ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಸದ ತೇಜಸ್ವಿ ಸೂರ್ಯ ಕೋಮು ಆಯಾಮ ನೀಡಲು ಹೊರಟಿದ್ದಾರೆ. ತೇಜಸ್ವಿ ಸೂರ್ಯ ಸೇರಿದಂತೆ ಅವರ ಟೀಂ ನ ಮೂವರು ಶಾಸಕರನ್ನೂ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಅಂದು ಎಂಪಿ ತೇಜಸ್ವಿ ಸೂರ್ಯ ಕೇವಲ ಮುಸ್ಲೀಂ ಹೆಸರನ್ನು ಮಾತ್ರ ಓದಿ ಹೇಳಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುತ್ತಿದ್ದಾರೆ. ವಾರ್ ರೂಂ ನಲ್ಲಿ ಉಳಿದವರು ಇರಲಿಲ್ಲವೇ? ಉಳಿದ ಯಾರೊಬ್ಬರ ಹೆಸರನ್ನೂ ಪ್ರಸ್ತಾಪಿಸಿಲ್ಲ ಯಾಕೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಸಿಎಂ ಕೊರೊನಾ ಮುಕ್ತರಾಗಿ 3ದಿನಕ್ಕೆ ವಾಪಸ್ ಬರುತ್ತಾರೆ. ನಾನು ಕೂಡ ಕೊರೊನಾ ಮುಕ್ತನಾಗಿ ಬಂದಿದ್ದೇನೆ. ಆದರೆ ಸರ್ಕಾರಿ ಆಸ್ಪತ್ರೆಗೆ ದಾಖಲಾದವರು ವಾಪಸ್ ಬರುತ್ತಿಲ್ಲ. ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ಆಕ್ಸಿಜನ್ ನಿಂದ ಹಿಡಿದು ಬೆಡ್ ವರೆಗೂ ತಾವೇ ಹಗರಣಗಳನ್ನು ನಡೆಸಿ ಅದನ್ನು ಬಯಲಿಗೆಳೆಯುವ ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೆಡ್ ಬ್ಲಾಕಿಂಗ್ ಹಗರಣ ತನಿಖೆಗೆ ಸಂದೀಪ್ ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ನಮಗೆ ಯಾರ ಮೇಲೂ ನಂಬಿಕೆಯಿಲ್ಲ. ಮುಖರ್ಜಿ ಮೇಲೂ ನಂಬಿಕೆಯಿಲ್ಲ, ಅನುಚೇತ್ ಮೇಲೂ ಇಲ್ಲ ಸಂದೀಪ್ ಪಾಟೀಲ್ ಸೇರಿ ಯಾರೊಬ್ಬರ ಮೇಲೂ ಇಲ್ಲ. ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ದಾಖಲಾಗಿ ಒಂದುವರೆ ತಿಂಗಳಾಯಿತು. ಏನು ಮಾಡಿದರು? ಪ್ರಕರಣವನ್ನೆ ಮುಚ್ಚಿ ಹಾಕುವ ಯತ್ನ ನಡೆದಿದೆ. ಬಿಜೆಪಿ ಸರ್ಕಾರದ ಮುಖ್ಯ ಅಜೆಂಡಾವೆ ಗುಳುಂ ಮಾಡುವುದು ಏನೇ ಕೊಟ್ಟರೂ ಗುಳುಂ ಮಾಡುತ್ತಾರೆ. ಕಂದಾಯ ಸಚಿವ ಅಶೋಕ್ ಅವರು ಅಲ್ಲೆಲ್ಲೋ ನಾಲ್ಕು ಎಕರೆ ಜಾಗ ನೀಡಿ ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ಹೆಣ ಸುಡಲು ವ್ಯವಸ್ಥೆ ಎಂದರು. ಪ್ರಶ್ನೆ ಮಾಡಿದರೆ ಉತ್ತರ ಕೊಡದೇ ಓಡಿ ಹೋಗುತ್ತಿದ್ದಾರೆ. ಉಳಿದ ಸಚಿವರು ಎಲ್ಲಿ ಹೋಗಿದ್ದಾರೆ. ಸಿಎಂ ಯಡಿಯೂರಪ್ಪನವರ ಶ್ರಮ ನಮಗೆ ಕಾಣುತ್ತಿದೆ. ಆದರೆ ಅವರಿಂದ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಮೇಲೆ ಜನರು ನಂಬಿಕೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಬೆಡ್ ವ್ಯವಸ್ಥೆ ಮಾಡಿಸಿದರೂ ಬದುಕಲಿಲ್ಲ ಜೀವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ