*ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಲೆಕ್ಕಕ್ಕೆ ಇಟ್ಟುಕೊಂಡಿಲ್ಲ: ಬಿಎಸ್ ವೈ ಮುನಿಸಿಗೆ ಕಿಚ್ಚು ಹಚ್ಚಿದ ಡಿಕೆಶಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದ ಆಡಳಿತ ಹಾಗೂ ವಿಪಕ್ಷ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ, ನಾಯಕರ ಅಸಮಾಧಾನದ ಬಗ್ಗೆ ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಜಿ ಸಿಎಂ ಯಡಿಯೂರಪ್ಪನವರ ರೋಷಕ್ಕೆ ಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.
ಬಿಜೆಪಿ ನಾಯಕರು ಮಾಜಿ ಸಿಎಂ ಯಡಿಯೂರಪ್ಪನವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಬಿಜೆಪಿ ಕಾರ್ಯಕ್ರಮಗಳಗೆ ಅವರಿಗೆ ಆಹ್ವಾನವನ್ನೇ ನೀಡುತ್ತಿಲ್ಲ. ಬಿಜೆಪಿಯಲ್ಲಿ ಬಿ ಎಸ್ ವೈ ಮಾತ್ರವಲ್ಲ ಹಲವು ನಾಯಕರು ಒಳಗೊಳಗೆ ಕುದಿಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರಲ್ಲಿ ಭಿನ್ನಮತ ವಿಚಾರವಾಗಿ ಯಡಿಯೂರಪ್ಪ ಮಾತ್ರವಲ್ಲ, ಪಕ್ಷದಲ್ಲಿ ಒಬ್ಬರಿಗೊಬ್ಬರು ಕುದಿಯುತ್ತಿದ್ದಾರೆ. ಯಡಿಯೂರಪ್ಪನವರನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ನಿನ್ನೆ ಯಡಿಯೂರಪ್ಪನವರು ಆಡಿದ ಮಾತಿನಲ್ಲೇ ಗೊತ್ತಾಗುತ್ತಿತ್ತು. ಅವರ ನೋವು, ದುಗುಡ ಏನು ಎಂದು ಎಲ್ಲವೂ ವ್ಯಕ್ತವಾಗುತ್ತಿತ್ತು. ಈ ಹಿಂದೆ ಸಚಿವ ಮಾಧುಸ್ವಾಮಿ ಹೇಳಿದ್ದರು ಚುನಾವಣೆವರೆಗೆ ಸರ್ಕಾರವನ್ನು ತಳ್ಳಿಕೊಂಡು ಹೋಗುತ್ತಿದ್ದೇವೆ ಎಂದು. ಹಾಗೇ ಯಡಿಯೂರಪ್ಪನವರನ್ನು ಚುನಾವಣೆವರೆಗೆ ತಳ್ಳಿಕೊಂಡು ಹೋಗುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಇದೇ ವೇಳೆ ಸಿಎಂ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದ ಡಿ.ಕೆ.ಶಿವಕುಮಾರ್, ಸಿಎಂ ಬೊಮ್ಮಾಯಿ ಸದಾ ಮಾರ್ಕೆಟ್ ನಲ್ಲಿರಬೇಕು ಹಾಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ. ಭ್ರಷ್ಟಾಚಾರ, ವೋಟರ್ ಐಡಿ ವಿಚಾರವಾಗಿ ಮಾತನಾಡಲಿ. ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಗಮನ ಬೇರೆಡೆಸೆಳೆಯಲು ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಸರ್ಕಾರದ ಭ್ರಷ್ಟಾಚಾರ, ವೋಟರ್ ಐಡಿ ಅಕ್ರಮ ಇದೆಲ್ಲವೂ ಚರ್ಚೆಗೆ ಬರಲಿ ಎಂದು ಹೇಳಿದರು.
*ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸಿಎಂ ಬೊಮ್ಮಾಯಿ ಕೆಂಡಾಮಂಡಲ*
https://pragati.taskdun.com/d-k-shivakumarstatmentcm-basavaraj-bommaireaction/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ