ಮಹಿಳೆಯ ಖಾಸಗಿ ಫೋಟೋ ಇಟ್ಕೊಂಡು 9 ಲಕ್ಷ ಸುಲಿಗೆ ಆರೋಪ: ಟ್ಯಾಟೂ ಆರ್ಟಿಸ್ಟ್ ಅರ್ಜುನ್ ವಿರುದ್ಧ ದೂರು

ಪ್ರಗತಿವಾಹಿನಿ ಸುದ್ದಿ: ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದು, ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಟ್ಯಾಟೂ ಆರ್ಟಿಸ್ಟ್ ಹಾಗೂ ನಟ ಅರ್ಜುನ್ ವಿರುದ್ಧ ಮಹಿಳೆಯೊಬ್ಬರು ದೂರು ನೀಡಿದ್ದಾರೆ.
ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಹಾಕಿಸಿಕೊಳ್ಳಲು ತೆರಳಿದ್ದಾಗ ಮಹಿಳೆಗೆ ಅರ್ಜುನ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಮಹಿಳೆಯ ಪತಿ ಮೃತಪಟ್ಟಿರುವ ವಿಚಾರ ತಿಳಿದಿದ್ದ ಅರ್ಜುನ್, ಆಕೆಗೆ ಬಾಳು ನೀಡುವುದಾಗಿ ಹೇಳಿ ಆಕೆಯೊಂದಿಗೆ ಆತ್ಮೀಯವಾಗಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
.ಅರ್ಜುನ್ ಪ್ರೀತಿಯ ಹೆಸರಿನಲ್ಲಿ ಮಹಿಳೆಯ ಖಾಸಗಿ ಫೋಟೋಗಳನ್ನು ಪಡೆದುಕೊಂಡು, ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 2024ರ ನವೆಂಬರ್ನಿಂದ ಹಣ ನೀಡುವಂತೆ ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಹಣ ನೀಡದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಹಂತ ಹಂತವಾಗಿ ಮಹಿಳೆಯಿಂದ ಸುಮಾರು 9 ಲಕ್ಷ ರೂಪಾಯಿ ಹಣ ಪಡೆದಿದ್ದ ಅರ್ಜುನ್, ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಆದರೆ, ಮತ್ತಷ್ಟು ಹಣ ನೀಡಲು ಮಹಿಳೆ ನಿರಾಕರಿಸಿದ್ದು ಇದಾದ ಬಳಿಕ ಮಹಿಳೆ ಅರ್ಜುನ್ನ ಕರೆಗಳನ್ನು ಸ್ವೀಕರಿಸದಿದ್ದಾಗ ಸೆಪ್ಟೆಂಬರ್ 2ರಂದು ಆಕೆಯ ಮನೆಗೆ ಬಂದು ತನ್ನ ಕರೆಗಳನ್ನು ಏಕೆ ಸ್ವೀಕರಿಸುತ್ತಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಆಕೆಗೆ ಬೇರೆಯವರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಕೆಲ ದಿನಗಳ ಹಿಂದಷ್ಟೇ ಅರ್ಜುನ್ ಕೂಡ ಮಹಿಳೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದ. ಇದೀಗ ಮಹಿಳೆಯೂ ಅರ್ಜುನ್ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಹಾಗೂ ಪ್ರತಿದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.



