Kannada NewsKarnataka NewsLatestPolitics

*ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಮೊದಲು ಕ್ರಾಂತಿಯ ಕಿಚ್ಚು ಹಚ್ಚಿದ್ದೇ ಕರ್ನಾಟಕ; ಇಂದು ಕಾಂಗ್ರೆಸ್ ನೇತೃತ್ವದಲ್ಲಿ “ಇಂಡಿಯಾ” ಒಂದಾಗಿದೆ; ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 77ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, Freedom is never dear at any price. It is the breath of life. What would a man not pay for living?-Mahatma Gandhi

ಅಂದರೆ “ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಬದುಕಿನ ಉಸಿರು. ಹೀಗಾಗಿ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ?” ಎಂದರ್ಥ.

ಈ ಜಗತ್ತಿನಲ್ಲಿ ಯಾವುದಕ್ಕೆ ಬೇಕಾದರೂ ಬೆಲೆ ಕಟ್ಟಬಹುದು. ಆದರೆ ಸ್ವಾತಂತ್ರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೆ ಸ್ವಾತಂತ್ರ್ಯದ ಬೆಲೆ ಗೊತ್ತಾಗುವುದು ಅದಕ್ಕಾಗಿ ಹೋರಾಡಿದವರಿಗೆ ಮಾತ್ರ. ಅದಕ್ಕಾಗಿ ರಕ್ತ ಸುರಿಸಿದವರಿಗೆ ಮಾತ್ರ. ಅದಕ್ಕಾಗಿ ಪ್ರಾಣ ತೆತ್ತವರಿಗೆ ಮಾತ್ರ. ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದೇ ನಮ್ಮ ನಿಮ್ಮೆಲ್ಲರ ಹೆಮ್ಮೆ ಎಂದು ಹೇಳಿದರು.

ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರೂ, ಮೌಲಾನ ಅಜಾದ್, ಭಗತ್ ಸಿಂಗ್, ವಲ್ಲಭಬಾಯ್ ಪಟೇಲ್, ಡಾ ಬಿ ಆರ್ ಅಂಬೇಡ್ಕರ್, ಸರೋಜಿನಿ ನಾಯ್ಡು ಅವರ ಹೋರಾಟದ ಫಲವಾಗಿ ನಾವು ಸ್ವತಂತ್ರ ಭಾರತದ ಫಲಾನುಭವಿಗಳಾಗಿದ್ದೇವೆ.

ಈ ದೇಶಕ್ಕೆ ಸ್ವಾತಂತ್ರ್ಯ ತಂದದ್ದು, ದೇಶ ಕಟ್ಟಿದ್ದು, ಅಭಿವೃದ್ಧಿಯ ಪಥದಲ್ಲಿ ದೇಶವನ್ನು ನಿಲ್ಲಿಸಿದ್ದು ಕಾಂಗ್ರೆಸ್ ಪಕ್ಷ. Freedom is not a mere matter of political decision or new Constitution. It is of the mind and heart. if the mind narrows itself and is befogged and the heart is full of bitterness and hatred, then freedom is absent. – Jawaharlal Nehru

ಅಂದರೆ, “ಸ್ವಾತಂತ್ರ್ಯ ಎಂದರೆ ಅದು ಕೇವಲ ರಾಜಕೀಯ ನಿರ್ಧಾರವೂ ಅಲ್ಲ ಅಥವಾ ಹೊಸ ಸಂವಿಧಾನವಲ್ಲ. ಇದು ಮನಸ್ಸು ಹಾಗೂ ಹೃದಯಕ್ಕೆ ಸಂಬಂಧಿಸಿದ್ದು. ಒಂದು ವೇಳೆ ಮನಸ್ಸು ಸಂಕುಚಿತವಾಗಿದ್ದರೆ ಅಥವಾ ಗೊಂದಲದಲ್ಲಿದ್ದರೆ, ಹೃದಯ ಅಸೂಯೆ ಅಥವಾ ದ್ವೇಷದಿಂದ ತುಂಬಿದ್ದರೆ ಅಲ್ಲಿ ಸ್ವಾತಂತ್ರ್ಯ ಎಂಬುದು ಅಸ್ಥಿತ್ವದಲ್ಲಿರುವುದಿಲ್ಲ.” ಎಂದರ್ಥ.

ಸ್ವಾತಂತ್ರ್ಯ ದಿನ ಎಂದರೆ ನಮ್ಮ ಸಾಧನೆಯ ಇತಿಹಾಸ ನೆನಪಿಸಿಕೊಳ್ಳುವ ದಿನ. ವರ್ತಮಾನದಲ್ಲಿ ನಾವು ಹೇಗಿದ್ದೇವೆ ಎಂದು ಅವಲೋಕನ ಮಾಡಿಕೊಳ್ಳುವ ದಿನ.

ಇಂದು ನಾವು ಬರೀ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದರೆ ಸಾಲದು. ನಮ್ಮ ದೇಶದ ಸ್ವಾತಂತ್ರ್ಯ ಏನಾಗಿದೆ ಎಂದು ಅರಿಯಬೇಕಿದೆ.

ಮಣಿಪುರದಲ್ಲಿ ಮಾರಣ ಹೋಮ, ಹರಿಯಾಣದ ಗಲಭೆ, ಉತ್ತರ ಪ್ರದೇಶದ Lynching… ನೋಡಿದರೆ ನಮ್ಮ ದೇಶದ ಸ್ವಾತಂತ್ರ್ಯ ಏನಾಗಿದೆ? ಅದು ಯಾರ ಕೈಯಲ್ಲಿ ನಲುಗುತ್ತಿದೆ ಎಂದು ತಿಳಿಯುತ್ತದೆ.

ಸ್ವಾತಂತ್ರ್ಯದ ಮೂಲ ಗುರಿಯಾದ ಐಕ್ಯತೆ, ಸಮಗ್ರತೆ, ಸಹಬಾಳ್ವೆ, ಕೋಮು ಸೌಹಾರ್ದತೆ ಇಂದು ದಿಕ್ಕಾಪಾಲಾಗಿದೆ. ಅವರಿಗೆ ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ. ಏಕೆಂದರೆ ಅದಕ್ಕಾಗಿ ಹೋರಾಡಿದ ಇತಿಹಾಸ ಆ ಪಕ್ಷಕ್ಕಿಲ್ಲ. ಹೀಗಾಗಿ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ನಮ್ಮ ಯುವ ಪೀಳಿಗೆಗೆ ಅರಿವು ಮೂಡಿಸಬೇಕು. ಈ ವಿಚಾರದಲ್ಲಿ ನಾವು ಎಡವಿದ ಪರಿಣಾಮ, ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು ಗುಲಾಮರಾದವರನ್ನು ದೇಶಭಕ್ತ ಎಂದು ಪೂಜಿಸಲಾಗುತ್ತಿದೆ.

ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಮುಡಿಪಿಟ್ಟ ಗಾಂಧೀಜಿಯನ್ನು ಪ್ರಶ್ನೆ ಮಾಡಲಾಗುತ್ತಿದೆ. ಕೋಮುವಾದಿ ಹಾಗೂ ಸರ್ವಾಧಿಕಾರಿ ಮನಸ್ಥಿತಿ ದೇಶದ ಅಧಿಕಾರದ ಗದ್ದುಗೆಯಲ್ಲಿದೆ. ಈ ದುಷ್ಟಶಕ್ತಿಗಳು ಕೇವಲ ಸಂವಿಧಾನ ಬದಲಿಸಲು ಪ್ರಯತ್ನಿಸುತ್ತಿಲ್ಲ. ಅವರು ಇತಿಹಾಸವನ್ನೇ ತಿರುಚಲು ಪ್ರಯತ್ನಿಸುತ್ತಿದ್ದಾರೆ.

ಅಹಿಂಸೆ, ಶಾಂತಿ, ಸೌಹಾರ್ದತೆ, ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿರುವ ಈ ದೇಶದಲ್ಲಿ ಧರ್ಮ, ಜಾತಿ, ವರ್ಣದ ವಿಷ ಬೀಜ ಭಿತ್ತಲಾಗುತ್ತಿದೆ.

ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮ ಬ್ರಿಟೀಷರ ವಿರುದ್ಧ ನಡೆದಿತ್ತು, ಇಂದಿನ ಸಂಗ್ರಾಮ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯಬೇಕು. ಅಂದು ಕಾಂಗ್ರೆಸ್ ನೇತೃತ್ವದಲ್ಲಿ ದೇಶವೇ ಒಂದಾಗಿತ್ತು, ಇಂದು ಕಾಂಗ್ರೆಸ್ ನೇತೃತ್ವದಲ್ಲಿ “ಇಂಡಿಯಾ” ಒಂದಾಗಿದೆ. ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಮೊದಲು ಕ್ರಾಂತಿಯ ಕಿಚ್ಚು ಹಚ್ಚಿದ್ದೇ ಕರ್ನಾಟಕ.

1837 ರಲ್ಲಿ ನಡೆದ ಅಮರ ಸುಳ್ಯ ಹೋರಾಟ ಈ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ. 13 ದಿನಗಳ ಕಾಲ ಮಂಗಳೂರು ಸೇರಿದಂತೆ ಒಂದಷ್ಟು ಭಾಗಗಳನ್ನು ಹೋರಾಟಗಾರರು ಹಿಡಿತದಲ್ಲಿ ಇಟ್ಟು ಕೊಂಡಿದ್ದರು. ದುರಾದೃಷ್ಟವಶಾತ್ ಅಕ್ಟೋಬರ್ 31, 1837 ರಂದು ಈ ದಂಗೆಯ ಪ್ರಮುಖ ಹೋರಾಟಗಾರರನ್ನ ಗಲ್ಲಿಗೇರಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಈಸೂರು ಸ್ವಾತಂತ್ರ್ಯವನ್ನು ಘೋಷಿಸಿದ ದೇಶದ ಮೊದಲ ಗ್ರಾಮ. ಏಪ್ರಿಲ್ 25, 1938 ರಂದು ವಿದುರಾಶ್ವಥದಲ್ಲಿ ನಡೆದ ಗೋಲಿಬಾರ್ ಅನ್ನು ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಎನ್ನಬಹುದು.

ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಅವರ ನೇತೃತ್ವದಲ್ಲಿ 1930 ರಲ್ಲಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಯುತ್ತದೆ. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆಯಾಗಿದ್ದ ಕರ್ನಾಟಕದಲ್ಲೇ ಈಗ ಹೊಸ “ಇಂಡಿಯಾ” ಕೂಡ ಉದಯವಾಗಿದೆ. ಈ ಇಂಡಿಯಾಗೆ ಶಕ್ತಿ ತುಂಬಿ ದೇಶವನ್ನು ರಕ್ಷಣೆ ಮಾಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button