Kannada NewsKarnataka NewsLatestPolitics

*ಯೋಜನೆಗಳ ಬಗ್ಗೆ ವಿವರಿಸಿದೆ, ಮೋದಿಯವರು ವೆರಿಗುಡ್ ಡಿ.ಕೆ. ಎಂದರು: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಪ್ರಧಾನಿ ಮೋದಿ ಅವರಿಗೆ ಡಬಲ್ ಡೆಕ್ಕರ್, ಮೆಟ್ರೋ ನಿಲ್ದಾಣಗಳಿಗೆ ಪ್ರತಿಷ್ಠಿತ ಕಂಪೆನಿಗಳ ಹೆಸರಿಡಲು ನಿಧಿ ಸಂಗ್ರಹ, ಸಿಎಸ್ ಆರ್ ಯೋಜನೆಗಳ ಬಗ್ಗೆ ವಿವರಿಸಿದಾಗ ʼವೆರಿಗುಡ್ ಡಿ.ಕೆ., ಒಳ್ಳೆ ಕೆಲಸ ಮಾಡುತ್ತಿದ್ದೀರಾʼಎಂದು ಹೊಗಳಿದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ನಗರದ ಖಾಸಗಿ ಹೋಟೆಲ್ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಉತ್ತರಿಸಿದರು.

‘ಮೋದಿಯವರ ಜೊತೆ ನೀವು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಣಗಳಲ್ಲಿ ವೈರಲ್ ಆಗಿವೆಯಲ್ಲ’ ಎಂದು ಕೇಳಿದಾಗ, “ಬೆಂಗಳೂರು ಅಭಿವೃದ್ದಿ ಸಚಿವನಾಗಿ ನಾನು ಅವರ ಬಳಿ ಮಾತನಾಡದೆ ಇನ್ಯಾರು ಮಾತನಾಡಲು ಸಾಧ್ಯ? ಎಲೆಕ್ಟ್ರಾನಿಕ್ ಸಿಟಿ ಭಾಗದ ಮೆಟ್ರೋ ನಿಲ್ದಾಣಗಳಿಗೆ ಇನ್ಫೋಸಿಸ್, ಡೆಲ್ಟಾ, ಬಯೋಕಾನ್ ಅವರ ಹೆಸರನ್ನು ಇಡಲು ಅವರಿಂದ 50, 100 ಕೋಟಿ ನಿಧಿ ಸಂಗ್ರಹಿಸಲಾಗಿದೆ. ಈಗ ಬಾಗಮನೆ ಅವರು ಸಹ ನಿಧಿ ನೀಡುತ್ತೇವೆ ಎಂದಿದ್ದಾರೆ. ಇದೆಲ್ಲವನ್ನು ಪ್ರಧಾನಿ ಅವರಿಗೆ ತಿಳಿಸಿದೆ” ಎಂದು ಹೇಳಿದರು.

ನಾನೇನು ಬಿಜೆಪಿಗೆ ಓಡಿಹೋಗುತ್ತಿಲ್ಲ

Home add -Advt

“ನಾನೇನು ಬಿಜೆಪಿಗೆ ಓಡಿ ಹೋಗುತ್ತಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಮಾಧ್ಯಮದವರು ನಿಧಿ ನೀಡಿದರೆ ನಿಮ್ಮ ಹೆಸರಿನಲ್ಲಿಯೂ ಮೆಟ್ರೋ ನಿಲ್ದಾಣಗಳ ನಾಮಕರಣ ಮಾಡಲಾಗುವುದು. ಈ ಯೋಜನೆ ಬೇರೆ ಎಲ್ಲಿಯೂ ಇಲ್ಲ. ಈ ಮಾದರಿಯನ್ನು ಬೆಂಗಳೂರಿನಲ್ಲಿ ಪ್ರಾರಂಭ ಮಾಡಿದ್ದೇವೆ” ಎಂದು ಹೇಳಿದರು.

“ನಾನು ಬೆಂಗಳೂರು ಅಭಿವೃದ್ದಿ ಸಚಿವ. ಮೆಟ್ರೋ ಕೂಡ ನನ್ನ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದಾಗ ನಾನು ಏನು ಕೆಲಸ ಮಾಡಬೇಕೋ ಅದನ್ನು ಮಾಡಿದ್ದೇನೆ. ಅವರನ್ನು ನಾನು ಸ್ವಾಗತಿಸಬೇಕಿತ್ತು. ಆದರೆ ಒಂದೇ ಕಾರ್ಯಕ್ರಮವಾಗಿ ಮೊಟಕು ಮಾಡಿದ ಕಾರಣಕ್ಕೆ ಸೋಮಣ್ಣ ಅವರಿಗೆ ಆ ಅವಕಾಶ ನೀಡಲಾಯಿತು. ಅವರೂ ಸಹ ನಮ್ಮ ರಾಜ್ಯದವರು. ಆದರೆ ನಾವು ನಮ್ಮ ರಾಜ್ಯದ ಬಗ್ಗೆ ಅವಕಾಶ ಸಿಕ್ಕಾಗ ಪ್ರಧಾನಿ ಅವರ ಬಳಿ ಹೇಳಬೇಕಲ್ಲವೇ? ಈ ಕಾರಣಕ್ಕೆ ನಾನು ಅವರಿಗೆ ಮನವಿ ನೀಡಿ ಅನುದಾನದ ಬಗ್ಗೆ ಮಾತನಾಡಿದ್ದೇನೆ.” ಎಂದು ತಿಳಿಸಿದರು.

“1985 ರಲ್ಲಿ ಚುನಾವಣೆಗೆ ಸ್ಪರ್ಧಿಸಿದವನು ನಾನು. 1989 ರಲ್ಲಿ ವಿಧಾನಸೌಧದ ಮೆಟ್ಟಿಲು ಹತ್ತಿದವನು. ನಾನು ಅಷ್ಟು ಉನ್ನತ ಸ್ಥಾನಕ್ಕೆ ತೆರಳದೇ ಇರಬಹುದು, ಆದರೆ ನಾನೊಬ್ಬ ಹಿರಿಯ ನಾಯಕ. ವಯಸ್ಸು ಚಿಕ್ಕದಿರಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ ನನಗೂ ಅನುಭವವಿದೆ” ಎಂದರು.

ಶಿಕ್ಷಣ ಸಂಸ್ಥೆಗಳು ಇರುವುದು ಸಮಾಜ ಸೇವೆಗೆ ಹೊರತು ಹಣ ಮಾಡಲು ಅಲ್ಲ

“ನಮ್ಮದು ಮೂರು ಶಾಲೆಗಳಿದ್ದು, ನಮ್ಮ ಮಕ್ಕಳು ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಈ ಬಗ್ಗೆ ದೊಡ್ಡ ಆಲಹಳ್ಳಿ ಶಾಲೆಗೆ ತೆರಳಿ ನೀವೇ ಪರಿಶೀಲಿಸಬಹುದು. ನಮ್ಮ ಶಾಲೆಯಿಂದ ಪ್ರತಿ ತಿಂಗಳು ಪಾಠ ಮಾಡುವ ಅಧ್ಯಾಪಕರಿಗೆ ಹಣ ನೀಡುತ್ತಿದ್ದೇವೆ. ಬರೀ ಹಣ ಮಾಡಲು ಶಿಕ್ಷಣ ಸಂಸ್ಥೆಗಳು ಇರುವುದಲ್ಲ, ಸಮಾಜ ಸೇವೆಯೂ ಅವುಗಳ ಜವಾಬ್ದಾರಿ. ಕರ್ನಾಟಕದಲ್ಲಿ ಯಾರೇ ಎಷ್ಟೇ ದೊಡ್ಡ ಸಂಸ್ಥೆಗಳನ್ನು ನಡೆಸುತ್ತಿದ್ದರು ಅವೆಲ್ಲವೂ ಚಾರಿಟಬಲ್ ಸಂಸ್ಥೆಗಳು. ಈ ಚಾರಿಟಿಯನ್ನು ಬೇರೆಯವರಿಗೂ ಮಾಡಿ, ಜೊತೆಗೆ ಸರ್ಕಾರಕ್ಕೂ ಬೆಂಬಲ ನೀಡಿ ಎಂದು ಟೆಕ್ ಸಮ್ಮಿಟ್ ಸಂವಾದ ಸಂದರ್ಭದಲ್ಲಿ ನಾನು ಎಲ್ಲರಲ್ಲಿಯೂ ಮನವಿ ಮಾಡಿದೆ” ಎಂದು ಹೇಳಿದರು.

Related Articles

Back to top button