Kannada NewsKarnataka NewsLatest

ಲಕ್ಷ್ಮಿ ಹೆಬ್ಬಾಳಕರ್ ಗೆ ಕ್ಷೇತ್ರವೇ ಮನೆ; ಕ್ಷೇತ್ರದ ಜನರೇ ಕುಟುಂಬ; ಪ್ರಾಣವನ್ನೇ ಪಣಕ್ಕಿಟ್ಟು ಜನರ ಸೇವೆ

https://youtu.be/GDhY-bP7ZPA

ಮೀಸಲಾತಿ, ಇನ್ ಫ್ಲ್ಯೂಯೆನ್ಸ್ ನಿಂದಲ್ಲ;

 ಪ್ರಯತ್ನ, ಪ್ರತಿಭೆಯಿಂದ ಬೆಳೆದ ನಾಯಕಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಪ್ರಭಾವಿ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಜನ್ಮ ದಿನ ಇಂದು. ಲಕ್ಷ್ಮಿ ಹೆಬ್ಬಾಳಕರ್ ನಿಜವಾದ ಜನ್ಮ ದಿನ ಫೆಬ್ರವರಿ 14. ಆದರೆ ತಮ್ಮನ್ನು ವಿಧಾನಸಭೆಗೆ ಆಯ್ಕೆ ಮಾಡಿದ ಮತದಾರರಿಗೋಸ್ಕರ ಆಯ್ಕೆಯಾದ ದಿನವನ್ನೇ (ಮೇ 12) ತಮ್ಮ ಜನ್ಮ ದಿನವನ್ನಾಗಿ ಆಚರಿಸಿಕೊಳ್ಳುತ್ತಿದ್ದಾರೆ.

ಮತದಾರರಿಗೋಸ್ಕರ ಜನ್ಮದಿನವನ್ನೇ ಬದಲಾಯಿಸಿಕೊಂಡಿದ್ದು ಇತಿಹಾಸದಲ್ಲೇ ಮೊದಲು. ಇದು ಕ್ಷೇತ್ರದ ಜನರಿಗೆ ಅವರು ನೀಡಿದ ಗೌರವ, ಪ್ರೀತಿ.  ಪ್ರತಿಭಾವಂತರಿಗೆ, ಯೋಧರಿಗೆ ಸನ್ಮಾನ ಸೇರಿದಂತೆ ಹಲವಾರು ವಿಧಾಯಕ ಕಾರ್ಯಕ್ರಮಗಳ ಮೂಲಕ ತಮ್ಮ ಜನ್ಮದಿನ ಆಚರಿಸಿಕೊಳ್ಳುವ ಸಂಪ್ರದಾಯ ಮಾಡಿಕೊಂಡು ಬಂದಿದ್ದಾರೆ.

ಆದರೆ, ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಜನ್ಮದಿನಾಚರಣೆ ಸಾರ್ವಜನಿಕ ಕಾರ್ಯಕ್ರಮ ಮಾಡುತ್ತಿಲ್ಲ. ಕಷ್ಟದಲ್ಲಿರುವ ಕೆಲವರಿಗೆ ಪರಿಹಾರ ಧನ ವಿತರಣೆ, ಬಿಸಿಲಿನಲ್ಲಿ ದುಡಿಯುವ ಕಾರ್ಮಿಕರಿಗೆ ಅನ್ನ ನೀಡಿ, ಅವರ ಕಷ್ಟ ಸುಖ ವಿಚಾರಿಸುವ ಕೆಲಸವನ್ನು ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದಾರೆ.

ಕಳೆದ 2 ತಿಂಗಳಿನಿಂದಲೂ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕ್ಷೇತ್ರದ ಜನರನ್ನು ಕೊರೋನಾ ಸಂಕಷ್ಟದಿಂದ ಪಾರು ಮಾಡಲು ಕುಟುಂಬ ಸಮೇತ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿ ಅಪ್ಪಳಿಸಿದಾಕ್ಷಣದಿಂದಲೂ ಮನೆಯಲ್ಲಿ ಕುಳಿತುಕೊಳ್ಳದೆ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರವನ್ನು ಸುತ್ತುತ್ತಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಮುಂಚೂಣಿ ಹೆಸರು

ಕರ್ನಾಟಕ ಕಾಂಗ್ರೆಸ್ ನ 3 ಪ್ರಬಲ ಶಕ್ತಿಗಳೊಂದಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ತ್ರಿ ಶಕ್ತಿಗಳು

ಕರ್ನಾಟಕದ ರಾಜಕಾರಣದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಹೆಸರು ಸದಾ ಮುಂಚೂಣಿಯಲ್ಲಿ ನಿಲ್ಲುತ್ತದೆ. ಯಾವುದೇ ರಿಸರ್ವೇಶನ್, ಇನ್ ಪ್ಲ್ಯುಯೆನ್ಸ್ ಇಲ್ಲದೆ ಸ್ವ ಪ್ರಯತ್ನ, ಪ್ರತಿಭೆಯಿಂದಲೇ ಬೆಳೆದ ನಾಯಕಿ ಇವರು.

ಶಾಸಕಿಯಾಗುವುದಕ್ಕಿಂತ ಮೊದಲೇ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಹೇಗೆ ಕ್ರಿಯಾಶೀಲವಾಗಿ ಕೆಲಸ ಮಾಡಬಹುದು ಎನ್ನುವುದನ್ನು ತೋರ್ಪಡಿಸಿದ್ದಾರೆ. ಸಂಘಟನೆಗೊಂದು ಶಕ್ತಿ ತುಂಬಿದ್ದಾರೆ.

Photo -YouTube.com

ಮೊದಲ ಬಾರಿಗೆ ಶಾಸಕರಾದರೂ ವಿಧಾನಸಭೆಯಲ್ಲಿ ಅವರು ಮಾಡಿದ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಷ್ಟೊಂದು ಪ್ರಭಾವಶಾಲಿಯಾಗಿ ಮಾತನಾಡಿ ಎಲ್ಲರ ಗಮನಸೆಳೆದಿದ್ದರು. ಅವರು ಕ್ಷೇತ್ರಕ್ಕೆ ತಂದ ಅಭಿವೃದ್ಧಿ ಯೋಜನೆಗಳನ್ನು ನೋಡಿ ಹಲವಾರು ಹಿರಿಯ ಶಾಸಕರೇ ದಂಗಾಗಿ ಹೋಗಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ತಾವು ಶಾಸಕರಾಗುವುದಕ್ಕಿಂತಲೂ ಮೊದಲೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿ ಕ್ಷೇತ್ರದ ಜನರ ಸೇವೆ ಮಾಡಲು ಆರಂಭಿಸಿದ್ದಾರೆ. ಒಬ್ಬ ಶಾಸಕ ಏನೆಲ್ಲ ಮಾಡಬಹುದೋ ಅದಕ್ಕಿಂತ ಹೆಚ್ಚಿನ ಕೆಲಸವನ್ನು ಆಗಲೇ ಮಾಡಿಸಿದ್ದರು. ಶಾಸಕರಾದ ನಂತರವಂತೂ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೆ ಇಂಚಿಂಚೂ ಓಡಾಡಿ ಅಭಿವೃದ್ಧಿಯ ಸ್ಪರ್ಷ ನೀಡಿದ್ದಾರೆ.

ಕನಸು ಕೊಚ್ಚಿಹೋಗಲಿಲ್ಲ

ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಲಕ್ಷ್ಮಿ ಹೆಬ್ಬಾಳಕರ್ ಯೋಜನಾಬದ್ಧವಾಗಿ ಕೆಲಸ ನಡೆಸುತ್ತಿದ್ದರು. ಆದರೆ ಕಳೆದ ಆಗಷ್ಟ್ ತಿಂಗಳಲ್ಲಿ ಅಪ್ಪಳಿಸಿದ ಪ್ರವಾಹದಿಂದಾಗಿ ಅಭಿವೃದ್ಧಿ ಕೆಲಸಗಳು ಕೊಚ್ಚಿಹೋದವು. ಆದರೆ ಲಕ್ಷ್ಮಿ ಹೆಬ್ಬಾಳಕರ್ ಕನಸು ಮಾತ್ರ ಕೊಚ್ಚಿಹೋಗಲಿಲ್ಲ. ಮತ್ತಷ್ಟು ದೃಢ ಸಂಕಲ್ಪದೊಂದಿಗೆ ಮುನ್ನುಗ್ಗಿದರು.

ಕರ್ನಾಟಕದ ಯಾವ್ಯಾವ ಇಲಾಖೆಗಳಿಂದ ಕ್ಷೇತ್ರಕ್ಕೆ ದುಡ್ಡು ತರಬಹುದೋ ಅವೆಲ್ಲವನ್ನೂ ತಂದರು. ಹಲವಾರು ಅನುಭವಿ ಶಾಸಕರಿಗೂ ಗೊತ್ತಿಲ್ಲದ ಇಲಾಖೆಗಳ ಯೋಜನೆಗಳನ್ನು ತಂದರು. 1250 ಕೋಟಿ ರೂ.ಗಳಷ್ಟು ಹಣವನ್ನು ತಂದು ಮತ್ತೆ ಕ್ಷೇತ್ರ ಕಟ್ಟುವ ಕೆಲಸ ಶುರು ಮಾಡಿದರು.

ಪ್ರಾಣವನ್ನೇ ಪಣಕ್ಕಿಟ್ಟರು

ಆದರೆ ಇದೀಗ ಮತ್ತೊಮ್ಮೆ ಅವರಿಗೆ ದೊಡ್ಡ ಆಘಾತ ಉಂಟಾಗುವಂತಾಯಿತು. ಕೊರೋನಾ ಹೆಮ್ಮಾರಿ ಅಪ್ಪಳಿಸಿ ಜನರು ನಲುಗುವಂತಾಯಿತು. ಕೊರೋನಾ ಇಡೀ ವಿಶ್ವಕ್ಕೇ ಬಂದ ಸಂಕಷ್ಟ.

ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರು ಇದರಿಂದ ಪರದಾಡಬಾರದು, ಅವರ ಬದುಕಿಗೆ ಇದರಿಂದ ತೊಂದರೆಯಾಗಬಾರದೆಂದು ಲಕ್ಷ್ಮಿ ಹೆಬ್ಬಾಳಕರ್, ಅವರ ಸಹೋದರ ಚನ್ನರಾಜ ಹಟ್ಟಿಹೊಳಿ, ಮಗ ಮೃಣಾಲ್ ಹೆಬ್ಬಾಳಕರ್ ಮತ್ತು ಇಡೀ ಪರಿವಾರ, ಕಾರ್ಯಕರ್ತರ ಪಡೆ ಟೊಂಕಕಟ್ಟಿ ನಿಂತಿತು. ಜನರ ಕೊರೋನಾ ಸಂಕಷ್ಟದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಪೂರ್ಣ ಪರಿವಾರ ಭಾಗಿಯಾಯಿತು.

ಆರಂಭದಲ್ಲಿ ಜನರು ಹೇಗೆ ಎಚ್ಚರಿಕೆ ವಹಿಸಬೇಕೆನ್ನುವ ಕುರಿತು ಅರಿವು ಮೂಡಿಸುತ್ತ, ಅದಕ್ಕೆ ಅಗತ್ಯವಾದ ಸೆನಿಟೈಸರ್, ಮಾಸ್ಕ್ ಮತ್ತಿತರ ಸಾಮಗ್ರಿಗಳನ್ನು ವಿತರಿಸುವ, ಹಳ್ಳಿ ಹಳ್ಳಿಗಳಲ್ಲಿ ಔಷಧ ಸಿಂಪಡಿಸುವ ಕೆಲಸ ಮಾಡಿದರು. ನಂತರ ಪ್ರತಿ ಹಳ್ಳಿಗೆ ತರಕಾರಿ, ದಿನಸಿ ಸಾಮಗ್ರಿ, ಹಾಲುಗಳನ್ನು ಸರಬರಾಜು ಮಾಡಿದರು.

ನೀವು ಮನೆಯಿಂದ ಹೊರಗೆ ಬರಬೇಡಿ. ನಿಮ್ಮ ಸೇವೆಗೆ ನಾವಿದ್ದೇವೆ ಎಂದು ಯಾವುದೇ ಸಂಕಷ್ಟದಲ್ಲಿ ದಿನದ 24 ಗಂಟೆಯೂ ನಮ್ಮನ್ನು ಸಂಪರ್ಕಿಸಿ ಎಂದು ಧೈರ್ಯ ತುಂಬಿದರು. ನಿಮ್ಮ ಮನೆಮಗಳಾಗಿ ನಿಮ್ಮೊಂದಿಗಿದ್ದೇನೆ ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದರು.

ಇದರ ಜೊತೆಗೆ, ಕೊರೋನಾ ವಾರಿಯರ್ಸ್ ಗಳಾದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು, ನರ್ಸ್ ಗಳು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಸತ್ಕರಿಸಿದ್ದಲ್ಲದೆ, ಪ್ರಶಂಸಾ ಪತ್ರವನ್ನೂ ನೀಡಿ ಗೌರವಿಸಿದ್ದಾರೆ.

ಒಂದು ಗುರಿ, ಎರಡು ಸಾಧನೆ

ಕ್ಷೇತ್ರದ ಬೆಳಗುಂದಿ ಮತ್ತು ಹಿರೇಬಾಗೇವಾಡಿ ಗ್ರಾಮದಲ್ಲಿ ಕೊರೋನಾ ಕಾಣಿಸಿಕೊಂಡಾಗ ತಮ್ಮ ಜೀವದ ಅಪಾಯವನ್ನೂ ಲೆಕ್ಕಿಸದೆ ಅಲ್ಲಿಗೆ ಧಾವಿಸಿದರು. ಅಧಿಕಾರಿಗಳ ತಂಡ ಒಯ್ದು ಅಲ್ಲಿ ಏನೇನಾಗಬೇಕೋ ಮಾಡಿಸಿದರು. ನಿರಂತರ ಸಭೆಗಳನ್ನು ನಡೆಸಿ, ಜನರೊಂದಿಗೆ ಚರ್ಚಿಸಿ, ಅವರ ಅಹವಾಲುಗಳನ್ನು ಆಲಿಸಿದರು. ಸರಕಾರ ಕಣ್ತೆರೆಯುವಂತೆ ಮಾಡಿದರು. ಸ್ವತಃ ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಕರೆದುಕೊಂಡು ಹೋದರು.

https://youtu.be/rm9ODJ6zeS8

ಕೊರೋನಾ ಲಾಕ್ ಡೌನ್ ನಿಂದಾಗಿ ರೈತ ಬೆಳೆಗಾರರೂ ಸಂಕಷ್ಟಕ್ಕೊಳಗಾದರು. ಗ್ರಾಹಕರೂ ಕಷ್ಟಕ್ಕೀಡಾದರು. ಇದನ್ನು ಗಮನಿಸಿ ಇಬ್ಬರನ್ನೂ ಸಂಕಷ್ಟದಿಂದ ಪಾರು ಮಾಡಲು ಯೋಜನೆ ರೂಪಿಸಿದರು. ಸುಮಾರು 100 ಟನ್ ಗಳಿಗಿಂತ ಹೆಚ್ಚು ತರಕಾರಿಗಳನ್ನು ಸ್ಥಳೀಯ ಬೆಳೆಗಾರರಿಂದ ಖರೀದಿಸಿ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚಿದರು. ಇದರಿಂದಾಗಿ ಬಳೆಗಾರರೂ ಆರ್ಥಿಕ ನಷ್ಟದಿಂದ ಪಾರಾದರು, ಜನರಿಗೂ ಸುಲಭವಾಗಿ ತರಕಾರಿ ದೊರಕಿತು.

 

ಪೂರ್ಣ ಪರಿವಾರವೇ ಬಾಗಿ

 ಕೊರೋನಾ ತಂದಿಟ್ಟಿರುವ ಸಂಕಷ್ಟ ಎಂತಾದ್ದು ಎನ್ನುವುದು ಜನಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ಅನುಭವಕ್ಕೆ ಬಂದಿದೆ. ಪ್ರತಿಯೊಬ್ಬರೂ ಈ ಕಷ್ಟಕಾಲದಲ್ಲಿ ಕೈ ಹಿಡಿಯುವವರ್ಯಾರು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ  ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತನ್ನ ಪೂರ್ಣ ಪರಿವಾರದೊಂದಿಗೆ ಜನರ ಮಧ್ಯದಲ್ಲಿದ್ದಾರೆ. ಜನರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಸಹೋದರ, ಮಗ ಮತ್ತು ಹಲವಾರು ಪ್ರಮುಖ ಕಾರ್ಯಕರ್ತರೊಂದಿಗೆ ಜನರಿಗೆ ಜಾಗ್ರತಿ ಮೂಡಿಸುವ, ವಿವಿಧ ಸಾಮಗ್ರಿ ವಿತರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
  
  ಕ್ಷೇತ್ರದ ಜನರು ನನ್ನ ಮನೆ ಬಾಗಿಲಿಗೆ ಬರುವುದು ಬೇಡ, ನಾನೇ ನೀವಿದ್ದಲ್ಲಿಗೆ ಬರುತ್ತೇನೆ ಎಂದು ಪ್ರತಿ ನಿತ್ಯ ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಸಹೋದರ ಚನ್ನರಾಜ ಹಟ್ಟಿಹೊಳಿ, ಮಗ ಮೃಣಾಲ್ ಹೆಬ್ಬಾಳಕರ್ ಕೂಡ ಮನೆಯಲ್ಲಿ ಕೂಡ್ರದೆ ಗ್ರಾಮಗಳಿಗೆ ತೆರಳಿ ಸಾಮಗ್ರಿಗಳ ವಿತರಣೆಯಲ್ಲಿ ನಿರತರಾಗಿದ್ದಾರೆ.
  “ನನ್ನನ್ನು ಶಾಸಕಿಯಾಗಿ ಆಯ್ಕೆ ಮಾಡಿದ್ದೀರಿ. ನಾನು ಹೊರಗೆ ಬರುವುದು ಎಷ್ಟು ಅಪಾಯಕಾರಿ ಎನ್ನುವ ಅರಿವು ನನಗಿದೆ. ಆದರೆ ನೀವೆಲ್ಲ ಕಷ್ಟದಲ್ಲಿರುವ ಸಂದರ್ಭದಲ್ಲಿ ನಾನು ಮನೆಯಲ್ಲಿರಲು ಮನಸ್ಸು ಬರುತ್ತಿಲ್ಲ. ಹಾಗಾಗಿ ನಿಮ್ಮ ಕಷ್ಟದಲ್ಲಿ ಭಾಗಿಯಾಗಲು, ಸಾಧ್ಯವಾದಷ್ಟು ಸ್ಪಂದಿಸಲು ನಾನು ಪ್ರತಿ ನಿತ್ಯ ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಆದರೆ ನೀವು ಹೊರಗೆ ಬಂದು ಅಪಾಯ ತಂದುಕೊಳ್ಳಬೇಡಿ” ಎಂದು ಹೆಬ್ಬಾಳಕರ್ ಜನರಿಗೆ ಕೈ ಮುಗಿದು ವಿನಂತಿಸುತ್ತಿದ್ದರು.
ಒಟ್ಟಾರೆ ಪ್ರವಾಹ ಮತ್ತು ಕೊರೋನಾ ಎರಡರಲ್ಲೂ ತಮ್ಮ ಹಾಗೂ ಕುಟುಂಬದ ಪ್ರಾಣ ಪಣಕ್ಕಿಟ್ಟು ಜನ ಸೇವೆ ಮಾಡುತ್ತಿದ್ದಾರೆ. ಕರ್ನಾಟಕಕ್ಕೊಬ್ಬ ಮಾದರಿ, ಆದರ್ಶ ಶಾಸಕರಾಗಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಮೊದಲ ಅವಧಿಯಲ್ಲೇ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

ಚನ್ನರಾಜ, ಮೃಣಾಲ – ಬಲಗೈ, ಎಡಗೈ

ಲಕ್ಷ್ಮಿ ಹೆಬ್ಬಾಳಕರ್  ಪರಿಣಾಮಕಾರಿಯಾಗಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಲು ಎರಡು ಶಕ್ತಿಗಳು ಕೈಜೊಡಿಸಿವೆ.
ಸಹೋದರ ಚನ್ನರಾಜ ಹಟ್ಟಿಹೊಳಿ ಲಕ್ಷ್ಮಿ ಹೆಬ್ಬಾಳಕರ್ ಅವರ ಎಲ್ಲ ಕಾರ್ಯಕ್ರಮಗಳನ್ನು ಜೊಡಿಸುವ ಜೊತೆಗೆ, ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಲಹೆ ನೀಡುತ್ತಾರೆ. ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿಗೆ ಹೋದ ಸಂದರ್ಭದಲ್ಲೂ ಕ್ಷೇತ್ರದ ಜನರಿಗೆ ಯಾವುದೇ ರೀತಿಯ ತೊದರೆಯಾಗದಂತೆ ಗಮನವಹಿಸುತ್ತಾರೆ. ಕ್ಷೇತ್ರಕ್ಕೆ ಆಗಬೇಕಿರುವ ಕೆಲಸಗಳನ್ನು ಯೋಜಿಸುತ್ತಾರೆ. ಕಾರ್ಯಕರ್ತರನ್ನು ಹಾಗೂ ಜನರನ್ನು ಅತ್ಯಂತ ಪ್ರಿತಿಯಿಂದ ಮತ್ತು ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾರೆ.
ಮಗ ಮೃಣಾಲ್ ಅಮ್ಮನ ಜೊತೆಗಿದ್ದು, ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸದ ಜೊತೆಗೆ ತಾನೂ ರಾಜಕೀಯದ ಒಳ ಮಜಲುಗಳನ್ನು ಕಲಿಯುತ್ತಿದ್ದಾರೆ. ಅಮ್ಮನ ಗೈರಿನಲ್ಲೂ ಕಾರ್ಯಕ್ರಮಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ.
ಒಟ್ಟಾರೆ ಮಾವ -ಅಳಿಯ, ಚನ್ನರಾಜ್  ಮತ್ತು ಮೃಣಾಲ್ ಅವರು ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಬಲತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಸಮರ್ಥ ನಾಯಕರಾಗುವ ಗುಣ ಈ ಇಬ್ಬರಲ್ಲೂ ಕಾಣುತ್ತಿದೆ.

https://pragati.taskdun.com/gallery/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button