Latest

ಸಿಎಂ ಬೆಡ್ ವ್ಯವಸ್ಥೆ ಮಾಡಿಸಿದರೂ ಬದುಕಲಿಲ್ಲ ಜೀವ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರು ಆಸ್ಪತ್ರೆಗಳಲ್ಲಿ ಬೆಡ್ ವ್ಯವಸ್ಥೆ ಸಿಗದೇ ಬೀದಿ ಬೀದಿಯಲ್ಲಿ ಸಾವನ್ನಪ್ಪುವ ಸ್ಥಿತಿ ಬಂದಿದೆ. ಆಸ್ಪತ್ರೆಗಳಿಗೆ ಅಲೆದಾಡಿದರೂ ವೆಂಟಿಲೇಟರ್, ಐಸಿಯು, ಬೆಡ್ ಸಿಗದ ಸೋಂಕಿತನ ಕುಟುಂಬವೊಂದು ಸಿಎಂ ಮನೆ ಮುಂದೆ ಧರಣಿ ನಡೆಸಿದ್ದು, ಸ್ವತ: ಸಿಎಂ ಬೆಡ್ ವ್ಯವಸ್ಥೆ ಮಾಡಿಸಿಕೊಟ್ಟರೂ ಸೋಂಕಿತನ ಜೀವ ಮಾತ್ರ ಉಳಿಯಲಿಲ್ಲ.

ರಾಮೋಹಳ್ಳಿಯಿಂದ ಬಂದಿದ್ದ ಸೋಂಕಿತನ ಕುಟುಂಬವೊಂದು ಬೆಂಗಳೂರಿನ 20 ಆಸ್ಪತ್ರೆಗಳಿಗೆ ಅಲೆದಾಡಿದೆ. ಆದರೆ ಎಲ್ಲಿಯೂ ಬೆಡ್ ವ್ಯವಸ್ಥೆ ಸಿಕ್ಕಿಲ್ಲ. ಇದರಿಂದ ಕಂಗಾಲಾದ ಕುಟುಂಬ ಕೊನೆ ಅನಿವಾರ್ಯವಾಗಿ ಆಂಬುಲೆನ್ಸ್ ಮೂಲಕ ಸಿಎಂ ನಿವಾಸ ಕಾವೇರಿ ಬಳಿ ಬಂದು ಧರಣಿ ಕುಳಿತಿದೆ. ಸೋಂಕಿತನಿಗೆ ಬೆಡ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಕಣ್ಣೀರಿಟ್ಟಿದ್ದಾರೆ.

ಸೋಂಕಿತನ ಪತ್ನಿ ತಾವು ಹಣ ನೀಡಲು ಸಿದ್ಧರಿದ್ದೇವೆ. ಆದರೆ ಆಸ್ಪತ್ರೆಯಲ್ಲಿ ಒಂದು ಬೆಡ್ ವ್ಯವಸ್ಥೆ ಮಾಡಿ ತನ್ನ ಪತಿಯ ಪ್ರಾಣ ಉಳಿಸುವುವಂತೆ ರಸ್ತೆಯಲ್ಲಿಯೇ ಕಣ್ಣೀರಿಟ್ಟು ಗೋಗರೆದಿದ್ದಾಳೆ. ಅಂತಿಮವಾಗಿ ಸಿಎಂ ಸೂಚನೆ ಮೇರೆಗೆ ಅಲ್ಲಿದ್ದ ಪೊಲೀಸರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆ ಮಾಡಿ ಬೆಡ್ ವ್ಯವಸ್ಥೆ ಮಾಡಿಸಿದ್ದಾರೆ. ಆದರೆ ರಾಮಯ್ಯ ಆಸ್ಪತ್ರೆಗೆ ಸೋಂಕಿತ ತಲುಪುವಷ್ಟರಲ್ಲಿ ಸೋಂಕಿತನ ಪ್ರಾಣಪಕ್ಷಿ ಹಾರಿಹೋಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button