*ರಾಜ್ಯದ ಆರ್ಥಿಕತೆಗೆ ಮೀನುಗಾರಿಕೆ ಕೊಡುಗೆ ಅಪಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಆರ್ಥಿಕತೆಗೆ ಮೀನುಗಾರಿಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ರಾಜ್ಯ ಸರ್ಕಾರವೂ ಕೂಡಾ ಮೀನುಗಾರರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು ಮೀನುಗಾರರ ಹಿತಾಸಕ್ತಿ ಕಾಪಾಡುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಉಡುಪಿ ಜಿಲ್ಲಾಡಳಿತ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಮೀನುಗಾರಿಕೆಯಲ್ಲಿ ಜೀವರಕ್ಷಕ ಸಾಧನಗಳ ಪ್ರಾಮುಖ್ಯತೆ ಕುರಿತು ಅರಿವು ಮೂಡಿಸುವ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಮೀನುಗಾರರು ತಮ್ಮ ಜೀವದ ಹಂಗನ್ನೇ ತೊರೆದು ಸಮುದ್ರಕ್ಕಿಳಿದು ಮೀನುಗಾರಿಕೆ ಮಾಡುತ್ತಾರೆ ಎಂದರು.
ಮೀನುಗಾರರು ಕಡಲಿನಲ್ಲಿ ಹಗಲೂ ರಾತ್ರಿ ಲೆಕ್ಕಿಸದೆ ತಮ್ಮ ಜೀವವನ್ನು ಪಣಕಿಟ್ಟು ದುಡಿದು ತಮ್ಮ ಕುಟುಂಬವನ್ನು ಸಾಕುವುದಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳ ಸಧ್ಬಳಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹಲವು ಯೋಜನೆಗಳಡಿ ಮೀನುಗಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ. ಇದರ ಸದುಪಯೋಗವನ್ನು ಮೀನುಗಾರರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಳೆಗಾಲದ ಸಮಯದಲ್ಲಿ ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಮೀನುಗಾರರ ಕುಟುಂಬಗಳಿಗೆ ಜೀವನೋಪಾಯಕ್ಕಾಗಿ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ರಾಜ್ಯದ ವಂತಿಗೆಯನ್ನು ದ್ವಿಗುಣಗೊಳಿಸಲಾಗಿದೆ. ಮೀನುಗಾರರಿಗೆ ಪ್ರತೀ ವರ್ಷ ಜೀವರಕ್ಷಕ ಸಾಧನಗಳಾದ ಲೈಫ್ ಬಾಯ್ & ಲೈಫ್ ಜಾಕೆಟ್ ಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತಿದೆ ಎಂದರು.
ಮೀನುಗಾರರು ಸುರಕ್ಷಿತವಾಗಿ ಸಮುದ್ರಕ್ಕಿಳಿದು ಮೀನುಗಾರಿಕೆ ಮಾಡಬೇಕು, ಕಳೆದ 5 ವರ್ಷಗಳಲ್ಲಿ 140 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೀನುಗಾರಿಕೆ ಎಂದರೆ ಬೆಂಕಿ ಜೊತೆ ಸರಸವಾಡಿದಂತೆ, ಜೀವ ರಕ್ಷಕ ಗಳನ್ನು ಸೂಕ್ತವಾಗಿ ಬಳಸಿಕೊಂಡು ಮೀನುಗಾರಿಕೆ ಮಾಡಬೇಕು. ಸಿದ್ದರಾಮಯ್ಯನವರು ಈ ಹಿಂದೆ ಸಿಎಂ ಆಗಿದ್ದಾಗಲೂ ಮೀನುಗಾರರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು, ಈಗಲೂ ಸರ್ಕಾರ ಮೀನುಗಾರರ ಪರ ಇದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ
ಇದೇ ವೇಳೆ ಮೀನುಗಾರರಿಗೆ ನಿವೇಶನ ಹಕ್ಕು ಪತ್ರ ಹಾಗೂ ಮನೆ ಮಂಜೂರಾತಿ ಹಕ್ಕು ಪತ್ರವನ್ನು ಸಚಿವರು ವಿತರಿಸಿದರು. ಜೊತೆಗೆ ಉಳಿತಾಯ ಪರಿಹಾರ ಯೋಜನೆಯಡಿ ಫಲಾನುಭವಿಗಳಿಗೆ ತಲಾ ಮೂರು ಸಾವಿರದಂತೆ ಚೆಕ್ ವಿತರಣೆ, ಜೀವರಕ್ಷಕ ಸಾಧನಗಳನ್ನು ವಿತರಿಸಿದರು.
ಸಮಾರಂಭದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೆರೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಮೇಶ್ ಕಾಂಚನ್, ರಾಜ್ಯ ಸಂಕಷ್ಟ ಪರಿಹಾರ ಸಮಿತಿ ಸದಸ್ಯರಾದ ಮದನ್ ಕುಮಾರ್, ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ, ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ವಿವೇಕ್, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.