Karnataka NewsNationalPolitics

*ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ವಾಗ್ದಾಳಿ*

ರಾಜ್ಯದಲ್ಲಿ ಮತ್ತೇಕೆ ಬೇಕು ಹೊಸ ಕಾನೂನು?ʼ ಸಿಎಂಗೆ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್‌ ಸರ್ಕಾರ ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುವ, ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.

ಬೆಂಗಳೂರಿನಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಕೋಮು ಭಾವನೆ ಕೆರಳಿಸುವವರ ವಿರುದ್ಧ ಹೊಸ ಕಾಯಿದೆ ತರಲು ಹೊರಟಿರುವುದು ತಮ್ಮ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲೇ ಹೊರತು ಅದರಲ್ಲಿ ಬೇರೇನೂ ಹುರುಳಿಲ್ಲ ಎಂದು ಟೀಕಿಸಿದರು.

ಕೋಮು ಭಾವನೆ ಕೆರಳಿಸುವವರ ವಿರುದ್ಧ, ಉದ್ವಿಗ್ನ ಭಾಷಣ ಮಾಡಿದರೆ ಕ್ರಮ ಕೈಗೊಳ್ಳಲು ಈಗಲೂ ಕಾನೂನಿನಲ್ಲಿ ಅವಕಾಶವಿದೆ. ಮತ್ತೇಕೆ ಹೊಸ ಕಾನೂನು ಬೇಕು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಹೊರಟಿದ್ದಾರೆ ವಾಗ್ದಾಳಿ ನಡೆಸಿದರು.

ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೇಲೆ ಕೇಸ್‌ ಹಾಕುತ್ತಾರೆ. ಏನಾಗಿದೆ ಅಲ್ಲಿನ ಎಸ್ಪಿಗೆ? ಹಾಗಾದರೆ ರಾಜಕಾರಣದ ಬಗ್ಗೆ ಎಸ್ಪಿ ಮಾತನಾಡುತ್ತಾರೆಯೇ? ಕಾಂಗ್ರೆಸ್‌ನ ಕೈಗೊಂಬೆಯಂತೆ ವರ್ತಿಸುವುದನ್ನು ಬಿಡಿ ಎಂದು ಜೋಶಿ ಎಚ್ಚರಿಸಿದರು.

ಬೆದರಿಕೆವೊಡ್ಡೋ ಸರ್ಕಾರ: ಇಂದಿರಾ ಗಾಂಧಿಯನ್ನು ಹಿಟ್ಲರ್‌ ಎಂದರೆ ಕೇಸ್‌ ಹಾಕುವುದಾಗಿ ಬೆದರಿಸುತ್ತಿದೆ ರಾಜ್ಯ ಸರ್ಕಾರ. ಹಾಗಾದರೆ ಇಂದಿರಾ ಗಾಂಧಿ ಅಂದು ಹಿಟ್ಲರ್‌ ರೀತಿ ವರ್ತಿಸಲಿಲ್ಲವೇ? ಇವರ ಸರ್ವಾಧಿಕಾರಿ ಆಡಳಿತದಲ್ಲಿ ಎಷ್ಟು ಜನರನ್ನು ಕೊಂದರು, ಎಷ್ಟೋ ಜನ ಜೈಲಲ್ಲೇ ಸತ್ತರು, ಪೊಲೀಸ್‌ ಠಾಣೆಯಲ್ಲಿ ಸತ್ತರು. ಇದ್ಯಾವುದೂ ಸಿಎಂಗೆ ಗೊತ್ತಿಲ್ಲವೇ? ಎಂದು ಸಚಿವ ಪ್ರಲ್ಹಾದ ಜೋಶಿ ತರಾಟೆಗೆ ತೆಗೆದುಕೊಂಡರು.

ಇಂದಿರಾಗಾಂಧಿ ಹಿಟ್ಲರ್‌; ಕೇಸ್‌ ಹಾಕಲು ಜೋಶಿ ಸವಾಲು:
ಇಂದು ಕಾಂಗ್ರೆಸ್‌ನ ಇಂಡಿ ಮೈತ್ರಿಕೂಟದಲ್ಲಿ ಇದ್ದವರೆಲ್ಲ ಅಂದು ಜೈಲಿಗೆ ತಳ್ಳಲ್ಪಟ್ಟವರೇ ಆಗಿದ್ದಾರೆ. ಸಿಎಂ ಒಮ್ಮೆ ಆ ದಿನಗಳನ್ನು ನೆನಪಿಸಿಕೊಳ್ಳಲಿ ಎಂದು ಚಾಟಿ ಬೀಸಿದ ಸಚಿವ ಜೋಶಿ, ಇಂದಿರಾ ಗಾಂಧಿ ದಿನದ 24 ಗಂಟೆಯೂ ಸರ್ವಾಧಿಕಾರಿಯೇ ಆಗಿದ್ದರು. ಹಿಟ್ಲರ್‌ ಆಗಿದ್ದರು ಎಂಬುದನ್ನು ನಾನೂ ಹೇಳುತ್ತಿದ್ದೇನೆ. ಹಾಗಾದರೆ ಹಾಕಲಿ ನೋಡೋಣ ನನ್ನ ಮೇಲೆ ಕೇಸ್‌ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

136 ಶಾಸಕರಲ್ಲೂ ಕಾಡುತ್ತಿದೆ ಅಸ್ಥಿರತೆ:
ಕಾಂಗ್ರೆಸ್‌ ಸರ್ಕಾರದ 136 ಶಾಸಕರ ಮನಸ್ಸಿನಲ್ಲೂ ಅಸ್ಥಿರತೆ ಕಾಡುತ್ತಿದೆ. ಹಾಗಾಗಿ ತಮ್ಮ ಸರ್ಕಾರದ ವಿರುದ್ಧವೇ ತಿರುಗಿ ಬೀಳುತ್ತಿದ್ದಾರೆ. ಸರ್ಕಾರದಲ್ಲಿ ಲಂಚಾವತಾರ ದೊಡ್ಡದಾಗಿದೆ. ಒಂದು ಚರಂಡಿ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವಷ್ಟೇ ಅಲ್ಲ; ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಬಸವರಾಜ ರಾಯರೆಡ್ಡಿ, ಬಿ.ಆರ್‌.ಪಾಟೀಲ, ಪರಮೇಶ್ವರ್‌ ಅವರಂಥ ದೊಡ್ಡವರೇ ಸರ್ಕಾರದ ನಿಜ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ʼನನ್ನ ಬಳಿ, ಸಿದ್ದರಾಮಣ್ಣ ಬಳಿ ದುಡ್ಡಿಲ್ಲʼ ಅಭಿವೃದ್ಧಿಗೆ ಕೇಂದ್ರವನ್ನು ಕೇಳಬೇಕುʼ ಎಂದು ಪರಮೇಶ್ವರ್‌ ಸ್ಪಷ್ಟವಾಗಿ ಹೇಳಿದ್ದಾರೆ. ವಿವಾದ ಆಗುತ್ತಲೇ ಪರಮೇಶ್ವರ್‌ ʼಹಾಗೆ ಹೇಳಿಲ್ಲ ಹೇಳಿಕೆ ತಿರುಚಿದ್ದಾರೆʼ ಎನ್ನುತ್ತಾರೆ. ಇದು ಕಾಂಗ್ರೆಸ್‌ ಹತಾಶೆ ಮತ್ತು ನಮ್ಮ ಸಂಪದ್ಭರಿತವಾಗಿದ್ದ ನಮ್ಮ ರಾಜ್ಯದ ದುರ್ದೈವ ಎಂದು ಸಚಿವ ಪ್ರಲ್ಹಾದ ಜೋಶಿ ವ್ಯಾಖ್ಯಾನಿಸಿದರು.

ಬಿಜೆಪಿ ದೊಡ್ಡ ಪಕ್ಷ ಆಕಾಂಕ್ಷೆ ಸಹಜ:
ದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷ. ಅತಿ ಹೆಚ್ಚು ನಾಯಕರು, ಕಾರ್ಯಕರ್ತರುಗಳಿದ್ದಾರೆ. ಯಾವುದೇ ಸ್ಥಾನಮಾನಗಳಿಗೆ ಹೆಚ್ಚಿನವರಲ್ಲಿ ಆಕಾಂಕ್ಷೆ ಸಹಜ. ಇದನ್ನು ಪಕ್ಷದ ಹೈಕಮಾಂಡ್‌ ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಅಧ್ಯಕ್ಷರುಗಳ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದರು.

ಬಿಜೆಪಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಚರ್ಚೆ ಆಗುವುದಿಲ್ಲ. ಸದ್ಯಕ್ಕೆ ಎಲ್ಲಾ ರಾಜ್ಯಗಳಲ್ಲಿಯೂ ಸಂಘಟನಾ ಪರ್ವ ನಡೆಯುತ್ತಿದೆ. ಅಂತೆಯೇ ಬೂತ್‌ ಮಟ್ಟದಿಂದ ರಾಜ್ಯಾಧ್ಯಕ್ಷರ ಆಯ್ಕೆವರೆಗೆ ಚುನಾವಣೆ ಪ್ರಕ್ರಿಯೆ ನಡೆಯುತ್ತದೆ. ವರಿಷ್ಠರು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.


ಅಶೋಕ್ ಭೇಟಿಗೆ ಬೇರೆ ಅರ್ಥ ಬೇಡ:
ರಾಜ್ಯ ವಿಪಕ್ಷ ನಾಯಕ ಆರ್‌.ಅಶೋಕ ಅವರು ಯಾವುದೋ ಪರವಾನಗಿ ವಿಚಾರಕ್ಕೆ ದೆಹಲಿಗೆ ಬಂದಿದ್ದರು. ಧರ್ಮೇಂದ್ರ ಪ್ರಧಾನ್‌ ಅವರನ್ನು ನಾನೇ ಭೇಟಿ ಮಾಡಿಸಿದ್ದೇನೆ. ಆದರದನ್ನು ರಾಜಕೀಯ ಉದ್ದೇಶಕ್ಕೆಂದು ಭಾವಿಸಬೇಡಿ ಎಂದು ಜೋಶಿ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button