Kannada NewsKarnataka NewsLatest

ಸಂತ್ರಸ್ಥರ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ

 ಪ್ರಗತಿವಾಹಿನಿ ಸುದ್ದಿ, ಗೋಕಾಕ : ಪ್ರವಾಹ ಪೀಡಿತ ಗ್ರಾಮಗಳಿಗೆ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ ಸಂತ್ರಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಮುಂದಿನ ಸಭೆಯೊಳಗಾಗಿ ಸಂತ್ರಸ್ಥರ ಯಾವುದೇ ಸಮಸ್ಯೆಗಳ ಕುರಿತು ದೂರುಗಳು ನಮ್ಮಲ್ಲಿ ಬರಬಾರದು. ಬಾಕಿ ಉಳಿದಿರುವ ಎಲ್ಲ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಕೆಎಮ್‌ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಇಲ್ಲಿಯ ತಾಪಂ ಸಭಾಭವನದಲ್ಲಿ ಪ್ರವಾಹದ ಸಂಬಂಧವಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಸ್ಯೆಗಳನ್ನು ಹೇಳಲು ಬರುತ್ತಿರುವ ಸಂತ್ರಸ್ಥರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಪ್ರವಾಹ ಹಾಗೂ ನಿರಂತರ ಮಳೆಯಿಂದಾಗಿ ಸಂಪೂರ್ಣ ಕುಸಿದುಬಿದ್ದ ಮನೆಗಳು ಸಿ ವರ್ಗದಲ್ಲಿ ಬಂದಿದ್ದು, ಕೂಡಲೇ ಅವುಗಳನ್ನು ಸ್ಥಳ ಪರಿಶೀಲನೆ ಮಾಡಿ ಸಂತ್ರಸ್ಥ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು. ಎ.ಬಿ.ಸಿ ವರ್ಗಗಳ ಕೆಲವೊಂದು ಫಲಾನುಭವಿಗಳಿಗೆ ಇನ್ನೂ ಪರಿಹಾರ ಮೊತ್ತ ಅವರ ಖಾತೆಗಳಿಗೆ ಸಂದಾಯವಾಗಿರುವುದಿಲ್ಲ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ನೆರೆ ಸಂದರ್ಭದಲ್ಲಿ ಸಮೀಕ್ಷೆಯಂತೆ ತಾತ್ಕಾಲಿಕ ಪರಿಹಾರ ಧನವನ್ನು ಕೂಡಲೇ ವಿತರಿಸಬೇಕು. ಪ್ರವಾಹ ಸಂದರ್ಭದಲ್ಲಿ ಸಂತ್ರಸ್ಥ ರೈತರ ದನ-ಕರುಗಳಿಗೆ ಮೇವು ವಿತರಿಸಿದ ರೈತರಿಗೆ ಕೂಡಲೇ ಬಿಲ್ ಪಾವತಿಸಬೇಕು. ಕುಸಿದುಬಿದ್ದ ಮನೆಗಳಿಗೆ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಆದೇಶಗಳನ್ನು ನೀಡಬೇಕು. ಬಳೋಬಾಳ ಗಾಯರಾಣ ಜಾಗೆಯಲ್ಲಿರುವ ಮನೆಗಳ ಹಕ್ಕುಪತ್ರಗಳನ್ನು ವಿತರಿಸಬೇಕು. ಹಾನಿಯಾದ ಬೆಳೆಗಳ ಸಮೀಕ್ಷೆ ಮಾಡಿ ರೈತರಿಗೆ ಕೂಡಲೇ ಪರಿಹಾರ ಧನ ನೀಡಬೇಕೆಂದು ಸೂಚಿಸಿದರು.

ಸಾರ್ವಜನಿಕರ ದೂರಿನನ್ವಯ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹೋಗುತ್ತಿಲ್ಲ. ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಮೂಡಲಗಿ, ಭೈರನಟ್ಟಿ, ಮಸಗುಪ್ಪಿ, ಕುಲಗೋಡ, ಯಾದವಾಡ, ಕೌಜಲಗಿ, ಮೆಳವಂಕಿ, ತಳಕಟ್ನಾಳ, ಬಳೋಬಾಳ, ನಾಗನೂರ, ಕಲ್ಲೋಳಿ, ಅವರಾದಿ ಮುಂತಾದ ಗ್ರಾಮಗಳಲ್ಲಿ ವೈದ್ಯಾಧಿಕಾರಿಗಳ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು. ಅರಭಾವಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಗಾಯರಾಣ ಜಾಗೆಯಲ್ಲಿ ವಾಸವಿರುವ ಕುಟುಂಬಗಳಿಗೆ ತಿಂಗಳೊಳಗೆ ಹಕ್ಕುಪತ್ರಗಳನ್ನು ವಿತರಿಸುವಂತೆ ಖಡಕ್ ಸೂಚನೆ ನೀಡಿದರು.

ಪ್ರಯಾಣ ಕರ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಗ್ರಾಮೀಣ ಭಾಗದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿ, ನಿಗದಿತ ಸಮಯಕ್ಕೆ ಬಸ್ಸುಗಳನ್ನು ಓಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗೋಕಾಕ ನಗರಸಭೆ ವ್ಯಾಪ್ತಿಯಲ್ಲಿ ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಮೊದಲನೇ ಕಂತಿನ ಹಣ ಜಮಾ ಆಗಿರುವುದಿಲ್ಲ. ಆಶ್ರಯ ಮನೆಗಳಲ್ಲಿ ವಾಸವಿರುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫೆಬ್ರುವರಿ ತಿಂಗಳ ಡೆಡ್ ಲೈನ್ 

ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಓ, ಇಂಜಿನೀಯರರು ಸಂತ್ರಸ್ಥರ ಸಮಸ್ಯೆಗಳಿಗೆ ಸ್ಪಂದನೆ ಮಾಡುತ್ತಿಲ್ಲ. ನೀವು ಮಾಡಬೇಕಾದ ಕೆಲಸಗಳನ್ನು ನಾವೇ ಮಾಡುತ್ತಿದ್ದೇವೆ. ಇನ್ನಾದರೂ ಸಂತ್ರಸ್ಥರ ಅಹವಾಲುಗಳನ್ನು ಕೇಳಿ ತಕ್ಷಣ ಸ್ಪಂದಿಸಬೇಕು. ಸಾರ್ವಜನಿಕರಿಂದ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಸ್ಪಂದನೆ ಮಾಡುವಂತೆ ಸೂಚಿಸಿದರು.
ಫೆಬ್ರುವರಿ ತಿಂಗಳ ಮೊದಲವಾರದಲ್ಲಿ ಜರುಗುವ ಅಧಿಕಾರಿಗಳ ಸಭೆಯಲ್ಲಿ ಎಲ್ಲರೂ ಲಿಖಿತ ವರದಿಯೊಂದಿಗೆ ಹಾಜರಿರುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಗೋಕಾಕ ತಾಪಂ ಇಓ ಬಸವರಾಜ ಹೆಗ್ಗನಾಯಿಕ, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ದಿಲಶಾದ ಮಹಾತ, ಡಿವಾಯ್‌ಎಸ್‌ಪಿ ಡಿ.ಟಿ. ಪ್ರಭು, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button