*ನಾಳೆಯಿಂದ ಗೃಹಲಕ್ಷ್ಮಿ ಯೋಜನೆ; ಅರ್ಜಿ ಸಲ್ಲಿಸಲು ಏನು ಮಾಡಬೇಕು? ಯಾವ ದಾಖಲೆಗಳು ಅಗತ್ಯ?; ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ತಿಂಗಳಿಗೆ 2000 ರೂಪಾಯಿ ಸಹಾಯಧನ ನೀಡುವ ಗೃಹ ಲಕ್ಷ್ಮೀ ಯೋಜನೆಗೆ ನಾಳೆಯಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹಲಕ್ಷ್ಮೀ ಯೋಜನೆಗೆ ಜೂನ್ 16 ನಾಳೆಯಿಂದ ಆಫ್ ಲೈನ್ ಹಾಗು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಬಿಪಿಎಲ್, ಅಂತ್ಯೋದಯ ಕಾರ್ಡ್ದಾರ ಮಹಿಳೆಯರಿಗೆ ಈ ಯೋಜನೆ ಅನ್ವಯವಾಗಲಿದೆ ಎಂದರು.
ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ್ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಯಾವುದೇ ಹಣ ನೀಡಬೇಕಿಲ್ಲ. ಅರ್ಜಿ ಸಲ್ಲಿಸುವ ಮಹಿಳೆಯರು ಆಧಾರ್ ಕಾರ್ಡ್, ಪತಿಯ ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮಾಹಿತಿ ನೀಡಬೇಕು. ಅರ್ಜಿ ಸಲ್ಲಿಸಲು ಯಾವುದೇ ಡೆಡ್ ಲೈನ್ ಇಟ್ಟಿಲ್ಲ. ಈ ವರ್ಷವಿಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿರಂತರವಾಗಿರಲಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ಗೊಂದಲಗಳಿದ್ದರೆ ವಿಚಾರಿಸಲು ಇಲಾಖೆಯಿಂದ ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ -1902 ಸಂಖ್ಯೆಗೆ ಕರೆ ಮಾಡಿ ಗೊಂದಲ ನಿವಾರಿಸಿಕೊಳ್ಳಬಹುದು ಎದರು.
ಅರ್ಜಿ ಸಲ್ಲಿಕೆಗೆ ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಫಲಾನುಭವಿಗಳು ನೇರವಾಗಿ ಸೇವಾ ಕೇಂದ್ರಕ್ಕೆ ತೆರಳಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಗೆ ವಾರ್ಷಿಕವಾಗಿ ಅಂದಾಜು 30 ಸಾವಿರ ಕೋಟಿ ಬೇಕಾಗುತ್ತದೆ. ಆದರೆ ಮಹಿಳೆಯರ ಅನುಕೂಲಕ್ಕಾಗಿ ಸಿಎಂ ಸಿದ್ದರಾಮಯ್ಯ ಈ ಮಹತ್ವದ ಯೋಜನೆ ಜಾರಿಗೆ ತರಲು ನಿರ್ಧರಿಸಿದ್ದಾರೆ. ನಾಳೆ ಮಧ್ಯಾಹ್ನ 1:30ಕ್ಕೆ ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ