ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅರ್ಥರೈಟಿಸ್ ರೋಗಕ್ಕೆ ತುತ್ತಾಗಿ ಅಂಗವಿಕಲತೆಯಿಂದ ಬಳಲುತ್ತಿದ್ದ ಕಳೆದ ೭ ವರ್ಷಗಳಿಂದ ನಡೆದಾಡಲು ಕಷ್ಟಪಡುತ್ತಿದ್ದ ೨೧ ವರ್ಷದ ಯುವಕನಿಗೆ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಆಸ್ಪತ್ರೆಯ ಮೊಣಕಾಲು ಮತ್ತು ಚಪ್ಪೆ ಮರುಜೋಡಣಾ ವಿಭಾಗದ ಡಾ. ಸಾರಂಗ ಶೆಠೆ ಅವರು ಅತ್ಯಂತ ಕ್ಲಿಷ್ಟಕರವಾದ ಎರಡೂ ಬದಿಯ ಸಂಪೂರ್ಣ ಚಪ್ಪೆ(ಹಿಪ್) ಶಸ್ತ್ರಚಿಕಿತ್ಸೆಯ ಮೂಲಕ ಮರುಜೋಡಿಸಿ ಮೊದಲಿನಂತೆ ನಡೆದಾಡಲು ಅನುಕೂಲ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲ್ಯದಿಂದಲೇ ಅರ್ಥರೈಟಿಸ್ ರೋಗದಿಂದ ಬಳಲುತ್ತಿದ್ದ ಈ ಯುವಕ ಕಳೆದ ೮ ವರ್ಷಗಳಿಂದ ನಡೆದಾಡಲು ಸಾಧ್ಯವಾಗದೇ ನಿರಂತರವಾಗಿ ಸ್ಟಿರಾಯಿಡ್ ಸೇವನೆ ಮಾಡುತ್ತಿದ್ದ. ಆದ್ದರಿಂದ ಆತನ ಎಲಬು ಕೀಲುಗಳು ತೀವ್ರವಾಗಿ ಮೃದುವಾಗಿದ್ದವು. ಈ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅತ್ಯಂತ ಕ್ಲಿಷ್ಟಕರವಾಗಿತ್ತು.
ಆದರೂ ಕೂಡ ಡಾ ಸಾರಂಗ ಶೆಠೆ ಅವರು ಅದನ್ನು ಸವಾಲಾಗಿ ಸ್ವೀಕರಿಸಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಕೇವಲ ೩ ದಿನಗಳಲ್ಲಿ ಯುವಕ ಸಾಮಾನ್ಯರಂತೆ ನಡೆದಾಡಲು ಅನುಕೂಲ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ. ಸಾರಂಗ ಶೆಠೆ ಅವರಿಗೆ ಅರವಳಿಕೆ ತಜ್ಞವೈದ್ಯರಾದ ಡಾ. ಚೈತನ್ಯ ಕಾಮತ ಅವರು ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆಗೆ ಸಾಥ್ ನೀಡಿದರು. ಈ ರೀತಿಯ ಹೈಬ್ರೀಡ್ ಟೈಪ್ ಟೊಟಲ್ ಹಿಪ್ ರಿಪ್ಲೇಸಮೆಂಟ್ ಶಸ್ತ್ರಚಿಕಿತ್ಸೆಯನ್ನು ಕರ್ನಾಟಕ ಆರೋಗ್ಯ ಹಾಗೂ ಆಯುಷ್ಯಮಾನ ಭಾರತ ಯೋಜನೆಯಡಿ ಈ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೆರವೇರಿಸಲಾಗಿದೆ.
ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಸಾರಂಗ ಶೆಠೆ ಅವರನ್ನು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಡಾ. ಕ್ಲಿನಿಕಲ್ ಡೈರೆಕ್ಟರ ಆರ್ ಬಿ ನೇರ್ಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ರಜಿಸ್ಟ್ರಾರ ಡಾ. ವಿ ಎ ಕೋಠಿವಾಲೆ, ಕುಲಪತಿ ಡಾ. ವಿವೇಕ ಸಾವೋಜಿ ಸೇರಿದಂತೆ ಮುಂತಾದವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ