
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಶಾಸಕರದ್ದು ಒಂದಷ್ಟು ಬೇಡಿಕೆಗಳು, ತೊಂದರೆಗಳು ಇರುತ್ತವೆ, ಅವುಗಳನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಳ್ಳಬಾರದೇ? ಶಾಸಕರು ತಮ್ಮ ನೋವು ಸಮಸ್ಯೆ ಹೇಳಿಕೊಳ್ಳುವುದರಲ್ಲಿ ತಪ್ಪೇನಿದೆ? ಎಂದು ಉಪಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರು ಶಾಸಕ ಬಸವರಾಜ ರಾಯರೆಡ್ಡಿ ಅವರು ಸಿಎಂಗೆ ಬರೆದಿರುವ ಪತ್ರದ ವಿಚಾರವಾಗಿ ಕೇಳಿದ ಪಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ. ಕೆ. ಶಿವಕುಮಾರ್ ಅವರು ಪಕ್ಷದ ಒಳಗೆ ಶಿಸ್ತು ಇದೆ ಯಾವುದೇ ತೊಂದರೆ ಇಲ್ಲ. ಯಾವ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿಎಂದು ಸ್ಪಷ್ಟನೆ ನೀಡಿದರು.
ಇಸ್ರೋ ಸೂರ್ಯಯಾನಕ್ಕೆ ಶುಭವಾಗಲಿ:
ಇಸ್ರೋ ಸಂಸ್ಥೆ ಈಗ ಸೂರ್ಯಯಾನ ಯೋಜನೆಗೆ ಮುಂದಾಗಿರುವ ಬಗ್ಗೆ ಕೇಳಿದಾಗ, ಚಂದ್ರಯಾನದ ಯಶಸ್ಸಿನ ನಂತರ ಸೂರ್ಯಯಾನ ಮಾಡುತ್ತಿರುವ ಇಸ್ರೋಗೆ ಅಭಿನಂದನೆಗಳು. ಕರ್ನಾಟಕದಿಂದ ಭಾರತಕ್ಕೆ ಗೌರವ ತರುವಂತಹ ಕೆಲಸವನ್ನು ನಮ್ಮ ಇಸ್ರೋ ವಿಜ್ಞಾನಿಗಳು ಮಾಡುತ್ತಿದ್ದಾರೆ. ಪ್ರಯೋಗ, ಪ್ರಯತ್ನ, ಸಾಹಸ ಎಲ್ಲವನ್ನು ಮಾಡುತ್ತಿದ್ದಾರೆ. ಬಹಳ ಕಷ್ಟಪಟ್ಟು ತಮ್ಮ ಬುದ್ದಿ ಶಕ್ತಿಯನ್ನೆಲ್ಲಾ ಬಳಸಿ ಈ ಕೆಲಸ ಮಾಡುತ್ತಿರುವ ಅವರ ಮತ್ತೊಂದು ಸಾಹಸ ಯಶ ಕಾಣಲಿ” ಎಂದು ಶುಭ ಹಾರೈಸಿದರು.
ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆಗಳಿಗೆ ತೊಂದರೆಯಾಗಿ ಬಂದ್‌ಗೆ ಕರೆ ನೀಡಿದ್ದಾರೆ ಎನ್ನುವ ಪ್ರಶ್ನೆಗೆ “ಹೌದು ಖಾಸಗಿ ಬಸ್ ಮಾಲೀಕರಿಗೆ ತೊಂದರೆಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ನಾನು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರನ್ನು ಭೇಟಿಯಾಗಿ ಇದಕ್ಕೆ ಪರಿಹಾರ ಕಂಡು ಹಿಡಿಯುತ್ತೇವೆ.
ಅನೇಕ ಊರುಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಪರ್ಕವೇ ಇಲ್ಲ, ಅವರೆಲ್ಲಾ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ, ಆದ ಕಾರಣ ಒಂದು ಪರಿಹಾರ ಸೂತ್ರ ಕಂಡುಹಿಡಿಯಲಾಗುವುದು. ನನ್ನನ್ನೂ ಸಹ ಖಾಸಗಿ ಬಸ್ ಮಾಲೀಕರು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದ್ದರು, ಈ ಸಮಸ್ಯೆ ಬೇಗ ಬಗೆಹರಿಸಲಾಗುವುದು” ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ