
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಸಂಕಷ್ಟದಿಂದ ಯಾರೂ ಧೈರ್ಯಗೆಡುವುದು ಬೇಡ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ. ಮತ್ತೊಮ್ಮೆ ನಾವೆಲ್ಲ ಪುಟಿದೇಳೋಣ. ನಮ್ಮ ದೇಶದ, ನಮ್ಮ ರಾಜ್ಯದ, ನಮ್ಮ ಬೆಳಗಾವಿಯ ಮಣ್ಣಿನ ಗುಣವೇ ಹಾಗಿದೆ. ಏನೇ ಕಷ್ಟ ಬಂದರು ನಾವು ಧೃತಿಗೆಡದೆ ಮತ್ತೆ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ರಾಜ್ಯ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಜನತೆಗೆ ಧೈರ್ಯ ತುಂಬಿದ್ದಾರೆ.
ಶನಿವಾರ ಸಂಜೆ ಫೇಸ್ ಬುಕ್ ಲೈವ್ ನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
6 ತಿಂಗಳ ಹಿಂದೆ ಪ್ರವಾಹ ಸಂಕಷ್ಟದಿಂದ ನಾವು ಇನ್ನೂ ಹೊರಗೆ ಬಂದಿಲ್ಲ. ಆಗ ನಿಮ್ಮೆಲ್ಲರ ಸಹಕಾರದಿಂದ ಅದನ್ನು ಯಶಸ್ವಿಯಾಗಿ ಎದುರಿಸಿದ್ದೇವೆ. ಈಗ ಮತ್ತೆ ಕೋವಿಡ್ 19ರ ದಾಳಿಯಾಗಿದೆ. ನಾವು ಈ ಸಂಕಷ್ಟದಿಂದಲೂ ಹೊರಗೆ ಬರಬೇಕು. ಪುಟಿದೇಳಬೇಕು. ಮುಂದಿನ 10 ವರ್ಷಕ್ಕೆ ಯೋಜನೆ ಬೇಕು. ಸರಕಾರ ವೈಜ್ಞಾನಿಕ ಯೋಜನೆ ರೂಪಿಸಲು ತಯಾರಿ ನಡೆಸಬೇಕು ಎಂದು ಅವರು ಹೇಳಿದರು.
ಇಂದು ಎಲ್ಲ ರೀತಿಯ ಬಿಸಿನೆಸ್ ಸಂಕಷ್ಟದಲ್ಲಿದೆ. ಇಂದಿನ ಸಂಕಷ್ಟದಿಂದಾಗಿ ಅನೇಕರು ಉದ್ಯೋಗ ಕಳೆದುಕೊಳ್ಳಬಹುದು. ಜನರ ಬಳಿ ದುಡ್ಡು ಕಡಿಮೆಯಾಗುತ್ತದೆ. ರೈತರ, ಕೂಲಿಕಾರ್ಮಿಕರ ಜನಜೀವನ ಊಹಿಸಲು ಸಾಧ್ಯವಿಲ್ಲ. ಸಣ್ಣವರಿಂದ ದೊಡ್ಡವರವರೆಗೆ ಎಲ್ಲರೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ರೈತರು ಹೊಸ ಬೆಳೆ ಬೆಳೆಯುವ ಹೊಸ್ತಿಲಲ್ಲಿದ್ದಾರೆ. ಅವರ ಸಹಾಯಕ್ಕೆ ನಾವೆಲ್ಲರೂ ನಿಲ್ಲಬೇಕು. ರೈತರನ್ನು ಬದುಕಿಸಿದರೆ ದೇಶ ಬದುಕುತ್ತದೆ. ಹಾಗಾಗಿ ನಾವೆಲ್ಲ ಅವರೊಂದಿಗೆ ನಿಲ್ಲಬೇಕಾಗಿದೆ. ದೇಶವನ್ನು ಕಟ್ಟುವ ಗುರಿ ನಮ್ಮ ನಿಮ್ಮ ಹೆಗಲಮೇಲಿದೆ ಎಂದು ಅವರು ಹೇಳಿದರು.
ಶಾಲೆಗಳು ಹೇಗೆ ನಡೆಯುತ್ತವೆ? ಮಕ್ಕಳ ಭವಿಷ್ಯವೇನು? ಎನ್ನುವ ಆತಂಕ ನಮಗಿದೆ. ಇತಿಹಾಸ ನೋಡಿದಾಗ ನಾವು ಇಂತಹ ಸಂಕಷ್ಟ ಬಂದ ನಂತರ ಪುಟಿದೇಳುತ್ತೇವೆ. ಇನ್ನಷ್ಟು ಉತ್ಸಾಹದಿಂದ ಮೇಲೇಳುತ್ತೇವೆ. ಹಾಗೆ ಮತ್ತೊಮ್ಮೆ ಎದ್ದು ಬದುಕು ಕಟ್ಟಿಕೊಳ್ಳೋಣ ಎಂದು ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.
ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಕೊರೋನಾ ವಿರುದ್ಧ ಹೋರಾಡುತ್ತಿದ್ದಾರೆ. ಅವರೂ ಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಗೌರವಧನ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ, ಸಂಬಂಧಿಸಿದ ಮಂತ್ರಿಗಳಿಗೆ ನಾನು ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು.
ರಾಜಕಾರಣದಲ್ಲಿ ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಟೀಕೆ ಬರುತ್ತದೆ. ಆದರೆ ಯುಪಿಎ ಸರಕಾರ ಮಾಡಿದ ಹಲವಾರು ಯೋಜನೆಗಳು, ಸಿದ್ದರಾಮಯ್ಯ ಸರಕಾರ ತಂದಿರುವ ಅನ್ನಭಾಗ್ಯ ಇಂದು ಉಪಯೋಗಕ್ಕೆ ಬಂದಿದೆ. ನಾನು ಈಗ ಯಾವುದೇ ರಾಜಕಾರಣ ಮಾಡುವುದಿಲ್ಲ, ಸಮಾಜಕಾರಣ, ಧರ್ಮಕಾರಣ ಮಾಡುತ್ತಿದ್ದೇನೆ. ಪ್ರವಾಹದಲ್ಲೂ ನಿಮ್ಮೊಂದಿಗೆ ಇದ್ದೆ. ನೀವೆಲ್ಲ ನನಗೆ ಸಹಕಾರ ಕೊಟ್ಟಿದ್ದೀರಿ. ಈಗಲೂ ನಿಮ್ಮೊಂದಿಗಿದ್ದೇನೆ. ಪ್ರತಿ ಹಂತದಲ್ಲಿ ನಾನು ನಿಮ್ಮ ಚಿಂತನೆಯಲ್ಲಿ ತೊಡಗಿದ್ದೇನೆ. ಪ್ರತಿ ನಿಮಿಷವೂ ಕ್ಷೇತ್ರದ ಜನರಿಗಾಗಿ ಯೋಚಿಸುತ್ತಿದ್ದೇನೆ. ನಿಮ್ಮ ಸಹಕಾರದಿಂದ ಏನಾದರೂ ಮಾಡಲು ಸಾಧ್ಯ. ಯಾರೂ ಧೈರ್ಯಗೆಡಬೇಡಿ. ನಾವೆಲ್ಲ ಇದ್ದೇವೆ. ಆದಷ್ಟು ಶೀಘ್ರ ಎಲ್ಲವೂ ಸರಿಯಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಧೈರ್ಯ ತುಂಬಿದರು.
ಹಿರೇಬಾಗೇವಾಡಿಯ ಜನರಿಗೆ ತಮ್ಮ ಊರಿಗೇ ಕೆಟ್ಟ ಹೆಸರು ಬರುತ್ತದೆ ಎನ್ನುವ ಆತಂಕ ಉಂಟಾಗಿದೆ. ನಿಮ್ಮ ಕಷ್ಟ, ಕಳಕಳಿ ನನಗೆ ಅರ್ಥವಾಗುತ್ತದೆ. ನಾನು ಈ ಕ್ಷೇತ್ರದ ಮನೆ ಮಗಳಾಗಿ ಸಾಧ್ಯವಾದಷ್ಟು ಕೆಲಸ ಮಾಡುತ್ತಿದ್ದೇನೆ. ಇಂದು ಮುಖ್ಯಮಂತ್ರಿಗಳೊಂದಿಗೆ ನಡೆದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಎಲ್ಲವನ್ನೂ ವಿವರಿಸಿದ್ದೇನೆ. ಅವರೂ ಇನ್ನೆರಡು ದಿನದಲ್ಲಿ ಎಲ್ಲವನ್ನೂ ಸರಿಪಡಿಸುವ ಭರವಸೆ ಕೊಟ್ಟಿದ್ದಾರೆ. ಇನ್ನೆರಡು ದಿನದಲ್ಲಿ ಸರಕಾರದಿಂದ ಸಹಕಾರ ಸಿಗುವ ಭರವಸೆ ಇದೆ. ಕಾಯೋಣ, ನೋಡಿಕೊಂಡು ಮುಂದಿನ ಯೋಚನೆ ಮಾಡೋಣ ಎಂದು ಅವರು ಸರಕಾರಕ್ಕೆ ಎಚ್ಚರಿಕೆಯ ದಾಟಿಯಲ್ಲಿ ನುಡಿದರು.
ಕೋವಿಡ್ – 19 ಸಂಪೂರ್ಣ ಹೊಗಬೇಕೆಂದರೆ ನಾವೆಲ್ಲ ಕೈ ಜೋಡಿಸಬೇಕು. ಎಲ್ಲರ ಸಹಕಾರ ಇಲ್ಲವಾದಲ್ಲಿ ಸಂಪೂರ್ಣ ಹೋಗುವುದಿಲ್ಲ. ನಮ್ಮ ಜೀವನ ಶೈಲಿಯನ್ನು ಇನ್ನು ಮುಂದೆ ಬದಲಾಯಿಸಿಕೊಳ್ಳೋಣ. ನಮ್ಮ ವಿಜ್ಞಾನಿಗಳ ಮೇಲೆ ವಿಶ್ವವೇ ಆಶಾಕಿರಣದಿಂದ ನೋಡುತ್ತಿದೆ. ಔಷಧ ಹುಡುಕುವವರೆಗೆ ನಾವೆಲ್ಲ ಎಚ್ಚರಿಕೆಯಿಂದಿರಬೇಕು. ಎಲ್ಲರೂ ಆರೋಗ್ಯದ ಕಡೆ ಗಮನಹರಿಸಿ, ಹಿರಿಯರ ಕಡೆ ಗಮನವಹಿಸಿ ಎಂದು ಸಲಹೆ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ