
ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ಹಾಗೂ ಆತನ ಸಹಪಾಠಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸಹಪಾಠಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದ್ದು, ಕೆಂಗೇರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ತಮ್ಮ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವುದಾಗಿ ಸಾಮ್ರಾಟ್ ಸ್ನೇಹಿತ ಸಮೃದ್ಧ್ ಆರ್. ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದು, ಮತ್ತೊಂದು ಪ್ರಕರಣ ದಾಖಲಾಗಿದೆ.
ಸಾಮ್ರಾಟ್ ಸಹಪಾಠಿ ಸಮೃದ್ಧ್ ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದಾಗ ಮನೀಶ್ ಗೌಡ ಹಾಗೂ ಆತನ ಸ್ನೇಹಿತರು ಕಾರನ್ನು ಚೇಸ್ ಮಾಡಿ ಅಡ್ಡಹಾಕಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಸಮೃದ್ಧ್ ಆರ್‌ಆರ್ ನಗರ ಠಾಣೆಗೆ ದೂರು ನೀಡಿದ್ದಾರೆ.
ಕೆಂಗೇರಿ ಠಾಣೆಯಲ್ಲಿ ಮನೀಶ್ ಗೌಡ ದೂರು ದಾಖಲಿಸುತ್ತಿದ್ದಂತೆಯೇ, ಆರ್‌ಆರ್ ನಗರ ಠಾಣೆಯಲ್ಲಿ ಮನೀಶ್ ವಿರುದ್ಧವೇ ಪ್ರತಿದೂರು ದಾಖಲಾಗಿರುವುದು ಪ್ರಕರಣ ಮತ್ತೊಂದು ತಿರುವು ಪಡೆದಿದೆ. ಸದ್ಯ ಎರಡೂ ಠಾಣೆಗಳ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಜಿಪ್ಸಿ ಕಾರಲ್ಲಿ ಹೊರಟಿದ್ದ. ಆಗ ಆತನ ಮತ್ತೊಬ್ಬ ಸ್ನೇಹಿತ ಆರ್. ಆರ್. ನಗರದ ಮನೀಶ್ ಐ20 ಕಾರಲ್ಲಿ ಅತೀ ವೇಗವಾಗಿ ಕಾರು ಚಾಲನೆ ಮಾಡಿ ಇವರನ್ನು ಓವರ್ ಟೆಕ್ ಮಾಡಿದ್ದ. ಓವರ್ ಟೇಕ್ ಮಾಡಿದ್ದ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆಗಿದ್ದು, ನೂಕಾಟ ತಳ್ಳಾಟ ಆಗಿದೆ. ಈ ವೇಳೆ ಮನೀಶ್, ಸಾಮ್ರಾಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ನನ್ನನ್ನು ಕಾರಲ್ಲಿ ಅಪಹರಿಸಿಕೊಂಡು ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಮನೀಶ್ ಉಲ್ಲೇಖಿಸಿದ್ದ.



