ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಗಾದಿಗಾಗಿ ಈಗಾಗಲೇ ಕಾಂಗ್ರೆಸ್ ನಲ್ಲಿ ಬಣ ರಾಜಕೀಯ ಭುಗಿಲೆದ್ದಿದ್ದು, ಈ ನಡುವೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕೆಪಿಸಿಸಿ ಆಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿರುವ ಡಿ.ಕೆ ಶಿವಕುಮಾರ್, ಈಗಾಗಲೇ ಸಿದ್ದರಾಮಯ್ಯ ಬಣ ಹೆಣೆದಿರುವ ತಂತ್ರಕ್ಕೆ ಕಂಗಾಲಾಗಿದ್ದು, ಈ ನಿಟ್ಟಿನಲ್ಲಿ ಡಿಕೆಶಿ ಸಿದ್ದರಾಮಯ್ಯ ಭೇಟಿ ಮಹತ್ವ ಪಡೆದುಕೊಂಡಿದೆ.
ನಿನ್ನೆ ನಡೆದ ರಾಜ್ಯ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಬಣದವರು ಲಿಂಗಾಯತ ಸಮುದಾಯದವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಪ್ರಸ್ತಾಪ ಮಾಡಿದ್ದು, ಈ ಮೂಲಕ ಮಾಜಿ ಸಚಿವ ಎಂ.ಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಲಿಂಗಾಯತ ಸಮುದಾಯಕ್ಕೆ ಕೆಪಿಸಿಸಿ ಗಾದಿ ನೀಡಿದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಹಾಗೂ ನಾಯಕರ ಓಲೈಕೆ ಸುಲಭ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ. ಅಲ್ಲದೆ ಮೂವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದೂ ಸಿದ್ದರಾಮಯ್ಯ ಬಣ ಅಭಿಪ್ರಾಯ ತಿಳಿಸಿದೆ ಎನ್ನಲಾಗಿದೆ.
ಈ ಎಲ್ಲಾ ಕಾರಣದಿಂದ ಕೆಪಿಸಿಸಿ ಆಧ್ಯಕ್ಷ ಸ್ಥಾನ ತಮ್ಮ ಕೈತಪ್ಪುವ ಸಾಧ್ಯತೆ ಹೆಚ್ಚಿದ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಇಂದು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮನವೊಲಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ