*ಬರ್ತ್ ಟ್ಯಾಕ್ಸ್ಯೂ ಇಲ್ಲ, ಡೆತ್ ಟ್ಯಾಕ್ಸ್ಯೂ ಇಲ್ಲ, ಪಿತ್ರೊಡಾ ಹೇಳಿಕೆಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ: “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸ್ ಹಾಕಲ್ಲ, ಬರ್ತ್ ಟ್ಯಾಕ್ಸ್ ಹಾಕಲ್ಲ. ಸ್ಯಾಮ್ ಪಿತ್ರೊಡಾ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಗುರುವಾರ ಮಾಧ್ಯಮಗಳ ಜತೆ ಶಿವಕುಮಾರ್ ಅವರು ಮಾತುಕತೆ ನಡೆಸಿದರು.
ಈ ವೇಳೆ ಪಿತ್ರಾರ್ಜಿತ ಆಸ್ತಿಯಲ್ಲಿ 50% ಸರ್ಕಾರ ಪಡೆಯಬೇಕು ಎಂಬ ಪಿತ್ರೊಡಾ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇದು ಭಾರತ. ಈ ಬಗ್ಗೆ ಜೈರಾಮ್ ರಮೇಶ್ ಅವರು ನಮ್ಮ ಪಕ್ಷದ ಪರವಾಗಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಡೆತ್ ಟ್ಯಾಕ್ಸ್, ಬರ್ತ್ ಟ್ಯಾಕ್ಸ್ ಇಲ್ಲ. ಈ ದೇಶದ ಪರಂಪರೆ, ಪದ್ಧತಿ ಮುಂದುವರಿಯಲಿದೆ. ಯಾವುದೂ ಕೂಡ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಅದು ಸುಳ್ಳು, ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ದೇಶದಲ್ಲಿ ರಾಜಕಾರಣದಲ್ಲಿ ತಂದೆ ಹಾಗು ಪೂರ್ವಜರ ಹೆಸರಿನಲ್ಲಿ ಚುನಾವಣೆ ಮಾಡುತ್ತಿರುವಾಗ ಅವರ ಆಸ್ತಿ ವರ್ಗಾವಣೆಗೆ ಅವಕಾಶ ನೀಡುತ್ತಾರಾ? ದೇಶದ ಸಂಪತ್ತನ್ನು ನಗದೀಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂಬ ಮಾಧ್ಯಮ ವರದಿ ಓದಿದ್ದ ನೆನಪು ನನಗೆ. ನಮ್ಮ ಪ್ರನಾಳಿಕೆಯಲ್ಲಿರುವ ಅಂಶಗಳು ಮಾತ್ರ ಪಕ್ಷದ ನಿಲುವು. ಅದರಿಂದಾಚೆಗಿನ ಅಂಶಗಳಿಗೆ ಪಕ್ಷಕ್ಕೆ ಸಂಬಂಧವಿಲ್ಲ.
ಪಿತ್ರೋಡಾ ಅವರದು ವೈಯಕ್ತಿಕ ಅಭಿಪ್ರಾಯವೇ ಹೊರತು ಪಕ್ಷದ ಅಭಿಪ್ರಾಯ ಅಲ್ಲ. ಇಂತಹ ಚರ್ಚೆ ಪಕ್ಷದಲ್ಲಿ ಆಗಿಲ್ಲ. ಇಂತಹ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ” ಎಂದು ತಿಳಿಸಿದರು.
ಸೋಲಿನ ಅರಿವಾಗಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಸುಳ್ಳಿನ ಟೀಕೆ:
ಪ್ರಧಾನಮಂತ್ರಿಗಳು ದೇಶದೆಲ್ಲೆಡೆ ಪ್ರಚಾರ ಮಾಡುತ್ತಾ ಕರ್ನಾಟಕ ಹಾಗು ಕಾಂಗ್ರೆಸ್ ಪಕ್ಷದ ಬಗ್ಗೆ ದಾಳಿ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಪ್ರಧಾನಮಂತ್ರಿಗಳು ಹತಾಶೆ ಹೇಳಿಕೆ ನೀಡುತ್ತಿದ್ದಾರೆ. ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಅವರ ಪಕ್ಷದ ನೆಲೆ ಇಲ್ಲ. ಹೀಗಾಗಿ ಆಂಧ್ರದಲ್ಲಿ ಟಿಡಿಪಿ ಜತೆ ಮೈತ್ರಿ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಅವರ ಸರ್ಕಾರ ಇಲ್ಲ. ಕರ್ನಾಟಕದಲ್ಲೂ ಅವರು ಎರಡಂಕಿ ಸ್ಥಾನ ಪಡೆಯಲ್ಲ. ಹೀಗಾಗಿ ಹತಾಶೆಯಿಂದ ಮಂಗಳಸೂತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಅವರು ಪ್ರಧಾನಿ ಆದಾಗ 2,800 ರೂಪಾಯಿ ಇದ್ದ ಒಂದು ಗ್ರಾಂ ಚಿನ್ನ ಈಗ 7,500 ಆಗಿದೆ. ನಮ್ಮ ಮಹಿಳೆಯರು ಮಂಗಳಸೂತ್ರ ಹಾಕಲಾಗದಂತೆ ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ದಾರೆ. ಈ ವಿಚಾರವಾಗಿ ನಾನು ನಮ್ಮ ಪಕ್ಷಕ್ಕೆ ಒಂದು ಸಲಹೆ ನೀಡುತ್ತಿದ್ದೇನೆ. ನಮ್ಮ ದೇಶ, ಧರ್ಮ ಕಾಪಾಡಿಕೊಳ್ಳಬೇಕು.
ಪ್ರಿಯಾಂಕ ಗಾಂಧಿ ಅವರು ಬೆಂಗಳೂರಿನಲ್ಲಿ ನನ್ನ ತಾಯಿ ದೇಶಕ್ಕಾಗಿ ತನ್ನ ಮಾಂಗಲ್ಯಸೂತ್ರ ತ್ಯಾಗ ಮಾಡಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ. ಇದನ್ನು ಮೋದಿ ಅವರು ಅರಿತುಕೊಳ್ಳಬೇಕು. ಅವರ ಸ್ಥಾನದ ಬಗ್ಗೆ ನಮಗೆ ಗೌರವವಿದೆ. ಜನ ಅವರಿಗೆ ಹತ್ತು ವರ್ಷಗಳ ಕಾಲ ಅವಕಾಶ ಮಾಡಿಕೊಟ್ಟಿದ್ದಾರೆ. ಜನ ಕೊಟ್ಟಿರುವ ಗೌರವವನ್ನು ಕಾಪಾಡಿಕೊಳ್ಳಬೇಕು. ಈ ರೀತಿ ದೇಶಕ್ಕೆ ಅಪಮಾನ ಮಾಡಬಾರದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡಂಕಿ ಸ್ಥಾನ ಪಡೆಯಲಿದೆ. ಹೀಗಾಗಿ ಬಿಜೆಪಿ ಅವರು ಸುಳ್ಳಿನ ಕಾರ್ಖಾನೆ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಪ್ರಣಾಳಿಕೆ ಬಗ್ಗೆ ಗೊತ್ತಿಲ್ಲ. ” ಎಂದು ತಿಳಿಸಿದರು.
ಮೊದಲ ಹಂತದ ಚುನಾವಣೆ ನಂತರ ಇಂತಹ ಹೇಳಿಕೆಗಳು ಹೆಚ್ಚಾಗಿರುವ ಬಗ್ಗೆ ಕೇಳಿದಾಗ, “ತಮಿಳುನಾಡಿನ ನಮ್ಮ ಸ್ನೇಹಿತರು ನನ್ನ ಭೇಟಿಗೆ ಬಂದಿದ್ದರು. 40ಕ್ಕೆ 40 ಸೀಟು ಕಾಂಗ್ರೆಸ್ ಬೆಂಬಲಿತ ಮೈತ್ರಿಗೆ ಸಿಗಲಿದೆ. ಕೇರಳದಲ್ಲೂ ಇದೇ ವಾತಾವರಣ ಇದೆ” ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿ:
ಐಟಿ ಅಧಿಕಾರಿಗಳು ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದು, ನಮ್ಮ ನಾಯಕರನ್ನು ಹೆದರಿಸುತ್ತಿದ್ದಾರೆ. ಅವರ ಬಳಿ ಸಿಕ್ಕ ಹಣ ಕಾಂಗ್ರೆಸ್ ಪಕ್ಷ ಹಾಗು ಡಿ.ಕೆ. ಶಿವಕುಮಾರ್ ಅವರ ಹಣ ಎಂದು ಹೇಳಲು ಒತ್ತಾಯ ಮಾಡುತ್ತಿದ್ದಾರೆ. ಇಡೀ ದಿನ ಅವರನ್ನು ಕೂರಿಸಿಕೊಂಡು ಆ ನಾಯಕರು ಚುನಾವಣೆ ಮಾಡದಂತೆ ತಡೆಯುತ್ತಿದ್ದಾರೆ. ಅವರು ಬಿಜೆಪಿಯ ಯಾವುದಾದರೂ ಒಬ್ಬ ನಾಯಕರ ಮನೆಗೆ ಹೋಗಿದ್ದಾರಾ? ಬಿಜೆಪಿ ದುಡ್ಡು ಹಂಚುತ್ತಿರುವುದು ಗೊತ್ತಿಲ್ಲವೆ? ಆದರೂ ಬಿಜೆಪಿ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ದಾಳಿ ಮಾಡಲಾಗುತ್ತಿದೆ” ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ:
ನಾಳೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಮುಂದೆಯೂ ಪ್ರತಿಯೊಬ್ಬರ ಬದುಕು ಬದಲಾವಣೆ ತರಲು ಕೆಲಸ ಮಾಡಲಿದೆ. ನಮ್ಮ ಕಾಂಗ್ರೆಸ್ ಪಕ್ಷ ಮಹಾಲಕ್ಷ್ಮಿ ಯೋಜನೆ ಮೂಲಕ ಮಹಿಳೆಯರಿಗೆ ವಾರ್ಷಿಕ 1 ಲಕ್ಷ, 25 ಲಕ್ಷ ವರೆಗೂ ಆರೋಗ್ಯ ವಿಮೆ, ನಿರುದ್ಯೋಗಿಗಳಿಗೆ ವಾರ್ಷಿಕ 1 ಲಕ್ಷ ಶಿಷ್ಯ ವೇತನ, ನಗರದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುತ್ತೇವೆ. ಮತದಾರರು ಈ ಭರವಸೆಗಳ ಬಗ್ಗೆ ಆಲೋಚಿಸಿ ಬೆಂಬಲ ನೀಡಬೇಕು. ಬಿಜೆಪಿ ಸರ್ಕಾರ ನುಡಿದಂತೆ ನಡೆದಿಲ್ಲ. ರಾಜ್ಯಕ್ಕೆ ಖಾಲಿ ಚೊಂಬು ಕೊಟ್ಟಿದ್ದಾರೆ. ಜನರೂ ಇದನ್ನು ಅರ್ಥ ಮಾಡಿಕೊಂಡಿದ್ದಾರೆ” ಎಂದು ಮತದಾರರಲ್ಲಿ ಮನವಿ ಮಾಡಿದರು.
ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಜನರಿಂದ ಯಾವ ಪ್ರತಿಕ್ರಿಯೆ ಬರುತ್ತಿದೆ ಎಂದು ಕೇಳಿದಾಗ, “ರಾಜ್ಯದಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಜನರು ಭಾರಿ ಪ್ರಮಾಣದ ಬೆಂಬಲ ನೀಡುತ್ತಿದ್ದಾರೆ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ