*ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಮರಳುವ ವಿಚಾರ; ಗೃಹ ಸಚಿವರು ಹೇಳಿದ್ದೇನು?*
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ’ಕೈ’ ಹಿಡಿಯುತ್ತಾರಾ ನಾಯಕರು…!
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ಶಾಸಕರಿಗೆ ನಾವು ಆಹ್ವಾನ ಕೊಟ್ಟಿಲ್ಲ ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ ದ್ಯೇಯೋದ್ಧೇಶ, ತತ್ವ ಸಿದ್ಧಾಂತವನ್ನು ಒಪ್ಪಿ ನಮ್ಮ ಪಕ್ಷಕ್ಕೆ ಯಾರೇ ಬಂದರೂ ಅವರಿಗೆ ಸ್ವಾಗತಿಸುತ್ತೇವೆ. ಬಿಜೆಪಿಯ ಯಾವ ಶಾಸಕರು ಬರುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬರುತ್ತಾರೆ ಎನ್ನುವ ಮಾತಿದೆ. ನಮಗೆ ಬೇರೆ ಪಕ್ಷದ ಶಾಸಕರನ್ನು ಕರೆದುಕೊಳ್ಳುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಗೆ ಬರುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರಬೇಕಾಗುತ್ತದೆ ಎಂದರು.
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋದವರಿಗೆ ಅಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಜೆಪಿಗೆ ವಲಸೆ ಹೋದ ಶಾಸಕರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ಮಾಹಿತಿ ಇಲ್ಲ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದ ಶಾಸಕರಿಗೆ ಅಸಮಾಧಾನ ಆಗಿದೆ ಎಂದು ಮಾಧ್ಯಮದಲ್ಲಿ ನೋಡಿದ್ದೇವೆ. ಆದರೆ ಅದು ಸತ್ಯ ಇದ್ದರೆ ನಮ್ಮಲ್ಲಿ ಬರಬಹುದು. ಸರಕಾರ ಉಳಿಸಲು ಬೇರೆಯವರ ಅನಿವಾರ್ಯತೆ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಭದ್ರವಾದ ಸರಕಾರ ಇದೆ. ಜನತೆಗೆ ನೀಡಿದ ಭರವಸೆಯನ್ನು ಒಂದೊಂದಾಗಿ ಈಡೇರಿಸುತ್ತಿದ್ದೇವೆ. ಬಿಜೆಪಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ ಸರಕಾರ ಬಹಳ ದಿನ ಇರುವುದಿಲ್ಲ ಎಂದು ಭವಿಷ್ಯ ನುಡಿದ್ದಾರೆ ಎನ್ನುವ ಪ್ರಶ್ನಗೆ ಉತ್ತರಿಸಿದ ಅವರು, ಯತ್ನಾಳ ಅವರ ಭವಿಷ್ಯ ಬಹಳ ನುಡಿದ್ದಾರೆ ಬಿಡಿ ಎಂದರಷ್ಟೆ.
ಬೆಳಗಾವಿ ಉದ್ಯಮಬಾಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿಕಲಚೇತನನ ಮೇಲೆ ಹಲ್ಲೆ ನಡೆಸಿದ ಪೊಲೀಸರ ಮೇಲೆ ಇಲ್ಲಿಯವರೆಗೂ ಕ್ರಮ ಜರುಗಿಸಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಇಂಥ ಪ್ರಕರಣ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದೇನೆ. ಜನಸ್ನೇಹಿ ಪೊಲೀಸ್ ನೀಡಬೇಕ ಎನ್ನುವ ಉದ್ದೇಶದಿಂದ ಎಲ್ಲ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಸಭೆ ಕರೆದು ಪರಿಶೀಲನೆ ನಡೆಸುತ್ತೇನೆ ಎಂದರು.
ಹಿಂಡಲಗಾ ಕಾರಾಗೃಹದಲ್ಲಿ ಅಕ್ರಮ ಹಾಗೂ ಸಿಬ್ಬಂದಿಗಳು ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಈ ಮೊದಲು ಹಾಗೆ ಇರಲಿಲ್ಲ. ಇತ್ತೀಚೆಗೆ ಇಂಥ ಘಟನೆಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಕಾರಾಗೃಹಕ್ಕೆ ಭೇಟಿ ನೀಡಲಿದ್ದೇನೆ ಎಂದರು.
ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರೇ ಚಿನ್ನ ಕದ್ದ ಪ್ರಕರಣ ತನಿಖೆ ಎಲ್ಲಿಯವರೆಗೆ ಬಂದಿದೆ ಎನ್ನುವ ಪ್ರಶ್ನೆಗೆ ಪ್ರತ್ರಿಕಿಯಿಸಿದ ಅವರು, ಈ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ತೀರ್ಮಾನ ಮಾಡಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ