*ಮಧುಮೇಹ, ಬೊಜ್ಜು ನಿರ್ವಹಣೆಗಾಗಿ ‘ಸೆಲೆವಿಡಾ ಜಿಎಲ್‌ಪಿ+’ ಬಿಡುಗಡೆ ಮಾಡಿದ ಡಾ. ರೆಡ್ಡೀಸ್ ಮತ್ತು ನೆಸ್ಲೆ ಹೆಲ್ತ್ ಸೈನ್ಸ್*

ಪ್ರಗತಿವಾಹಿನಿ ಸುದ್ದಿ: ಟೈಪ್ 2 ಮಧುಮೇಹ ಹಾಗೂ ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರಿಗಾಗಿ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ನೆಸ್ಲೆ ಇಂಡಿಯಾ ಲಿ.ನ ಜಂಟಿ ಉದ್ಯಮವಾದ ‘ನೆಸ್ಲೆ ಹೆಲ್ತ್ ಸೈನ್ಸ್ ಲಿ.’ ಹೊಸ ಪೌಷ್ಟಿಕಾಂಶದ ಉತ್ಪನ್ನವಾದ ‘ಸೆಲೆವಿಡಾ ಜಿಎಲ್‌ಪಿ+’ ಅನ್ನು ಬಿಡುಗಡೆ ಮಾಡಿದೆ.
ಮಧುಮೇಹ ಮತ್ತು ತೂಕ ಇಳಿಕೆಗಾಗಿ ನೀಡಲಾಗುವ ಜಿಎಲ್‌ಪಿ-1/ಜಿಐಪಿ ಚಿಕಿತ್ಸೆಯನ್ನು ಪಡೆಯುವ ರೋಗಿಗಳಿಗೆಂದೇ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಸ್ನಾಯುಗಳ ಆರೋಗ್ಯ ಕಾಪಾಡಲು ಮತ್ತು ಉತ್ತಮ ಪೋಷಕಾಂಶ ಒದಗಿಸಲು ಈ ಉತ್ಪನ್ನವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಕೇವಲ ಔಷಧಿಗಳನ್ನು ನೀಡುವುದಷ್ಟೇ ಅಲ್ಲದೆ, ರೋಗಿಗಳಿಗೆ ಸರಿಯಾದ ಪೌಷ್ಟಿಕಾಂಶ ಒದಗಿಸಿ ಅವರ ಸಂಪೂರ್ಣ ಆರೋಗ್ಯ ಸುಧಾರಿಸುವುದು ಈ ಉತ್ಪನ್ನದ ಉದ್ದೇಶವಾಗಿದೆ.
ಸಮಸ್ಯೆ ಏನು? ಭಾರತೀಯರಿಗೇ ಏಕೆ ಅಪಾಯ?
ವೈದ್ಯಕೀಯ ಅಧ್ಯಯನಗಳ ಪ್ರಕಾರ, ಮಧುಮೇಹ ಮತ್ತು ಬೊಜ್ಜು ಕಡಿಮೆ ಮಾಡುವ ಜಿಎಲ್‌ಪಿ-1/ಜಿಐಪಿ ಚಿಕಿತ್ಸೆ ಪಡೆಯುವಾಗ ರೋಗಿಗಳ ದೇಹದ ತೂಕ ಕಡಿಮೆಯಾಗುತ್ತದೆ. ಆದರೆ, ಈ ತೂಕ ನಷ್ಟದಲ್ಲಿ ಶೇ. 25 ರಿಂದ 40ರಷ್ಟು ಭಾಗ ಸ್ನಾಯುಗಳ ನಷ್ಟವಾಗಿರುತ್ತದೆ.
ಹಿರಿಯ ವೈದ್ಯರ ಪ್ರಕಾರ, ಭಾರತೀಯರಲ್ಲಿ ಮೂಲತಃ ಸ್ನಾಯುಗಳ ಪ್ರಮಾಣ ಕಡಿಮೆ ಇದ್ದು, ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ. ಜೊತೆಗೆ ಭಾರತೀಯರ ದೈನಂದಿನ ಆಹಾರದಲ್ಲಿ ಪ್ರೋಟೀನ್ ಅಂಶ ತೀರಾ ಕಡಿಮೆ ಇರುತ್ತದೆ (ದಿನಕ್ಕೆ ಕೇವಲ 0.6 ಗ್ರಾಂ/ಕೆಜಿ). ಇದರಿಂದಾಗಿ ಈ ಚಿಕಿತ್ಸೆ ಪಡೆಯುವ ಭಾರತೀಯರಿಗೆ ಸ್ನಾಯು ನಷ್ಟದ ಅಪಾಯ ಹೆಚ್ಚು. ಸ್ನಾಯುಗಳು ನಷ್ಟವಾದರೆ ಚಯಾಪಚಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದನ್ನು ತಡೆಯಲು ದಿನಕ್ಕೆ ಪ್ರತಿ ಕೆಜಿ ದೇಹದ ತೂಕಕ್ಕೆ 1.2 ರಿಂದ 1.5 ಗ್ರಾಂನಷ್ಟು ಪ್ರೋಟೀನ್ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಈ ಪ್ರೋಟೀನ್ ಕೊರತೆಯನ್ನು ನೀಗಿಸಲು ಹಾಗೂ ಸ್ನಾಯುಗಳನ್ನು ಕಾಪಾಡಲು ಪ್ರಸಿದ್ಧ ಮಧುಮೇಹ ತಜ್ಞರು ಮತ್ತು ಎಂಡೋಕ್ರಿನೋಲಾಜಿಸ್ಟ್ ಮಾರ್ಗದರ್ಶನದಲ್ಲಿ ‘ಸೆಲೆವಿಡಾ ಜಿಎಲ್‌ಪಿ+’ ಅನ್ನು ತಯಾರಿಸಲಾಗಿದೆ.

