ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಕೇವಲ 28 ವರ್ಷದ ಯುವಕನೊಬ್ಬ ಇಂದು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾನೆ. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ.
ಯಾವುದೇ ಆರೋಗ್ಯ ಸಮಸ್ಯೆಯೂ ಇರದ 28 ವರ್ಷದ ಗಟ್ಟಿಮುಟ್ಟಾದ ಯುವಕ ಕೊರೊನಾ ಸೊಂಕಿಗೆ ಸಾವನ್ನಪ್ಪಿರುವುದು ವೈದ್ಯರನ್ನೇ ಬೆಚ್ಚಿ ಬೀಳಿಸಿದೆ.
ಯುವಕನಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆತ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ, ಅಲ್ಲಿ ಕೊರೊನಾ ಸೋಂಕು ದೃಢ ಪಟ್ಟ ಹಿನ್ನಲೆಯಲ್ಲಿ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿರುವುದು ವಿಕ್ಟೋರಿಯಾ ಆಸ್ಪತ್ರೆ ವೈದ್ಯರನ್ನೇ ಭೀತಿಗೊಳಗಾಗಿಸಿದೆ.
ಇದೇ ವೇಳೆ ಬೆಂಗಳೂರಿನಲ್ಲಿ ಇಂದು 60 ವರ್ಷದ ವ್ಯಕ್ತಿಯೋರ್ವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇವರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕೊರೊನಾ ಹಿನ್ನಲೆಯಲ್ಲಿ ವಿಕೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರು ಕೂಡ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ದಿನ ದಿನಕ್ಕೂ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 6 ಜನರು ಕೊರೊನಾಗೆ ಸಾವನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಈವರೆಗೆ ಕೊರೊನಾ ಸೋಂಕಿಗೆ 27 ಜನರು ಸಾವನ್ನಪ್ಪಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ