ಕೋವಿಡ್ ಪರೀಕ್ಷೆಯನ್ನೇ ಮಾಡದಿದ್ದದ್ದರೂ ಬಂತು ಪಾಸಿಟಿವ್ ! ವರದಿ ಕೇಳಿ ಬಾಲಕಿಯ ಕುಟುಂಬ ಶಾಕ್; ಹಾಗಿದ್ದರೆ ಪಾಸಿಟಿವ್ ಯಾರಿಗೆ ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವೈದ್ಯಕೀಯ ಕ್ಷೇತ್ರದಲ್ಲಿ ಕೆಲವೊಮ್ಮೆ ಏನೆಲ್ಲಾ ಅನಾಹುತಗಳು ಘಟಿಸುತ್ತವೆ ಎಂಬುದಕ್ಕೆ ಹಲವಾರು ಉದಾಹರಣೆಗಳಿವೆ. ರೋಗಿಗಳ ಜೀವ ಉಳಿಸುವ ವೈದ್ಯರು ಮತ್ತು ವೈದ್ಯಕೀಯ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಹಾಗಾಗಿ ವೈದ್ಯರ ವೃತ್ತಿಯನ್ನು ಸೇವೆ ಎಂದು ಕರೆಯಲಾಗುತ್ತದೆ. ವೈದ್ಯರಿಗೆ ದೇವರ ಪಟ್ಟ ಕಟ್ಟಲಾಗುತ್ತದೆ.

ಇಷ್ಟಾದರೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರು ಸಹ ಮನುಷ್ಯರೇ, ಹಾಗಾಗಿ ಕೆಲವೊಮ್ಮೆ ಅಚಾತುರ್ಯಗಳು ಘಟಿಸುತ್ತವೆ. ಕೆಲವೊಂದು ನಿರ್ಲಕ್ಷ್ಯದಿಂದ ಆಗಿದ್ದಾದರೆ ಇನ್ನು ಕೆಲವು ಆಕಸ್ಮಿಕವಾಗಿರುತ್ತವೆ. ಇಂಥದ್ದೇ ಒಂದು ಯಡವಟ್ಟು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.

ಶಾಲೆಗೇ ಹೋಗಿರಲಿಲ್ಲ ವಿದ್ಯಾರ್ಥಿನಿ !

ಮುಂಡಗೋಡ ಪಟ್ಟಣದ ಹಳೂರಿನ ಆರನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು, ಕರಗಿನಕೊಪ್ಪದ ಲೊಯೋಲ ಶಾಲೆಯ ಇಂಗ್ಲೀಷ್ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಈ ಶಾಲೆಯ ಮಕ್ಕಳಿಗೆ ಜ.೧೭ರಂದು ಕೋವಿಡ್ ಪರೀಕ್ಷೆ ಕೈಗೊಳ್ಳಲಾಗಿದೆ. ಆದರೆ ಹಳೂರಿನ ಈ ವಿದ್ಯಾರ್ಥಿನಿ ಅನಾರೋಗ್ಯದ ನಿಮಿತ್ತ ಜನವರಿ ೧೨ರಿಂದ ೧೯ರವರೆಗೆ ಶಾಲೆಗೆ ಹೋಗಿಲ್ಲ. ಆದರೆ, ಕೋವಿಡ್ ಪರೀಕ್ಷೆಯನ್ನೇ ಮಾಡಿರದ ಈ ವಿದ್ಯಾರ್ಥಿನಿಗೆ ಕೋವಿಡ್ ಪಾಸಿಟಿವ್ ವರದಿಯನ್ನು ನೀಡಿದ್ದಾರೆ.

ಈ ವಿಷಯವನ್ನು ಆಕೆಯ ಪಾಲಕರಿಗೆ ತಿಳಿಸಿದ ಆರೋಗ್ಯ ಇಲಾಖೆಯವರು ಶಾಲೆಗೆ ಪಾಲಕರಿಗೆ ಬರಲು ಹೇಳಿದ್ದಾರೆ. ಈ ಸುದ್ದಿ ಕೇಳಿ ವಿದ್ಯಾರ್ಥಿನಿಯ ಪಾಲಕರಿಗೆ ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಆಘಾತವೂ ಆಗಿದೆ. ಆತಂಕಗೊಂಡ ವಿದ್ಯಾರ್ಥಿನಿಯ ತಂದೆ ಲೊಯೋಲ ಶಾಲೆಗೆ ದೌಡಾಯಿಸಿದ್ದಾರೆ. ಅಲ್ಲಿ ಶಿಕ್ಷಕರು, ನಿಮ್ಮ ಮಗಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಕೂಡಲೇ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿಯ ತಂದೆಯು, ನನ್ನ ಮಗಳು ಎಂಟು ದಿನಗಳಿಂದ ಶಾಲೆಗೆ ಬಂದಿಲ್ಲ. ಕೋವಿಡ್ ಪರೀಕ್ಷೆ ಯಾವಾಗ ಮಾಡಿದ್ದೀರಿ. ನನ್ನ ಮಗಳು ಇವತ್ತು ಮಾತ್ರ ಶಾಲೆಗೆ ಬಂದಿದ್ದಾಳೆ ಎಂದು ವಿವರಿಸಿದ್ದಾರೆ.

ಹಾಜರಿ ಪುಸ್ತಕವೂ ಸಾಕ್ಷಿ

ಏನೋ ಎಡವಟ್ಟು ಆದಂತೆ ಕಂಡುಬಂದ ಶಿಕ್ಷಕರು ತರಗತಿಯ ಅಟೆಂಡೆನ್ಸ್ ನೋಡಿದಾಗ, ವಿದ್ಯಾರ್ಥಿನಿಯು ಶಾಲೆಗೆ ಬಂದಿಲ್ಲದಿರುವುದು ಕಂಡುಬಂದಿದೆ. ಆಗ, ಶಿಕ್ಷಕರು ಆರೋಗ್ಯ ಸಿಬ್ಬಂದಿಗೆ ಕರೆ ಮಾಡಿ, ಆ ವಿದ್ಯಾರ್ಥಿನಿ ಶಾಲೆಗೆ ಬಂದಿಲ್ಲ. ಆಕೆಯ ಕೋವಿಡ್ ಟೆಸ್ಟ್ ವರದಿ ಅದಲ್ಲ. ಬೇರೆ ಯಾರದ್ದಾದರೂ ಅದಲು ಬದಲಾಗಿದೆಯೇ ಪರಿಶೀಲಿಸಿ ಎಂದು ತಿಳಿಸಿದ್ದಾರೆ. ಆರೋಗ್ಯ ಸಿಬ್ಬಂದಿಯು ವಿದ್ಯಾರ್ಥಿನಿಯ ತಂದೆಗೆ ಕರೆ ಮಾಡಿ, ಬೇರೆಯವರ ವರದಿ ಆಗಿದೆ. ನಿಮ್ಮ ಮಗಳದಲ್ಲ ಎಂದು ತಿಳಿಸಿದ್ದಾರೆ. ಆಗಿರುವ ಲೋಪವನ್ನು ಬೇರೆ ಯಾರಿಗೂ ಹೇಳದೆ ಗುಟ್ಟಾಗಿಡುವಂತೆ ವಿನಂತಿಸಿದ್ದಾರೆ. ಆದರೂ, ಆರೋಗ್ಯ ಸಿಬ್ಬಂದಿಯ ಎಡವಟ್ಟು ಶನಿವಾರ ಸಂಜೆ ಬಹಿರಂಗಗೊಂಡಿದೆ.

ಹಾಗಿದ್ದರೆ ಪಾಸಿಟಿವ್ ಯಾರಿಗೆ ?

ಕೋವಿಡ್ ಪರೀಕ್ಷೆ ಮಾಡಿಸಿರದ ವಿದ್ಯಾರ್ಥಿನಿಯೇನೋ ಸುಳ್ಳು ವರದಿ ಬಹಿರಂಗಗೊಂಡು ಬಚಾವ್ ಆಗಿದ್ದಾಳೆ. ಆದರೆ ಅಸಲಿಗೆ ಇದು ಯಾವ ವಿದ್ಯಾರ್ಥಿಯ ಪಾಸಿಟಿವ್ ವರದಿ ಎಂಬುದು ಇನ್ನೂ ತಿಳಿದುಬಂದಿಲ್ಲ. ಪಾಸಿಟಿವ್ ಇರುವ ವಿದ್ಯಾರ್ಥಿಗೆ ನೆಗೆಟಿವ್ ನೀಡಿ ಆ ವಿದ್ಯಾರ್ಥಿ ಶಾಲೆಗೆ ಹೋಗಿ ಬಂದು ಮಾಡುತ್ತಿದ್ದರೆ ಇಡೀ ಶಾಲೆಗೆ ಕೋವಿಡ್ ಹಬ್ಬಬಹುದು ಎಂಬ ಆತಂಕ ಪಾಲಕರದ್ದು.

 

ಯುವಕ ಸೇರಿ ಕೊರೋನಾಕ್ಕೆ ಶನಿವಾರ ಬೆಳಗಾವಿಯಲ್ಲಿ ಮೂವರ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button