ಪ್ರಗತಿವಾಹಿನಿ ಸುದ್ದಿ: 2024-25ನೇ ಸಾಲಿನ ಎಸ್ಎಸ್‌ಎಲ್‌ಸಿ ಪರೀಕ್ಷೆಗಳ ಪ್ರಕ್ರಿಯೆ ಕುರಿತು ಶಾಲಾ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.
ದಿನಾಂಕ 21.09.2023ರನ್ವಯ 2023- 24ನೇ ಸಾಲಿನಿಂದ ಜಾರಿಗೆ ಬರುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಪರೀಕ್ಷೆ-1, ಪರೀಕ್ಷೆ-2 ಮತ್ತು ಪರೀಕ್ಷೆ-3 ಎಂದು ಹೆಸರಿಸಿ, ಹಂತ ಹಂತವಾಗಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
2025ರ ಮಾರ್ಚ್/ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ಕ್ಕೆ ರಾಜ್ಯದ ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಪ್ರೌಢ ಶಾಲಾ/ ಕಾಲೇಜುಗಳಿಂದ (ಪ್ರೌಢ ಶಾಲಾ ವಿಭಾಗ) ಹಾಜರಾಗುವ ಅರ್ಹ ವಿದ್ಯಾರ್ಥಿಗಳನ್ನು ನೋಂದಾಯಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹಾಗೆಯೇ ಖಾಸಗಿ ಅಭ್ಯರ್ಥಿಗಳು ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಸಹ ಈ ಪರೀಕ್ಷೆಗೆ ನೋಂದಾಯಿಸಲು ಅರ್ಜಿಗಳನ್ನು ಶಾಲೆಗಳ ಮುಖಾಂತರ ಸಲ್ಲಿಸಬಹುದಾಗಿದೆ.
ಸದರಿ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯಿಂದ 2025ರ ಎಸ್‌ಎಸ್‌ಎಲ್ಸಿ ಪರೀಕ್ಷೆ-1ಕ್ಕೆ ಹಾಜರಾಗುವ ಅರ್ಹ ಶಾಲಾ ವಿದ್ಯಾರ್ಥಿಗಳ (CCERF), ಖಾಸಗಿ ಅಭ್ಯರ್ಥಿಗಳ (CCEPF) ಮತ್ತು ಪುನರಾವರ್ತಿತ ಅಭ್ಯರ್ಥಿಗಳ (CCERR, CCEPR) ವಿಷಯಗಳನ್ನು ಮಂಡಳಿಯ https://kseab.karnataka.gov.in ಜಾಲತಾಣದ ಶಾಲಾ ಲಾಗಿನ್ ಮೂಲಕ ಅಪ್‌ಲೋಡ್ ಮಾಡಲು ಕೆಳಕಂಡಂತೆ ಮಾರ್ಗಸೂಚಿ ಹೊರಡಿಸಲಾಗಿದೆ. ವಿದ್ಯಾರ್ಥಿಗಳ ನೋಂದಣಿಗೆ ಅಗತ್ಯವಿರುವ ಮಾಹಿತಿಗಳನ್ನು ಸಂಗ್ರಹಿಸಿಕೊಂಡು ಮಂಡಳಿಯು ತಿಳಿಸುವ ದಿನಾಂಕದಲ್ಲಿ ಶಾಲಾ ಲಾಗಿನ್‌ನಲ್ಲಿ ವಿದ್ಯಾರ್ಥಿಗಳ ನೋಂದಣಿಯನ್ನು ಮಾಡಬೇಕು ಎಂದು ಹೇಳಿದೆ.
ಹತ್ತು ವರ್ಷದ ಔಪಚಾರಿಕ ಶಿಕ್ಷಣವನ್ನು ಮುಗಿಸಿದ ಎಲ್ಲಾ ಶಾಲಾ ವಿದ್ಯಾರ್ಥಿಗಳು, ಹತ್ತನೇ ವರ್ಷದ ಅಂತ್ಯದಲ್ಲಿ ಎಸ್‌ಎಸ್‌ಎಲ್‌ಸಿ ಅಂತಿಮ ಪರೀಕ್ಷೆ ಬರೆಯಬೇಕು.
ಪರೀಕ್ಷೆಯು ವಿದ್ಯಾರ್ಥಿಯ ಆಂತರಿಕ ಮೌಲ್ಯಮಾಪನ ಹಾಗೂ ಬಾಹ್ಯ ಪರೀಕ್ಷಾ ವಿಧಾನದಿಂದ ಕೂಡಿರಬೇಕು. ಬಾಹ್ಯ ಪರೀಕ್ಷೆಗೆ 80% ಹಾಗೂ ಆಂತರಿಕ ಮೌಲ್ಯಮಾಪನಕ್ಕೆ 20% ಅಂಕಗಳನ್ನು ಮೀಸಲಿಡಲಾಗುತ್ತದೆ. ವಿದ್ಯಾರ್ಥಿಗಳ ಪ್ರಗತಿಯನ್ನು ಭಾಗ-ಎ (ಪಠ್ಯ ವಿಷಯಗಳು), ಭಾಗ-ಬಿ (ಸಹಪಠ್ಯ ವಿಷಯಗಳು) ಆಧಾರದ ಮೇಲೆ ಪರಿಗಣಿಸಬೇಕಾಗುತ್ತದೆ.
ಭಾಗ-ಎ ಯಲ್ಲಿ ಬರುವ ಪ್ರತಿ ವಿಷಯಗಳಿಗೆ ಅಂಕಗಳು ಹಾಗೂ ಶ್ರೇಣಿಗಳನ್ನು ಒಟ್ಟಾರೆ ಅಂಕಗಳು ಮತ್ತು ಶ್ರೇಣಿಯನ್ನು CGA (Cumulative Grade Average) ಆಧರಿಸಿ ನೀಡಲಾಗುತ್ತದೆ.
ಎಲ್ಲಾ ವಿಷಯಗಳಲ್ಲಿ ಬಾಹ್ಯ ಪರೀಕ್ಷೆಗೆ ಒಟ್ಟು 500 ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನಕ್ಕೆ 125 ಅಂಕಗಳನ್ನು ನಿಗದಿಪಡಿಸಿದೆ. ವಿಷಯವಾರು ಅಂಕಗಳ ವಿಂಗಡಣೆ ಮಾಡಲಾಗಿರುತ್ತದೆ ಎಂದು ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ