Latest

ಸಾರಾಯಿಯಲ್ಲಿ ಎಡವಿತೇ ಸರಕಾರ? ಗಟ್ಟಿಯಾಗುತ್ತಿದೆ ಮಠಾಧೀಶರ ಧ್ವನಿ

ಸಂಸ್ಕೃತಿ, ಸಂಸ್ಕಾರಗಳ ಕುರಿತು ಮಾತನಾಡುವ ಬಿಜೆಪಿ ಕೂಡಲೇ ಎಚ್ಚೆತ್ತುಕೊಂಡರೆ ಒಳಿತು

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೊರೋನಾ  ಮತ್ತು ಲಾಕ್ ಡೌನ್ ವಿಷಯದಲ್ಲಿ ಹಲವು ಬಾರಿ ಎಡವಿದ ರಾಜ್ಯ ಸರಕಾರ ಇದೀಗ ಸಾರಾಯಿ ವಿಷಯದಲ್ಲಿ ಮತ್ತೆ ದೊಡ್ಡ ಎಡವಟ್ಟು ಮಾಡಿಕೊಳ್ಳುವಂತೆ ಕಾಣಿಸುತ್ತಿದೆ.

ರಾಜ್ಯದ ಜನರ ವಿರೋಧದ ನಡುವೆಯೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಮೂಲಕ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಕೊರೆನಾ ನಿಯಂತ್ರಣಕ್ಕೆ ಮಾಡಿದ ಪ್ರಯತ್ನವೆಲ್ಲ ಸಾರಾಯಿಯಿಂದಾಗಿ ವ್ಯರ್ಥವಾಗದಿರಲಿ ಎಂದು ಎಲ್ಲರೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ದೇವಸ್ಥಾನ ಆರಂಭಿಸಲು ಇನ್ನೂ ಅನುಮತಿ ನೀಡದ ರಾಜ್ಯ ಸರಕಾರ ಸಾರಾಯಿ ಮಾರಾಟಕ್ಕೆ ತರಾತುರಿಯಲ್ಲಿ ಅವಕಾಶ ನೀಡಿದೆ. ಇದರ ವಿರುದ್ಧ ಈಗಾಗಲೆ ಹಲವಾರು ಮಠಾಧೀಶರು ಧ್ವನಿ ಎತ್ತಿದ್ದಾರೆ. ಕಾಗಿನೆಲೆ ಶ್ರೀಗಳು, ತೋಂಟದಾರ್ಯ ಶ್ರೀಗಳು, ಕೂಡಲಸಂಗಮ ಶ್ರೀಗಳು ಬಹಿರಂಗವಾಗಿಯೇ ಸರಕಾರದ ನಿಲುವನ್ನು ವಿರೋಧಿಸಿದ್ದಾರೆ. ವಿಶ್ವಹಿಂದೂಪರಿಷತ್ ನಾಯಕರೂ ಅಲ್ಲಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಆದರೆ ಕೇವಲ ಆದಾಯದ ಮೇಲೆ ಗುರಿ ಇಟ್ಟಿರುವ ಸರಕಾರ ಜನರ ಭಾವನೆಗಳಿಗೆ ಕುರುಡಾಗಿದೆ. ಬಹುಶಃ ನಮ್ಮ ಜನಕ್ಕೆ ದೇವಸ್ಥಾನದ ತೀರ್ಥಕ್ಕಿಂತ ಬಾರ್ ನಲ್ಲಿ ಸಿಗುವ ತೀರ್ಥವೇ ಮುಖ್ಯವಾಗಿರಬೇಕು. ಯಾವೊಬ್ಬ ಭಕ್ತನೂ ದೇವಸ್ಥಾನ ಏಕೆ ತೆರೆದಿಲ್ಲ ಎಂದು ಪ್ರಶ್ನೆ ಮಾಡಲಿಲ್ಲ ಎಂದು ಕಾಗಿನೆಲೆ ಸ್ವಾಮಿಗಳು ಪ್ರತಿಕ್ರಿಯಿಸಿದ್ದಾರೆ.

 ರಾಜ್ಯದ ಪ್ರತಿಷ್ಟಿತ ಮಠದ ಗುರುಗಳೆಲ್ಲ ಸೇರಿ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡಲು ಸರ್ಕಾರದ ಬಳಿ ಚರ್ಚಿಸಲು ತೀರ್ಮಾನಿಸಿದ್ದಾರೆ ಎನ್ನುವ ಸುದ್ದಿ ಇದೆ. ನಿಜಕ್ಕೂ ಇದೊಂದು ಉತ್ತಮ ಬೆಳವಣಿಗೆ, ಭಕ್ತರು ಕೂಡ ಮಠಮಾನ್ಯಗಳಿಂದ ಇಂತಹ ಕಾರ್ಯವನ್ನೆ ನಿರೀಕ್ಷಿಸೋದು. ಒಂದು ವೇಳೆ ರಾಜ್ಯ ಮದ್ಯಪಾನ ಮುಕ್ತವಾದಲ್ಲಿ ಯಾರು ಕೂಡ ಹಸಿವಿನಿಂದ ಬಳಲುವ ಪ್ರಶ್ನೆಯೇ ಇರುವುದಿಲ್ಲ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಚೌಕಶಿ ಹೇಳಿದ್ದಾರೆ. 

  ಈ ಹಿಂದೆ ನೋಟ್ ಬ್ಯಾನ್ ಆದಾಗ ಬ್ಯಾಂಕ್ ಮುಂದ ಪಾಳಿ ಹಚ್ಚಲು ನವೆಂಬರ್ ತಿಂಗಳ ಬಿಸಲಿಗೇ ತಲೆತಿರುಗಿ ಬಿದ್ದವರು ಮೇ ತಿಂಗಳ ಬಿಸಲನ್ನೂ ಲೆಕ್ಕಿಸದೇ  ಮದ್ಯಕ್ಕಾಗಿ ಪಾಳಿ ಹಚ್ಚಿ ನಿಂತಿದ್ದಾರೆ. #completebanonliquor hashtag ಬಳಸಿ ಆಂದೋಲನವನ್ನು ಯಶಸ್ವಿಗೊಳಿಸಿ ಎಂದೂ ಅವರು ಕರೆ ನೀಡಿದ್ದಾರೆ.
ವಿಶ್ವಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಸಂಘ ಪರಿವಾರಗಳು ಈ ವಿಷಯದಲ್ಲಿ ಸರಕಾರದ ಮೇಲೆ ಒತ್ತಡ ಹೇರಬೇಕೆನ್ನುವ ಮಾತುಗಳು ಕೇಳಿಬರುತ್ತಿದೆ. ಕಾಂಗ್ರೆಸ್ ಕೂಡ ಈಗ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸರಕಾರ ಕೇವಲ ಖಜಾನೆ ಭರ್ತಿ ಮಾಡಲು ಜನರ ಆರೋಗ್ಯ, ಮಹಿಳೆಯರ ಧ್ವನಿ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಲೆಕ್ಕಿಸದೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ.
ಮದ್ಯ ನಿಷೇಧ ಕುರಿತಂತೆ ಮುಂದಿನ ದಿನಗಳಲ್ಲಿ ಉಗ್ರಸ್ವರೂಪದ ಆಂದೋಲನ ನಡೆದರೂ ಅಚ್ಚರಿಯಿಲ್ಲ. ಸಂಸ್ಕೃತಿ, ಸಂಸ್ಕಾರಗಳ ಕುರಿತು ಮಾತನಾಡುವ ಬಿಜೆಪಿ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡರೆ ಒಳಿತು. ಇಲ್ಲವಾದಲ್ಲಿ ಇದಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ.

ಮದ್ಯ ನಿಷೇಧದಿಂದ ಸಾಮಾಜಿಕ ಲಾಭ ಎಷ್ಟು, ಹಾನಿ ಎಷ್ಟು ಸಮೀಕ್ಷೆಯಾಗಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button