Kannada NewsKarnataka News

ನೀರಾವರಿ ಅಧಿಕಾರಿಗಳಿಗೆ ರೈತರಿಂದ ತರಾಟೆ

ಪ್ರಗತಿವಾಹಿನಿ ಸುದ್ದಿ, ಅಥಣಿ-ತಾಲೂಕಿನ ಐನಾಪುರ ಏತ ನೀರಾವರಿ ಯೋಜನೆ ಉಪಕಾಲುವೆಗಳಿಂದ ಇಲ್ಲಿಯವರೆಗೂ ಒಂದು ಹನಿ ನೀರು ನಮ್ಮ ಜಮೀನಿಗೆ ಬಂದಿಲ್ಲ ಎಂದು ಅಧಿಕಾರಿಗಳನ್ನು ಕವಲಗುಡ್ಡ ಗ್ರಾಮದ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಘಟನೆ ನಡೆದಿದೆ. 
 ಸಮೀಪದ ಕವಲಗುಡ್ಡ ಹಾಗೂ ಸಿದ್ದೇವಾಡಿ ಗ್ರಾಮದಲ್ಲಿ ಸರಿಯಾಗಿ ಮಳೆಯಾಗದ ಕಾರಣ ರೈತರು ನೀರಾವರಿ ಯೋಜನೆಯ ಕಾಲುವೆ ಮೂಲಕ ನೀರು ಹರಿದು ಬರುತ್ತದೆ ಎಂಬ ಆಶಾಭಾವನೆಯಿಂದ ಹೊಲಗಳಲ್ಲಿ ಬಿತ್ತನೆ ಕಾರ್ಯಮಾಡಿ ಉಪಕಾಲುವೆಗಳಿಂದ ನೀರು ಬರುವಿಕೆಗಾಗಿ ಕಾಯುತ್ತಿದ್ದರು.
 ಆದರೆ ತಿಂಗಳಾನುಗಟ್ಟಲೆ ಕಾದರೂ ನೀರು ಬರದಿರುವುದರಿಂದ ಆಕ್ರೋಶಗೊಂಡು ಹಿರಿಯ ಅಧಿಕಾರಿಗಳಿಗೆ ಕರೆಮಾಡಿ ಕೇಳಿದಾಗ ನೀರು ಬಿಟ್ಟಿರುವುದಾಗಿ ಹೇಳಿದರು. ಕೂಡಲೆ ರೈತರು ಖುದ್ದಾಗಿ ನೀವೆ ಬಂದು ಪರಿಶೀಲನೆ ಮಾಡಿ ಎಂದು ಹೇಳಿದಾಗ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ರೈತರು ನಿಜ ದರ್ಶನ ಮಾಡಿಸಿದರು.
ಉಪಕಾಲುವೆಗಳ ಮೂಲಕ ಯಾವಾಗ ನೀರು ಬಿಟ್ಟರೂ ಕೆಲವು ಪ್ರಭಾವಿಗಳು ತಮ್ಮ ಖಾಸಗಿ ಕೃಷಿ ಹೊಂಡಗಳನ್ನು ತುಂಬಿಕೋಳ್ಳುತ್ತಿದ್ದು ಇದನ್ನು ತಡೆದು ಮುಂದೆ ಹರಿಸಬೇಕಾದ ಅಧಿಕಾರಿಗಳು ತಡೆಯುವ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸಿದ್ದೇವಾಡಿ ಗ್ರಾಮ ಪಂಚಾಯತ ಸದಸ್ಯ ರಮೇಶ ವಾಘಮೋಡೆ ಆಕ್ರೋಶ ವ್ಯಕ್ತಪಡಿಸಿದರು.
ಈವೇಳೆ ಅಧಿಕಾರಗಳೊಂದಿಗೆ ವಾಗ್ವಾದಕ್ಕಿಳಿದ ರೈತರನ್ನು ಸಮಾಧಾನಪಡಿಸಿದ ಐನಾಪುರ ಏತ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿ ಅರುಣ ಯಲಗುದ್ರಿ ನಾಳೆಯಿಂದ ಉಪ ಕಾಲುವೆಗಳಿಗೆ ನೀರು ಹರಿಸುವುದಾಗಿ ಹೇಳಿದರು. ಇದಕ್ಕೆ ಸುಮ್ಮನಾಗದ ರೈತರು ಪ್ರತಿ ವರ್ಷ ನಮಗೆ ಇದೆ ರೀತಿ ಸಮಸ್ಯೆ ಆಗುತ್ತದೆ. ಯಾರೂ ನಮ್ಮಗೋಳು ಕೇಳುವುದಿಲ್ಲ. ನೀರು ಬರದಿದ್ದರೆ ನಮ್ಮ ಜಮೀನಲ್ಲಿ ಇರುವ ನಿಮ್ಮ ಕಾಲುವೆಗಳನ್ನು ಏಕೆ ಮಾಡಿದ್ದಿರಿ? ತೆಗೆದು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರೈತರಾದ ದೇವಪ್ಪ ಮಾನಗಾಂವೆ, ನಿಂಗಪ್ಪ ಕುಳ್ಳೋಳ್ಳಿ, ಬಾಳಪ್ಪ ನರೋಟ್ಟಿ, ರಾಜಕುಮಾರ ಮಾನಗಾಂವೆ ನಿಂಗಪ್ಪ ನರೋಟ್ಟಿ ಸುತ್ತಮುತ್ತಲಿನ ರೈತರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button