Politics

*ಸಮೀಕ್ಷೆಗಳನ್ನು ಮೀರಿ ಐತಿಹಾಸಿಕ ಗೆಲುವು ಸಾಧಿಸಲಿದೆ ಬಿಜೆಪಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ*

ಪ್ರಗತಿವಾಹಿನಿ ಸುದ್ದಿ: ಚುನಾವಣಾ ಸಮೀಕ್ಷೆಗಳನ್ನು ಮೀರಿಸಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ ಎಂದು ಹೇಳಿದರು.

ಬಿಜೆಪಿ ಯಾವತ್ತೂ ಇದನ್ನು ಹೇಳುತ್ತಲೇ ಬಂದಿದೆ. ಆದರೆ, ಕೆಲವರು ಸಂಶಯ ವ್ಯಕ್ತಪಡಿಸುತ್ತಿದ್ದರು. ಈಗ ಚುನಾವಣಾ ಸಮೀಕ್ಷೆಗಳೇ NDA ಐತಿಹಾಸಿಕ ಗೆಲುವನ್ನು ಖಚಿತಪಡಿಸುತ್ತಿವೆ ಎಂದು ಜೋಶಿ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ನೇತೃತ್ವದಲ್ಲಿ NDA ಪ್ರಚಂಡ ಬಹುಮತದಿಂದ ಗೆಲ್ಲಲಿದೆ. ಕರ್ನಾಟಕದಲ್ಲೂ 25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಜನರ ದಿಕ್ಕು ತಪ್ಪಿಸುವಲ್ಲಿ, ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ವಾಸ್ತವವನ್ನೇ ಮರೆ ಮಾಚುತ್ತಾರೆ ಎಂದು ಆರೋಪಿಸಿದರು.

ಸಚಿವ ನಾಗೇಂದ್ರ ಬಂಧನವಾದರೆ ಎಲ್ಲ ಬಯಲಿಗೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ಬಂಧನವಾದರೆ ಎಲ್ಲದು ಬಯಲಿಗೆ ಬರಲಿದೆ ಎಂದು ಸಚಿವ ಜೋಶಿ ಹೇಳಿದರು.

ನಾಗೇಂದ್ರ ಬಂಧಿಸಿದಲ್ಲಿ ಈ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಸೇರಿದಂತೆ ಮತ್ಯಾರು, ಭಾಗಿಯಾಗಿದ್ದಾರೆ? ಅವರ ಪಾತ್ರ ಏನಿದೆ? ಎಂಬುದು ಗೊತ್ತಾಗಲಿದೆ. ಹಾಗಾಗಿ ರಾಜ್ಯ ಸರ್ಕಾರ ಮೊದಲು ಸಚಿವ ನಾಗೇಂದ್ರರನ್ನು ಬಂಧಿಸಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button