Kannada NewsKarnataka NewsLatest

ಮರಗಳ ಸ್ಥಳಾಂತರ; ಜಿಲ್ಲಾಧಿಕಾರಿ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಸ್ತೆ ಅಗಲೀಕರಣ ವೇಳೆ ತೆರವುಗೊಳಿಸಿದ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಿ ಪೀರನವಾಡಿ ಕೆರೆಯ ಸುತ್ತಲೂ ನೆಟ್ಟು ಅವುಗಳನ್ನು ಪೋಷಿಸುತ್ತಿರುವುದನ್ನು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಖುದ್ದಾಗಿ ಪರಿಶೀಲಿಸಿದರು.
ಪೀರನವಾಡಿ ಕೆರೆಗೆ ಸೋಮವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಮರಗಳ ಸ್ಥಳಾಂತರ ಮತು ಅವುಗಳ ಪೋಷಣೆಯ ಕುರಿತು ಮಾಹಿತಿ ಪಡೆದುಕೊಂಡರು.
ಅಭಿವೃದ್ಧಿಯ ನಾಗಾಲೋಟದ ಪ್ರಸ್ತುತ ದಿನಗಳಲ್ಲಿ ರಸ್ತೆ ಅಗಲೀಕರಣ ಮತ್ತಿತರ ಅಭಿವೃದ್ಧಿ ಕೆಲಸಕ್ಕೆ ಮರಗಳನ್ನು ಕಡಿಯಲಾಗುತ್ತಿದೆ. ಆದರೆ ಅನಿವಾರ್ಯವಾಗಿ ತೆರವುಗೊಳಿಸಬೇಕಾದ ಬೃಹತ್ ಮರಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ.
ಬೃಹತ್ ಮರಗಳನ್ನು ಸ್ಥಳಾಂತರಿಸುವ ಮೂಲಕ ಲೋಕೋಪಯೋಗಿ ಇಲಾಖೆ ಮತು ವಿವಿಧ ಸಂಘ-ಸಂಸ್ಥೆಗಳು
ಪರಿಸರ ಕಾಳಜಿಯನ್ನು ಪ್ರದರ್ಶಿಸಿವೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಲಮೂಲ ರಕ್ಷಣೆಗೆ ಸೂಚನೆ:

ಪೀರನವಾಡಿ ಕೆರೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಸುಕೊಂಡ ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು, ಕೆರೆಯ ಜಲಮೂಲ ರಕ್ಷಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆರೆಯ ದಂಡೆಯ ಮೇಲೆ ನಳನಳಿಸುತ್ತಿರುವ ಆಲದ ಮರಗಳನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಕೆರೆಯ
ಅಭಿವೃದ್ಧಿಯ ಜತೆಗೆ ಮಳೆಗಾಲದಲ್ಲಿ ಕೆರೆಗೆ ನೀರು ಸರಾಗವಾಗಿ ಹರಿದು ಬರುವಂತೆ ಎಚ್ಚರಿಕೆ ವಹಿಸಬೇಕು.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆರೆಯ ಸುತ್ತಲೂ ಉದ್ಯಾನ ಹಾಗೂ ವಾಕಿಂಗ್ ಪಥ ನಿರ್ಮಿಸುವಂತೆ
ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಆರ್.ಮುನವಳ್ಳಿ ಹಾಗೂ
ಸಹಾಯಕ ಎಂಜಿನಿಯರ್ ಎಸ್.ಕೆ.ಎಂಟೆತ್ತನವರ ಅವರು, ಮರಗಳ ಸ್ಥಳಾಂತರ ಕುರಿತು ವಿವರಿಸಿದರು.
ಬಾಕ್ಸೈಟ್ ರಸ್ತೆ ಅಗಲೀಕರಣಕ್ಕೆ ಒಟು ೩೦ ಮರಗಳನ್ನು ತೆರವುಗೊಳಿಸಲು ಲೋಕೋಪಯೋಗಿ ಇಲಾಖೆ ನಿರ್ಧರಿಸಿತು .
ಆ ಪ್ರಕಾರ ೧೯ ಮರಗಳನ್ನು ಪೀರನವಾಡಿ ಕೆರೆಯ ದಂಡೆಗೆ ಸ್ಥಳಾಂತರಿಸಲಾಗಿದೆ.
ಮರಗಳ ಸ್ಥಳಾಂತರಕ್ಕೆ ಅಗತ್ಯವಾದ ಜೆಸಿಬಿ, ಲಾರಿ ಮತ್ತಿತರ ಸಲಕರಣೆಗಳು ಹಾಗೂ ಸಾರಿಗೆ ವೆಚ್ಚ ಸೇರಿದಂತೆ ಪ್ರತಿ
ಮರದ ಸ್ಥಳಾಂತರಕ್ಕೆ ೧೮ ಸಾವಿರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಪರಿಸರಪ್ರೇಮಿಯಾಗಿರುವ ಧಾರವಾಡದ ಅಸ್ಲಂ ಅಬ್ಬಿಹಾಳ ಅವರ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ
ಸಹಕಾರದೊಂದಿಗೆ ಸ್ಥಳಾಂತರ ಕಾರ್ಯ ಕೈಗೊಳ್ಳಲಾಗಿತ್ತು. ನಿರೀಕ್ಷೆಯಂತೆ ಎಲ್ಲ ಮರಗಳೂ ಬೆಳೆಯುತ್ತಿದ್ದು, ಅವುಗಳ ಪೋಷಣೆಯ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದು ಎಸ್.ಕೆ.ಎಂಟೆತ್ತನವರ ವಿವರಿಸಿದರು.
ಜಿಲ್ಲಾಧಿಕಾರಿಗಳ ಜತೆ ತೆರಳಿ ಮರಗಳ ಸ್ಥಳಾಂತರ ಹಾಗೂ ಅವುಗಳ ಪೋಷಣೆಯ ಬಗ್ಗೆ ಮಾಹಿತಿ ಪಡೆಸುಕೊಂಡ ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ, ಮರಗಳ ಸ್ಥಳಾಂತರ ಮೂಲಕ ಪರಿಸರ ಕಾಳಜಿ ಪ್ರದರ್ಶಿಸಿದ ಲೋಕೋಪಯೋಗಿ ಇಲಾಖೆ ಮತ್ತು ಸಂಘ-ಸಂಸ್ಥೆಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮರಗಳ ಸ್ಥಳಾಂತರಕ್ಕೆ ನೆರವಾದ ಪರಿಸರ ಪ್ರೇಮಿ ಧಾರವಾಡದ ಅಸ್ಲಂ ಅಬ್ಬಿಹಾಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button