್ರಮದಿಂದ ಕೇಜ್ರಿವಾಲ್ ಅವರಿಗೆ ಯಾವುದೇ ರಕ್ಷಣೆ ನೀಡಲು ನ್ಯಾಯಾಲಯ ನಿರಾಕರಿಸಿದ್ದರಿಂದ ಹೈಕೋರ್ಟ್ ತೀರ್ಪಿನ ಕೆಲವೇ ಗಂಟೆಗಳ ನಂತರ, ಇಡಿ ಅಧಿಕಾರಿಗಳು ಕೇಜ್ರಿವಾಲ್ ಅವರ ಸಿವಿಲ್ ಲೈನ್‌ ನಿವಾಸಕ್ಕೆ ಶೋಧ ವಾರಂಟ್ ನೊಂದಿಗೆ ತೆರಳಿದರು. ಕೆಲವು ಗಂಟೆಗಳ ನಂತರ, ಕೇಜ್ರಿವಾಲ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿಯೇ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಮತ್ತು ಸಚಿವರಾಗಿದ್ದ ಸಂಜಯ್ ಸಿಂಗ್ ಅವರನ್ನು ಈ ಹಿಂದೆ ಬಂಧಿಸಲಾಗಿತ್ತು. ಬಿಆರ್‌ ಎಸ್ ನಾಯಕಿ ಕೆ.ಕವಿತಾ ಅವರನ್ನು ಕಳೆದ ವಾರ ಹೈದರಾಬಾದ್ನಲ್ಲಿ ಬಂಧಿಸಿ ನವದೆಹಲಿಗೆ ಕರೆತರಲಾಗಿತ್ತು. ಕವಿತಾ ಅವರ ಬಂಧನವು ಕೇಜ್ರಿವಾಲ್ ಅವರು ಇಡಿಯ ಮುಂದಿನ ಗುರಿಯಾಗಲಿದ್ದಾರೆ ಎಂಬ ಸುಳಿವು ನೀಡಿತ್ತು.

ದೆಹಲಿಯಲ್ಲಿ ಎರಡು ವರ್ಷದ ಹಿಂದೆ ಆಮ್‌ ಆದ್ಮಿ ಪಕ್ಷ ಹೊಸ ಅಬಕಾರಿ ನೀತಿ ಜಾರಿಗೊಳಿಸಿತ್ತು. ಮದ್ಯ ಮಾರಾಟದಿಂದ ಹೆಚ್ಚಿನ ಆದಾಯ ಪಡೆಯುವ ನಿಟ್ಟಿನಲ್ಲಿ ಕೇಜ್ರಿವಾಲ್‌ ಸರ್ಕಾರವು ಹಳೆಯ ಅಬಕಾರಿ ನೀತಿ ಬದಲಿಸಿ ಹೊಸ ನೀತಿ ಜಾರಿಗೊಳಿಸಿದ್ದರು. ಆದರೆ ಈ ನೀತಿ ಜಾರಿಗೊಳಿಸುವ ಮೂಲಕ ಭಾರೀ ಭ್ರಷ್ಟಾಚಾರ ನಡೆದಿದೆ ಎನ್ನುವ ಗಂಭೀರ ಆರೋಪಗಳು ಬಂದಿದ್ದವು. .

ಮಧ್ಯವರ್ತಿಗಳು, ಮಾರಾಟಗಾರರು ಮತ್ತು ಅಧಿಕಾರಿಗಳಿಗೆ ಲಾಭವಾಗುವಂತೆ ದೆಹಲಿ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಲಾಬಿ ನಡೆದಿದೆ. ಇದಕ್ಕೆ ರಾಜಕೀಯ ನಾಯಕರ ಪ್ರೋತ್ಸಾಹವಿದ್ದು, ಆ ವಿಷಯದತ್ತ ಗಮನ ಹರಿಸಲಾಗಿದೆ ಎಂದು ಸಿಬಿಐ ಹೇಳಿತ್ತು.

ದೆಹಲಿ ಸರ್ಕಾರ ಮದ್ಯ ನೀತಿಯನ್ನು ಹಿಂಪಡೆದಿದೆ. ಆದರೂ ಅದರ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ. ಮದ್ಯದ ಲಾಬಿಯಿಂದ ಸುಮಾರು 30 ಕೋಟಿ ರೂಪಾಯಿ ಕೈ ಬದಲಾಗಿದೆ ಎಂದು ಸಿಬಿಐ ಹೇಳುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button