Belagavi NewsBelgaum NewsKannada NewsKarnataka NewsLatestPolitics

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಾರದಿರಲು ಕಾರಣ ಬಿಚ್ಚಿಟ್ಟ ಡಾ.ಪ್ರಭಾಕರ ಕೋರೆ

ಪ್ರಗತಿವಾಹಿನಿ ಸುದ್ದಿ, ರಾಮದುರ್ಗ: ಮಹಾದೇವಪ್ಪ ಯಾದವಾಡ ಅವರಂತಹ ಹಲವರಿಗೆ ಟಿಕೆಟ್ ಕೊಡದೆ ದೂರವಿಟ್ಟಿದ್ದರಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರದೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತಾಯಿತು ಎಂದು ಮಾಜಿ ಸಂಸದ, ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದ್ದಾರೆ.

ರಾಮದುರ್ಗದಲ್ಲಿ ಶನಿವಾರ ತಮಗೆ ಮತ್ತು ನೂತನ ಸಂಸದ ಜಗದೀಶ ಶೆಟ್ಟರ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾದೇವಪ್ಪ ಯಾದವಾಡ ಮಾತ್ರವಲ್ಲಿ 6 ಬಾರಿ ಆಯ್ಕೆಯಾಗಿ, ಮುಖ್ಯಮಂತ್ರಿಗಳಾದವರು, ವಿರೋಧ ಪಕ್ಷದ ನಾಯಕರಾದವರು, ಪಕ್ಷದ ಅಧ್ಯಕ್ಷರಾದವರು ಜಗದೀಶ ಶೆಟ್ಟರ್. ಅಂತವರಿಗೇ ಟಿಕೆಟ್ ಕೊಡಲಿಲ್ಲ. ಇವರಷ್ಟೇ ಅಲ್ಲ, ಅನ್ನೂ ಅನೇಕರಿಗೆ ಟಿಕೆಟ್ ತಪ್ಪಿಸಿದರು. ಹಾಗಾಗಿ ಪಕ್ಷ ಆಡಳಿತಕ್ಕೆ ಬರುವ ಬದಲು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಗಿದೆ ಎಂದು ಕೋರೆ ಹೇಳಿದರು.

ಜಗದೀಶ ಶೆಟ್ಟರ್ ಅವರಿಗೆ ಭಾರತೀಯ ಜನತಾ ಪಾರ್ಟಿ ಕಟ್ಟಿದ ಶ್ರೇಯಸ್ಸು ಸಲ್ಲುತ್ತದೆ. ಅವರ ಕಾಕಾ ಜನಸಂಘದ ಕಾಲದಿಂದ ಪಕ್ಷದಲ್ಲಿದ್ದವರು. ಅಂತಹ ಪರಂಪರೆಯಿಂದ ಬಂದ ಅಂತವರಿಗೇ ಟಿಕೆಟ್ ತಪ್ಪಿಸುತ್ತಾರೆಂದರೆ ಇನ್ನು ಮಹಾದೇವಪ್ಪ ಯಾದವಾಡ, ನಾನು ಯಾವ ಲೆಕ್ಕ? ಆದರೂ ಪಕ್ಷ ಮತ್ತೊಮ್ಮೆ ಅವರನ್ನು ಪಕ್ಷಕ್ಕೆ ಸೇರಿಸಕೊಂಡು ಟಿಕೆಟ್ ನೀಡಿದೆ. ಹಾಗಾಗಿ ಬೆಳಗಾವಿಯ ಜನ ಅವರನ್ನು ಸಂಸತ್ತಿಗೆ ಆಯ್ಕೆ ಮಾಡಿ ಅವರ ಸೇವೆಯನ್ನು ಗುರುತಿಸಿದ್ದಾರೆ. ಇದನ್ನು ಮುಂದಾದರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಇಡೀ ಉತ್ತರ ಕರ್ನಾಟಕದ ಶಕ್ತಿ ತೋರಿಸುವ ತಾಕತ್ತು ಮಹಾದೇವಪ್ಪ ಯಾದವಾಡ ಅವರಲ್ಲಿದೆ. ಅವರನ್ನು ದೂರವಿಟ್ಟಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರಲಿಲ್ಲ. ಸರಕಾರ ಮಾಡಬೇಕೆಂದರೆ ಮಹಾದೇವಪ್ಪ ಯಾದವಾಡ ಅವರಂತವರನ್ನು ಹತ್ತಿರ ಇಟ್ಟುಕೊಳ್ಳಬೇಕು. ಅವರನ್ನು ಮೊದಲಿನಿಂದಲೂ ನಾನು ನೋಡುತ್ತಿದ್ದೇನೆ. ಆದರೆ ಯಾಕೆ ಟಿಕೆಟ್ ತಪ್ಪಿಸಲಾಯಿತು ಎನ್ನುವುದು ಈಗ ಬೇಡ, ಮುಂದೊಮ್ಮೆ ಹೇಳೋಣ ಎಂದು ಕೋರೆ ಹೇಳುತ್ತಿದ್ದಂತೆ, ಸೇರಿದ ಜನರು, ಹೇಳಿ ಹೇಳಿ ಎಂದು ಕೂಗಿದರು.

ಮುಂದೆ ಸಂದರ್ಭ ಬಂದಾಗ ಹೇಳುತ್ತೇನೆ, ಈಗ ಬೇಡ ಎಂದು ಕೋರೆ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button