Kannada NewsLatest

ನೆರೆ ಸಂತ್ರಸ್ತರ ಪರಿಹಾರ – ನಾಗನೂರು ರುದ್ರಾಕ್ಷಿಮಠದಿಂದ 5 ಲಕ್ಷ ರೂ.

ನೆರೆ ಸಂತ್ರಸ್ತರ ಪರಿಹಾರ – ನಾಗನೂರು ರುದ್ರಾಕ್ಷಿಮಠದಿಂದ 5 ಲಕ್ಷ ರೂ.

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಬಸವಾದಿ ಶರಣರ ಸಮಾಜೋಧರ್ಮದ ವಿಶಿಷ್ಟ ಕ್ರಾಂತಿಯ ಆಶಯಗಳನ್ನು ಮತ್ತೆ ಜನಮಾನಸದಲ್ಲಿ ಅನುಷ್ಠಾನಗೊಳಿಸುವದೆ ಮತ್ತೆ ಕಲ್ಯಾಣ ಕಾರ್ಯಕ್ರಮದ ಮೂಲ ಆಶಯವಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ತೋಂಟದಾರ್ಯ ಶ್ರೀ ಸಿದ್ದರಾಮ ಸ್ವಾಮೀಜಿಗಳು ಹೇಳಿದರು.

ಗುರುವಾರದಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿ ಬಸವಾದಿ ಶರಣರ ಕ್ರಾಂತಿಯು ಜಗತ್ತಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿರುವ ಕ್ರಾಂತಿ. ವರ್ಗ-ವರ್ಣ, ಮೇಲು-ಕೀಳು ರಹಿತ, ಲಿಂಗತಾರತಮ್ಯ ರಹಿತ ಆ ಕ್ರಾಂತಿಯ ಆಶಯಗಳನ್ನು ನಾವು ಇಂದು ಮತ್ತೆ ಇಂದಿನ ಯುವ ಜನಾಂಗಕ್ಕೆ ತಲುಪಿಸಬೇಕಾಗಿದೆ. ಆ ಕ್ರಾಂತಿಯ ಆಶಯಗಳು ಈಡೇರುವದರಿಂದಲೇ ಸಮಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಈ ಆಶಯದೊಂದಿಗೆ ಸಹಮತ ವೇದಿಕೆಯ ಮೂಲಕ ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಆಗಷ್ಟ 1 ರಿಂದ ನಾಡಿನಾದ್ಯಂತ ಮತ್ತೆ ಕಲ್ಯಾಣ ಕಾರ್ಯಕ್ರಗಳು ಆರಂಭವಾಗಿವೆ. ಆಗಷ್ಟ 26 ರಂದು ಬೆಳಗಾವಿ ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದ ಅಂಗವಾಗಿ ಆಗಷ್ಟ 26 ರಂದು ಬೆಳಿಗ್ಗೆ 11 ಗಂಟೆಗೆ ಎಸ್.ಜಿ.ಬಾಳೇಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಜರುಗಲಿದೆ. ಡಾ.ಪಂಡಿತಾರಾಧ್ಯ ಸ್ವಾಮೀಜಿಗಳು, ತಾವು ಹಾಗೂ ಸಾಹಿತಿಗಳಾದ ಡಾ.ವಿ.ಎಸ್.ಮಾಳಿ ಮತ್ತು ಡಾ.ಅವಿನಾಶ ಕವಿ ಅವರುಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದರು.

ಮಧ್ಯಾಹ್ನ 3 ಗಂಟೆಗೆ ಮಹಾಂತ ಭವನದಿಂದ ಕೆಪಿಟಿಸಿಎಲ್ ಸಭಾಗೃಹದವರೆಗೆ ಸಾಮರಸ್ಯ ಮತ್ತು ಸಂತ್ರಸ್ತರ ನೆರವು ನಡಿಗೆ ನಡೆಯಲಿದೆ. ಸಾಮರಸ್ಯದ ಈ ನಡಿಗೆಯ ವೇಳೆ ನೆರೆಯ ಸಂತ್ರಸ್ತರಿಗಾಗಿ ದವಸ ಧಾನ್ಯಗಳು ಮತ್ತು ಹಣವನ್ನು ಸಂಗ್ರಹಿಸಲಾಗುವದು. ಜನರು ನೀಡುವ ನೆರವನ್ನು ಸಂತ್ರಸ್ತರಿಗೆ ತಲುಪಿಸಲಾಗುವದು ಎಂದರು.

ಸಂಜೆ 5 ಗಂಟೆಗೆ ಕೆಪಿಟಿಸಿಎಲ್ ಸಭಾಗೃಹದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯುವದು. ಡಾ.ಪಂಡಿತಾರಾಧ್ಯ ಶಿವಾಚಾರ್ಯರು, ಜಿಲ್ಲೆಯ ಅನೇಕ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಗಂಗಪ್ಪ ಮಾಳಗಿ ಅಧ್ಯಕ್ಷತೆ ವಹಿಸುವರು.

ಕಾಯಕ ಜೀವಿಗಳ ಕ್ರಾಂತಿ ಕುರಿತು ವೀರಣ್ಣ ರಾಜೂರ ಮತ್ತು ವಚನಕಾರ್ತಿಯರ ಲೋಕದೃಷ್ಟಿ ಕುರಿತು ಡಾ.ವಿನಯ ವಕ್ಕುಂದ ಉಪನ್ಯಾಸ ನೀಡಲಿದ್ದಾರೆ. ಸಭೆಯ ನಂತರ ವಚನ ರೂಪಕ ನೃತ್ಯ ಮತ್ತು ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಸುಮಾರು 5 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ನಾಗನೂರು ರುದ್ರಾಕ್ಷಿ ಮಠದ ಸಾವಳಗೀಶ್ವರ ದೇವರು, ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ, ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಶಂಕರ ಗುಡಸ್, ಅಶೋಕ ಮಳಗಲಿ, ಅರವಿಂದ ಪರುಶೆಟ್ಟಿ ಉಪಸ್ಥಿತರಿದ್ದರು.///

ನೆರೆ ಸಂತ್ರಸ್ತರ ಪರಿಹಾರ ಕಾಮಗಾರಿಗಳಿಗಾಗಿ ನಾಗನೂರು ರುದ್ರಾಕ್ಷಿಮಠದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನಾಗನೂರು ರುದ್ರಾಕ್ಷಿಮಠದಿಂದ ಚೆಕ್ ಮೂಲಕ 5 ಲಕ್ಷ ರೂ. ದೇಣಿಗೆ ನೀಡಲಾಗುತ್ತಿದೆ. ಜಿಲ್ಲಾಧಿಕಾರಿಗಳಿಗೆ ಗುರುವಾರವೇ ಚೆಕ್ ಹಸ್ತಾಂತರಿಸಲಾಗುವದು ಎಂದು ಶ್ರೀ ಸಿದ್ದರಾಮ ಸ್ವಾಮೀಜಿಗಳು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button