Kannada NewsKarnataka NewsLatest

ವಿದ್ಯುನ್ಮಾನ ಮತಯಂತ್ರ ಬಳಕೆ: ಸಾರ್ವಜನಿಕ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆ

ಜಿಲ್ಲೆಯಾದ್ಯಂತ ಇವಿಎಂ, ಮತದಾನ ಪ್ರಕ್ರಿಯೆ ಜಾಗೃತಿ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನ ಸಭೆ ಚುನಾವಣೆಯಲ್ಲಿ ಇವಿಎಂ ಮತಯಂತ್ರಗಳು ಯಾವ ರೀತಿ ಕಾರ್ಯನಿರ್ವಹಿಸುತ್ತವೆ ಮತ್ತು ಚುನಾವಣೆಯಲ್ಲಿ ಬಳಸಲಾಗುವ ಮತಯಂತ್ರಗಳ ಮೂಲಕ ಮತದಾನ ವಿಧಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.

ಜಿಲ್ಲೆಯಾದ್ಯಂತ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದ್ದು, ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ (ಮಾ.4) ಆಯೋಜಿಸಲಾಗಿದ್ದ ಪ್ರಾತ್ಯಕ್ಷಿಕೆಗೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಅವರು, ವಿದ್ಯುನ್ಮಾನ ಮತ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ಅವುಗಳ ಮೂಲಕ ಸಾರ್ವಜನಿಕರು ಹೇಗೆ ಮತ ಚಲಾವಣೆ ಮಾಡಬೇಕು ಎಂಬುದರ ಕುರಿತು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ, ಬಸ್ ನಿಲ್ದಾಣದಲ್ಲಿ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಹಾಗೂ ಕಡಿಮೆ ಮತದಾನ ಆಗಿರುವ ಕ್ಷೇತ್ರ, ಮತಗಟ್ಟೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ  ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.  ಅಣುಕು ಮತದಾನದ ಬಳಿಕ ಮತ ಎಣಿಕೆ ಮಾಡಿ ಪ್ರಾತ್ಯಕ್ಷಿಕೆಯನ್ನು ತೋರಿಸಲಾಗುವುದು. ಮತದಾರರು ತಮ್ಮ ‌ಮತಗಟ್ಟೆ ಮಾಹಿತಿಯನ್ನು ಕೂಡ ತಿಳಿಸಲಾಗುವುದು ಎಂದು ತಿಳಿಸಿದರು.

ಅದೇ ರೀತಿಯಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಎಲ್ಇಡಿ ಫಲಕಗಳ ಸಂಚಾರಿ ವಾಹನಗಳ ಮೂಲಕ ನಗರದಲ್ಲಿ ಸಂಚರಿಸಿ ಮತದಾರದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಮಾತಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹರ್ಷಲ್ ಭೋಯರ್ ಅವರು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಅವರಿಗೆ ಅರಿವು ಮೂಡಿಸಲು ಸಾರ್ವಜನಿಕ ವಲಯಗಳಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ.

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಗೆ ಈಗಲೂ ಅವಕಾಶ ಇರುತ್ತದೆ. ನಮೂನೆ 6 ಭರ್ತಿ ಮಾಡಿ ಹೆಸರು ಸೇರ್ಪಡೆ ಮಾಡಬಹುದು. ಹೊಸ ಮತದಾರ ನೋಂದಣಿ, ತಿದ್ದುಪಡಿಗೆ ಆನ್ ಲೈನ್ ಹಾಗೂ ಸ್ಥಳೀಯ ಬಿಎಲ್ ಓ ಗಳ ಮೂಲಕ ಕೂಡ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಇಓ ಹರ್ಷಲ್ ಭೋಯಲ್ ಅವರು ಮಾಹಿತಿ ನೀಡಿದರು..

ಕೇಂದ್ರ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಸಾರ್ವಜನಿಕರಿಂದ  ಅಣುಕು ಮತದಾನ ಮಾಡಿಸಲಾಯಿತು. ಮತದಾನ ಬಳಿಕ ವಿವಿಪ್ಯಾಟ್ ಮೂಲಕ ಬರುವ ಸ್ಲಿಪ್ ಗಳನ್ನು ತೋರಿಸಿ ಅವರ ಮತದಾನದ  ಕುರಿತು ಖಚಿತಪಡಿಸಲಾಯಿತು.

ಮಹಾನಗರ ಪಾಲಿಕೆ ಆಯುಕ್ತರಾದ ಡಾ.ರುದ್ರೇಶ್ ಘಾಳಿ, ಉಪ ಆಯುಕ್ತರಾದ ಭಾಗ್ಯಶ್ರೀ ಹುಗ್ಗಿ, ಮತ್ತಿತರ ಅಧಿಕಾರಿಗಳು ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button