Belagavi NewsBelgaum NewsKannada NewsKarnataka News

*ಚಲಿಸುತ್ತಿದ್ದ ಲಾರಿಯಲ್ಲಿ ಕಾಣಿಸಿಕೊಂಡ ಬೆಂಕಿ: 620 ಚೀಲ ಗೋವಿನಜೋಳ ಸುಟ್ಟು ಭಸ್ಮ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಲಿಸುತ್ತಿದ್ದ ಲಾರಿಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು, ನೂರಾರು ಚೀಲ ಗೋವಿನಜೋಳ ಸಂಪೂರ್ಣ ಸುಟ್ಟ ಕರಕಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಭೀಕರ ಅಗ್ನಿ ದುರಂತ ನಡೆದಿದೆ. ನರಗುಂದದಿಂದ ಬೆಳಗಾವಿ ಕಡೆಗೆ 620 ಚೀಲ ಗೋವಿನಜೋಳ ತುಂಬಿಕೊಂಡು ಬರುತ್ತಿದ್ದ ಟ್ರಕ್, ಬೈಲಹೊಂಗಲ ತಾಲೂಕಿನ ಯರಡಾಲ ಕ್ರಾಸ್ ಬಳಿ ಬರುತ್ತಿದ್ದಂತೆ ಬೆಂಕಿಗೆ ಆಹುತಿಯಾಗಿದೆ. 

ಹುಬ್ಬಳ್ಳಿ ಮೂಲದ ಶರೀಫ ಅಹ್ಮದ್ ಮುಲ್ಲಾ ಅವರಿಗೆ ಸೇರಿದ ಈ ಟ್ರಕ್‌ನಲ್ಲಿ, ಬ್ಯಾಟರಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬಿಸಿಲಿನ ತಾಪಕ್ಕೆ ಬೆಂಕಿ ಕ್ಷಣಾರ್ಧದಲ್ಲಿ ಲಾರಿಯನ್ನೆಲ್ಲಾ ವ್ಯಾಪಿಸಿದ್ದು, ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗೋವಿನಜೋಳ ಸಂಪೂರ್ಣ ಭಸ್ಮವಾಗಿದೆ.

ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಚಾಲಕ ಲಾರಿಯಿಂದ ಕೆಳಕ್ಕೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೈಲಹೊಂಗಲ ಪೊಲೀಸರು, ಬೆಂಕಿ ನಂದಿಸಲು ಹರಸಾಹಸ ಪಟ್ಟರು. 

ಘಟನೆಯಿಂದಾಗಿ ರಸ್ತೆಯುದ್ದಕ್ಕೂ ದಟ್ಟವಾದ ಹೊಗೆ ಆವರಿಸಿದ್ದು, ಸಂಚಾರಕ್ಕೆ ಅಲ್ಪಕಾಲ ಅಡಚಣೆಯಾಗಿತ್ತು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

Related Articles

Back to top button