*ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಅದ್ಧೂರಿ ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಸಾಧನೆ ಹಾಗೂ ಜೀವನಾದರ್ಶಗಳು ಅತ್ಯಂತ ಅಪಾರವಾದವು. ಅವರ ತತ್ವಗಳಿಂದ ನಾವೇನು ಕಲಿತಿದ್ದೇವೆ ಎಂಬುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಉದ್ಯಮಿ ಸುಧೀರ ಸಾಲಿಯಾನ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ (ಸೆ. 06) ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಜರುಗಿದ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾಪುರುಷರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳದೇ ಇರುವುದೇ ಮನುಷ್ಯನ ಅಶಾಂತಿಗೆ ಮುಖ್ಯ ಕಾರಣ. ಒಂದೇ ಜಾತಿ, ಒಂದೇ ಧರ್ಮ ಹಾಗೂ ಒಬ್ಬನೇ ದೇವರು ಎಂಬ ಭಾವನೆ ಮೂಡಿದಾಗ ಮಾತ್ರ ಮಾನವ ಜೀವನ ಸಾರ್ಥಕತೆಯನ್ನು ಪಡೆಯುತ್ತದೆ.
ನಾರಾಯಣ ಗುರುಗಳು ಯಾವುದೇ ಜಾತಿ, ಧರ್ಮಗಳ ಭೇದವೆಣಿಸದೆ ಮೌನ ಕ್ರಾಂತಿಯನ್ನು ನಡೆಸಿದವರು. ನಿನ್ನ ದೋಷಗಳನ್ನು ನೀನೇ ಸರಿಪಡಿಸಿಕೊಂಡಾಗ ವ್ಯವಸ್ಥೆ ಎಂದಿಗೂ ಹದಗೆಡುವುದಿಲ್ಲ ಎಂಬುದು ಅವರ ದಿವ್ಯ ಸಂದೇಶವಾಗಿದೆ ಎಂದು ಉದ್ಯಮಿ ಸುಧೀರ ಸಾಲಿಯಾನ ತಿಳಿಸಿದರು.
ಸಮಾಜದ ಮುಖಂಡ ಗಣೇಶ ಪೂಜಾರಿ ಮಾತನಾಡಿ, ಬಿಲ್ಲವ ಸಮುದಾಯವು ಜಿಲ್ಲಾ ಮಟ್ಟದಲ್ಲಿ ಹೆಚ್ಚು ಹೆಚ್ಚು ಸಂಘಟನೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. “ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಹೆಚ್ಚು” ಎಂಬಂತೆ ಶ್ರಮಿಸಿ ಗುರುಗಳ ಆದರ್ಶಗಳನ್ನು ನಿತ್ಯಜೀವನದಲ್ಲಿ ಪಾಲಿಸಬೇಕು ಎಂದು ಕರೆ ನೀಡಿದರು.
ಬಿಲ್ಲವ ಸಂಘಟನೆಯ ಮಹಿಳಾ ಅಧ್ಯಕ್ಷೆ ಪುಷ್ಪ ಕೋಟಿಯಾನ ಮಾತನಾಡಿ, ನಾರಾಯಣ ಗುರುಗಳ ತತ್ವಗಳನ್ನು ಕೇವಲ ಜಯಂತಿಯ ದಿನಕ್ಕಷ್ಟೇ ಸೀಮಿತಗೊಳಿಸಬಾರದು. ಸಮಾಜದಲ್ಲಿರುವ ಜಾತಿ, ಮತಗಳ ಸಂಘರ್ಷವನ್ನು ತೊರೆದು ಎಲ್ಲರೂ ಒಂದಾಗಿ ನೆಮ್ಮದಿಯ ಜೀವನ ನಡೆಸಲು ಅವರ ಬೋಧನೆಗಳು ನಮಗೆ ದಾರಿದೀಪವಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸುಜನ್ ಕುಮಾರ ಸಾಲಿಯಾನ, ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ನಾರಾಯಣ ಗುರುಗಳು “ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಶಕ್ತಿಶಾಲಿಗಳಾಗಿ” ಎಂದು ಸಾರಿದ್ದಾರೆ. ಹಿಂದೂ ಧರ್ಮದಲ್ಲಿದ್ದ ತಪ್ಪುಗಳನ್ನು ಸರಿಪಡಿಸಿ, ಧರ್ಮದ ನೈಜ ತತ್ವಗಳನ್ನು ಎತ್ತಿಹಿಡಿದ ಅವರ ಸಂದೇಶಗಳನ್ನು ನಾವೆಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಸುನೀಲ್ ಆರ್. ಪೂಜಾರಿ, ಉದ್ಯಮಿ ವಿಜಯ್ ಸಾಲಿಯಾನ ಸೇರಿದಂತೆ ಸಮುದಾಯದ ಪ್ರಮುಖ ಗಣ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.




