Kannada NewsKarnataka NewsLatest

ಜುಲೈ 20 ರಿಂದ ಅಗಸ್ಟ್ 20 ರವರೆಗೆ ಪ್ರವಾಹ ಭೀತಿ

 ಬಾಲಚಂದ್ರ ಜಾರಕಿಹೊಳಿ ಎಚ್ಚರಿಕೆ

 

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಧಾರಾಕಾರ ಮಳೆಯಿಂದಾಗಿ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಪ್ರವಾಹ ಭೀತಿ ಎದುರಾಗಬಹುದು. ಇದನ್ನು ನಿಭಾಯಿಸಲು ಈಗಿಂದಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಇಲ್ಲಿಯ ತಾಲೂಕಾ ಪಂಚಾಯತ ಸಭಾಗೃಹದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಮಗೂ ಪ್ರವಾಹ ಭೀತಿ ಎದುರಾಗುವ ಲಕ್ಷಣಗಳು ಕಾಣುತ್ತಿವೆ ಎಂದು ಹೇಳಿದರು.
ಈಗಿರುವ ಮಾಹಿತಿ ಪ್ರಕಾರ ಜುಲೈ ೨೦ ರಿಂದ ಅಗಸ್ಟ್ ೨೦ ರವರೆಗೆ ಪ್ರವಾಹ ಭೀತಿ ಬರಬಹುದು. ಈಗಿಂದಲೇ ನದಿ ತೀರದ ಗ್ರಾಮಗಳ ಜನರ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಮಳೆ ಹೆಚ್ಚಾದರೆ ಆತಂಕ ಎದುರಾಗುವ ಲಕ್ಷಣಗಳಿವೆ. ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕರ್ತವ್ಯ ನಿರ್ವಹಿಸಬೇಕು. ಜನರ ಸುರಕ್ಷತೆಯೇ ನಮಗೆ ಮುಖ್ಯವಾಗಿದ್ದು, ಪ್ರತಿ ಗ್ರಾಮಗಳಲ್ಲಿ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಗಂಜಿ ಕೇಂದ್ರಗಳನ್ನು ತೆರೆಯಬೇಕು. ಅವರಿಗೆ ವಾಸಿಸಲು ಸಮೀಪವಿರುವ ಶಾಲೆಗಳನ್ನು ಸುಸ್ಥಿತಿಯಲ್ಲಿಡಬೇಕು. ಒಟ್ಟಿನಲ್ಲಿ ಸಂಭಾವ್ಯ ಪ್ರವಾಹ ಎದುರಿಸಲು ತಾಲೂಕಾಡಳಿತ ಸಿದ್ಧವಿರುವಂತೆ ಅವರು ನಿರ್ದೇಶನ ನೀಡಿದರು.
ಈ ಬಾರಿ ಸಂಭಾವ್ಯ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ಹಾನಿಯಾದರೆ ಅಂತಹ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಅಧಿಕಾರಿಗಳು ಕಡ್ಡಾಯವಾಗಿ ಮನೆಗಳ ವಿಡಿಯೋ ಚಿತ್ರಿಕರಣ ಮಾಡಿಕೊಳ್ಳಬೇಕು. ಇದರಿಂದ ಅರ್ಹ ಫಲಾನುಭವಿಗಳನ್ನು ಗುರುತಿಸಿದಂತಾಗುತ್ತದೆ. ನೋಡಲ್ ಅಧಿಕಾರಿಗಳನ್ನು ನೆರೆಪಿಡಿತ ಗ್ರಾಮಗಳಿಗೆ ನೇಮಕ ಮಾಡಬೇಕು. ನೀರಿನ ಮಟ್ಟ ಅಪಾಯದ ಸ್ಥಿತಿ ತಲುಪುವ ಸಂದರ್ಭದಲ್ಲಿ ಅಧಿಕಾರಿಗಳು ತತಕ್ಷಣ ಜಾಗೃತರಾಗಿ ಜನರ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಿದರು.
ಕೋವಿಡ್ ಪ್ರಕರಣಗಳು ಮತ್ತೆ ದಾಖಲಾಗುತ್ತಿವೆ. ಸಾರ್ವಜನಿಕರ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ. ಮೂರನೇ ಅಲೆ ಎದುರಾದಲ್ಲಿ ಅದನ್ನು ಸಮರ್ಥವಾಗಿ ನಿರ್ವಹಣೆ ಮಾಡಲು ಆರೋಗ್ಯ ಇಲಾಖೆಯ ಜೊತೆಗೆ ಎಲ್ಲ ಇಲಾಖೆಗಳು ಕೈ ಜೋಡಿಸಬೇಕು. ಜನರ ಸುರಕ್ಷತೆಗಾಗಿ ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಈಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಹೆಚ್ಚುತ್ತಿದ್ದರಿಂದ ನಾವು ಕೂಡಾ ಜಾಗೃತರಾಗಬೇಕಿದೆ ಎಂದು ಹೇಳಿದರು.
ಮೂರನೇ ಅಲೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಈ ವೈರಸ್ ಕಾಡಲಿದ್ದು, ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಅಗತ್ಯವಿರುವ ಕಾಳಜಿ ಕೇಂದ್ರಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈಗಾಗಲೇ ಗೋಕಾಕ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಮೂಡಲಗಿ ಮತ್ತು ಮಲ್ಲಾಪೂರ ಪಿಜಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಕ್ಷಿಜನ್ ಸಮೇತ ಹಾಸಿಗೆಗಳ ವ್ಯವಸ್ಥೆ ಇದ್ದು ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಆಮ್ಲಜನಕ ಸಮಸ್ಯೆ ಎದುರಾಗಬಾರದು. ಈ ನಿಟ್ಟಿನಲ್ಲಿ ಎಲ್ಲ ಕಾಳಜಿ ಕೇಂದ್ರಗಳಲ್ಲಿ ಕೊರೋನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಿ ಅವರನ್ನು ಆರೋಗ್ಯವಂತರನ್ನಾಗಿ ಮನೆಗೆ ಕಳುಹಿಸಿಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಬಿಲ್ಲು ಅಧಿಕ ಪ್ರಮಾಣದಲ್ಲಿ ಆಗುತ್ತಿರುವುದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಈಗಾಗಲೇ ಗೋಕಾಕದಲ್ಲಿ ೨೦೦ ಹಾಸಿಗೆಯ ಆಮ್ಲಜನಕ ಕೇಂದ್ರ ಮಂಜೂರಾಗಿದೆ. ಎಲ್ಲ ಪಿಎಚ್‌ಸಿಗಳಿಗೆ ಅಂಬ್ಯುಲೆನ್ಸ್‌ಗಳನ್ನು ಸಹ ನೀಡಲಾಗಿದೆ. ಅವಳಿ ತಾಲೂಕಿನ ಜನರಿಗೆ ತೊಂದರೆಯಾಗದಂತೆ ಮೂರನೇ ಅಲೆ ಎದುರಿಸಲು ಸಿದ್ಧರಿರಬೇಕು ಎಂದು ಸೂಚನೆ ನೀಡಿದರು.
ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಡಿ.ಜೆ. ಮಹಾತ, ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಎಸ್. ಕೊಪ್ಪದ, ಗೋಕಾಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರವೀಂದ್ರ ಅಂಟೀನ, ಡಾ. ಆರ್.ಎಸ್. ಬೆಣಚಿನಮರಡಿ ಅವರು ಉಪಸ್ಥಿತರಿದ್ದರು.

ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಅಭಿವೃದ್ಧಿಗೆ ಪಣ ತೊಡಿ : ಶಾಸಕ ಬಾಲಚಂದ್ರ ಜಾರಕಿಹೊಳಿ

ಉಡುಪಿಯಲ್ಲಿ ಆರೇಂಜ್ ಅಲರ್ಟ್, ದಕ, ಉತ್ತರ ಕನ್ನಡದಲ್ಲೂ ಭಾರಿ ಮಳೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button