*ಮನೆ ಜಪ್ತಿ ಮಾಡಿ ಬಾಣಂತಿಯನ್ನು ಹೊರ ಹಾಕಿದ್ದ ಫೈನಾನ್ಸ್ ಕಂಪನಿ: ಬೀಗ ಮುರಿದು ಮನೆ ಒಳಗೆ ಕಳುಹಿಸಿದ ರೈತರು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಿನಲ್ಲಿ ಲೋನ್ ಕಟ್ಟಿಲ್ಲ ಎಂದು ಬಾಣಂತಿ ಸಹಿತಿ ಇಡೀ ಕುಟುಂಬವನ್ನೆ ಮನೆಯಿಂದ ಹೊರಗೆ ಹಾಕಿ ಖಾಸಗಿ ಫೈನಾನ್ಸ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ರೈತರು ಜಪ್ತಿ ಮಾಡಿದ ಮನೆಯ ಬೀಗ ಮುರಿದು ಅದೇ ಮನೆಯಲ್ಲಿ ಆಶ್ರಯಕ್ಕೆ ವ್ಯವಸ್ಥೆ ಮಾಡಿದ್ದಾರೆ.
ರೈತ ಶಂಕರಪ್ಪ ಗದ್ದಾಡಿ ಅವರು ಪಡೆದ ಸಾಲ ಮರುಪಾವತಿಸದ ಕಾರಣಕ್ಕೆ ಕೋರ್ಟ್ ಆದೇಶದಂತೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆಯನ್ನು ಜಪ್ತಿ ಮಾಡಿ ಕುಟುಂಬವನ್ನು ಹೊರ ಹಾಕಿದ್ದರು. ಇದರಿಂದಾಗಿ ಮಂಗಳವಾರ ರಾತ್ರಿ ಬಾಣಂತಿ, ನವಜಾತ ಶಿಶು ಸೇರಿದಂತೆ ಕುಟುಂಬದ 7 ಮಂದಿ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತ್ತು. ಮಾಹಿತಿ ತಿಳಿದ ರೈತ ಮುಖಂಡರು ಬೀಗ ತೆಗೆದು ಅದೇ ಮನೆಯಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಬಾಣಂತಿ ಮತ್ತು ಮಗುವಿಗೆ ಆಶ್ರಯ ಕಲ್ಪಿಸಿದ್ದರು. ಸಂಬಂಧಿಕರ ಮನೆಯಲ್ಲಿ ವಾಸವಿರುವುದಾಗಿ ಬಾಣಂತಿ ಕುಟುಂಬದವರು ತಿಳಿಸಿದ್ದರಿಂದ ಇಲಾಖೆಯಿಂದ ಆಹಾರ ಸಾಮಗ್ರಿ ನೀಡಲಾಗಿದೆ. ಮಗು ಮತ್ತು ತಾಯಿ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ