*ಕನ್ನಡಿಗರು ಕೊಟ್ಟ ಪೆನ್ ತಮಿಳರಿಗೆ ಒತ್ತೆ ಇಟ್ಟ ಕಾಂಗ್ರೆಸ್ ಸರಕಾರ; ಕಾಂಗ್ರೆಸ್ ನಿಂದ ಸ್ಟಾಲಿನ್ ಗೆ ರೆಡ್ ಕಾರ್ಪೆಟ್ ಸ್ವಾಗತ!*
ಸರ್ಕಾರದ HDK ವಿರುದ್ಧ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜನರಿಗೆ ದುಂಬಾಲು ಬಿದ್ದು ಪೆನ್ ಕೊಡಿ, ಪೆನ್ ಕೊಡಿ ಎಂದು ಕೇಳಿದರು. ಪಾಪ.. ಜನರೂ ನಂಬಿ ಪೆನ್ ಕೊಟ್ಟರು. ಈಗ ಆ ಪೆನ್ ಅನ್ನು ತೆಗೆದುಕೊಂಡು ಹೋಗಿ ತಮಿಳುನಾಡಿಗೆ ಒತ್ತೆ ಇಟ್ಟಿದ್ದಾರೆ. ರೆಡ್ ಕಾರ್ಪೆಟ್ ಹಾಕಿ ಆ ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಸ್ವಾಗತ ಕೊರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಾತ್ಯತೀತ ಜನತಾದಳ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಮಿಳುನಾಡಿಗೆ ನೀರು ಬಿಡಲು ಹೇಳಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ.
ನೀರು ಬಿಡಲು ಹೇಳಿದವರು ಯಾರು?
ರಾಜ್ಯ ಕಾಂಗ್ರೆಸ್ ಸರಕಾರ ಏಕಪಕ್ಷೀಯವಾಗಿ ತಮಿಳುನಾಡಿಗೆ ನೀರು ಹರಿಸಿದೆ. ಯಾರನ್ನು ಕೇಳಿ ಇವರು ನೀರು ಹರಿಸಿದ್ದಾರೆ? ಜನರನ್ನು ಕೇಳಿದ್ದಾರೆಯೇ? ಪ್ರತಿಪಕ್ಷಗಳ ಜತೆ ಚರ್ಚೆ ಮಾಡಿದ್ದಾರೆಯೇ? ಅಥವಾ ನೀರು ಬಿಡುವಂತೆ ಸರಕಾರಕ್ಕೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಇಲ್ಲವೇ ಸುಪ್ರೀಂ ಕೋರ್ಟ್ ನಿರ್ದೇಶನ ಇದೆಯೇ? ಹಾಗೇನಾದರೂ ಇದ್ದರೆ ಜನತೆಗೆ ತೀಸಬೇಕು ಎಂದು ಅವರು ಒತ್ತಾಯ ಮಾಡಿದರು.
ದೇವೇಗೌಡರು ಏಕಪಕ್ಷೀಯವಾಗಿ ನೀರು ಹರಿಸಿಲ್ಲ
ಕುಮಾರಸ್ವಾಮಿ ಅವರು ಅವರ ಕಾಲದಲ್ಲಿ ನೀರು ಬಿಟ್ಟಿಲ್ವಾ? ಎಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಅವರಿಗೆ ತಿಳಿವಳಿಕೆ ಕೊರತೆ ಇದೆ. ನಾನು ಎರಡು ಸಲ ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ನಿಜ. ಆಗ ನಮ್ಮಲ್ಲಿ ಯಥೇಚ್ಛವಾಗಿ ನೀರು ಇತ್ತು. ಸಂಕಷ್ಟದ ಪರಿಸ್ಥಿತಿ ಇರಲಿಲ್ಲ. ದೇವೇಗೌಡರ ಕಾಲದಲ್ಲಿಯೂ ಕೇಂದ್ರ ಸರಕಾರದ ಮನವಿ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೀರು ಬಿಡಲಾಗಿತ್ತು. ಏಕಪಕ್ಷೀಯವಾಗಿ ಹಿಂದಿನ ಯಾವ ಸರಕಾರವೂ ನಿರ್ಧಾರ ಕೈಗೊಂಡು ಸರ್ವಾಧಿಕಾರಿ ಮನೋಭಾವದಿಂದ ಜನರ ಸಂಕಷ್ಟ ಲೆಕ್ಕಿಸದೆ ನೆರೆ ರಾಜ್ಯಕ್ಕೆ ನೀರು ಹರಿಸಿರಲಿಲ್ಲ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರ ಬಗ್ಗೆ ಮಾತನಾಡಬೇಕಾದರೆ ಇತಿಹಾಸ ತಿಳಿದು ಮಾತನಾಡಬೇಕು. 1962ರಿಂದ ಅವರು ಕಾವೇರಿ, ಕೃಷ್ಣಾ ಸೇರಿದಂತೆ ವಿವಿಧ ನದಿ ನೀರು ಹಕ್ಕಿಗಾಗಿ ಅವರು ನಡೆಸಿದ ಹೋರಾಟವನ್ನು ತಿಳಿದು ಮಾತನಾಡಬೇಕು. ಅವರೆಂದೂ ನಮ್ಮ ರಾಜ್ಯದ ರೈತರ ಹಿತಾಸಕ್ತಿ ಕಡೆಗಣಿಸಿ ನೆರೆ ರಾಜ್ಯಕ್ಕೆ ನೀರು ಬಿಟ್ಟಿಲ್ಲ. ಅವರ ಬಗ್ಗೆ ಮಾತಾಡೋಕೆ ಯಾರಿಗೂ ನೈತಿಕತೆ ಇಲ್ಲ ಎಂದು ಅವರು ತಿಳಿಸಿದರು.
ಈಗ ರಾಜ್ಯದಲ್ಲಿ ಮಳೆ ಇಲ್ಲ, ಬರ ಬಂದು ಕೂತಿದೆ. ಇದು ಸರಕಾರದ ಪಾಪದ ಫಲ. ಇವರ ಲೂಟಿ ಹೊಡೆಯುವ ಕುಕೃತ್ಯಕ್ಕೆ ಪ್ರಕೃತಿಯೂ ಸಹಕಾರ ನೀಡುತ್ತಿಲ್ಲ ಎಂದು ಅವರು ಕಿಡಿಕಾರಿದರು.
ಮೇಕೆದಾಟು ಎಲ್ಲಿಗೆ ಬಂತು?
ಕಾಂಗ್ರೆಸ್ ನವರು ಮೇಕೆದಾಟ ಪಾದಯಾತ್ರೆ ಮಾಡಿದರು, ಅದು ಎಲ್ಲಿಗೆ ಬಂತು? ಚಿಕನ್ ಲೆಗ್, ಮಟನ್ ಪೀಸ್ ತಿಂದು ಹೋರಾಟ ಮಾಡಿದ್ದು ಅಷ್ಟೇ ಆಯಿತು ಅಲ್ಲಿ. ಡಿಎಂಕೆ ನಿಮ್ಮ ಮಿತ್ರಪಕ್ಷ ಅಲ್ಲವೇ? ತಮಿಳುನಾಡು ಮುಖ್ಯಾಮಂತಿ ಸ್ಟಾಲಿನ್ ಅವರು ನಿಮ್ಮ ಸ್ನೇಹಿತರೇ ಅಲ್ಲವೇ? ಕೊಟ್ಟು ತಗೆದುಕೊಳ್ಳುವ ಸಂಬಂಧ ಮಾಡ್ತಾ ಇದ್ದೀರಲ್ಲಾ? ಮೇಕೆದಾಟು ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಅವರು ಟಾಂಗ್ ನೀಡಿದರು.
ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ತಮಿಳುನಾಡಿನವರು ಅರ್ಜಿ ಹಾಕಿದ್ದಾರೆ. ರಾಜ್ಯ ಸರಕಾರ ಏನು ಮಾಡುತ್ತಿದೆ. ಈಗಾಗಲೇ ಜನರನ್ನು ಲೆಕ್ಕಕ್ಕೆ ಇಡದೇ ತಮಿಳುನಾಡಿಗೆ ನೀರು ಬಿಡುತ್ತಿದ್ದೀರಿ. ಅವರು ಹೆಚ್ಚುವರಿ ನೀರು ಕೇಳಿದರೆ ಕೊಡಲು ಆಗುತ್ತಾ? ನಮ್ಮ ರೈತರು ಇನ್ನೂ ಒಂದು ಬೆಳೆಯನ್ನೂ ಬೆಳೆದಿಲ್ಲ. ತಮಿಳುನಾಡಿನಲ್ಲಿ ಏನು ಪರಿಸ್ಥಿತಿ ಇದೆ, ಅಲ್ಲಿ ಎಷ್ಟು ಬೆಳೆಗಳನ್ನು ತೆಗೆಯಲಾಗುತ್ತಿದೆ ಎನ್ನುವುದು ಈ ಸರಕಾರಕ್ಕೆ ಗೊತ್ತಿದೆಯಾ? ಅಲ್ಲಿ ನಾಲ್ಕು ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಮಾಡಿಕೊಂಡಿದ್ದಾರೆ. ಕನಿಷ್ಠ ಜ್ಞಾನ ಈ ಸರಕಾರಕ್ಕೆ ಇದೆಯಾ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ಮಾಡಿದ ಪ್ರಮಾದವನ್ನು ಮುಚ್ಚಿಕೊಳ್ಳಲು ಸರಕಾರ, ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಕಾಂಗ್ರೆಸ್ ನವರು ಆರೋಪ ಮಾಡುತ್ತಿದ್ದಾರೆ. ನಾವು ವಿಪಕ್ಷದಲ್ಲಿ ಇರುವುದೇ ರಾಜಕೀಯ ಮಾಡಲು ಹಾಗೂ ಸರಕಾರದ ಲೋಪಗಳನ್ನು ಎತ್ತಿ ತೋರಿಸಲು. ಕರ್ನಾಟಕದ ರೈತರ ಔದಾರ್ಯ ಬೆಲೆ ಇದೆಯಾ? I.n.d.i.a. ಮೈತ್ರಿ ಕೂಟಕ್ಕೆ ಶಕ್ತಿ ತುಂಬಲು ರಾಜ್ಯದ ರೈತರನ್ನು ಬಲಿ ಕೊಡಲು ಹೊರಟಿದ್ದೀರಿ. ಇಂಥ ಓಲೈಕೆ ಅಗತ್ಯ ಇತ್ತಾ? ಸುಪ್ರೀಂ ಕೋರ್ಟ್ ಮುಂದೆ ತಮಿಳುನಾಡಿನವರು ಮತ್ತೊಂದು ಅರ್ಜಿ ಹಾಕಿದರೆ, ಆಗ ನೀವೇನು ಮಾಡುತ್ತೀರಿ? ಎಂದು ಮಾಜಿ ಮುಖ್ಯಮಂತ್ರಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಡಿಕೆ ಸಹೋದರರ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
2,000 ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳಲು ಹೊರಟಿದ್ದೀರಿ?
ದೇವೇಗೌಡರು ಸಹಿ ಹಾಕಿದ್ದು ಮಾಡಲಿಕ್ಕೆ, ಭೂಮಿ ಲೂಟಿ ಹೊಡೆಯುವುದಕ್ಕೆ ಅಲ್ಲ
ಮೂಲ ಒಪ್ಪಂದ ತಿರುಚಿ ಚೌಕಟ್ಟಿನ ಒಪ್ಪಂದಕ್ಕೆ (ಫ್ರೇಮ್ ವರ್ಕ್ ಅಗ್ರಿಮೆಂಟ್) ಸಹಿ ಯಾರು?
ಬೆಂಗಳೂರು: ನಮ್ಮ ಕುಟುಂಬದ ಯಾವೊಬ್ಬ ವ್ಯಕ್ತಿ ಹೆಸರಲ್ಲಿ ನೈಸ್ ಆಸ್ತಿ ಇಲ್ಲ. ಒಂದು ವೇಳೆ ಇದ್ದರೆ ನಮ್ಮ ಇಡೀ ಕುಟುಂಬ ರಾಜಕೀಯ ನಿವೃತ್ತಿ ಪಡೆಯುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.
ಜಾತ್ಯತೀತ ಜನತಾದಳ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ತಮ್ಮ ವಿರುದ್ಧ ಸಂಸದ ಡಿ.ಕೆ.ಸುರೇಶ್ ಮಾಡಿದ್ದ ಟೀಕೆಗಳಿಗೆ ತಿರುಗೇಟು ನೀಡಿದರು.
ನೈಸ್ ಯೋಜನೆಗಳ ಅಕ್ರಮಗಳಿಗೆ ಹಾಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನೇರ ಕಾರಣ. ಈ ವಿಷಯ ಇಡೀ ರಾಜ್ಯಕ್ಕೆ ಗೊತ್ತಿದೆ. ನೈಸ್ ಅಕ್ಕಪಕ್ಕ ಜಮೀನುಗಳನ್ನು ಯಾರು ಕೊಳ್ಳೆ ಹೊಡೆದಿದ್ದಾರೆ ಎನ್ನುವುದೂ ತಿಳಿದಿದೆ ಎಂದು ಅವರು ನೇರ ಆರೋಪ ಮಾಡಿದರು.
ನೈಸ್ ಯೋಜನೆಗೆ ಸಹಿ ಹಾಕಿದ್ದು ಅಂದಿನ ಮುಖ್ಯಮಂತ್ರಿ ದೇವೇಗೌಡರು ಎಂದು ಡಿಕೆ ಸುರೇಶ್ ನೀಡಿದ್ದ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿಗಳು; ದೇವೇಗೌಡರು ಸಹಿ ಹಾಕಿದ್ದು ರಸ್ತೆ ಮಾಡಲಿಕ್ಕೆ. ಅಲ್ಲಿನ ಭೂಮಿ ಲಪಟಾಯಿಸುವುದಕ್ಕೆ ಅಲ್ಲ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ನೈಸ್ ವಿಚಾರ ಇಟ್ಟುಕೊಂಡು ಕುಮಾರಸ್ವಾಮಿ ವ್ಯವಹಾರ ಮಾಡುತ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆಗೆ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿಗಳು; ಅವನ (ನೈಸ್) ಜತೆ ಶಾಮೀಲಾಗಿ ಜಮೀನು ಲೂಟಿ ಹೊಡೀಲಿ ಅಂತ ದೇವೇಗೌಡರು ಸಹಿ ಹಾಕಿದ್ರಾ? ಒಂದು ಸಣ್ಣ ಸಾಕ್ಷಿ ಇದ್ದರೆ ತೋರಿಸಲಿ, ದೇವೇಗೌಡರ ಕುಟುಂಬವೇ ರಾಜಕೀಯ ನಿವೃತ್ತಿ ಹೊಂದುತ್ತೇವೆ ಎಂದು ಕಿಡಿಕಾರಿದರು.
ಮೂಲ ಒಪ್ಪಂದ ತಿರುಚಿ ಚೌಕಟ್ಟಿನ ಒಪ್ಪಂದಕ್ಕೆ (ಫ್ರೇಮ್ ವರ್ಕ್ ಅಗ್ರಿಮೆಂಟ್) ಸಹಿ ಯಾರು ಹಾಕಿದ್ದು ಯಾರೆಂದು ಗೊತ್ತಿದೆಯಾ ಅವನಿಗೆ? ಆವತ್ತಿನ ನಗರಾಭಿವೃದ್ಧಿ ಸಚಿವರಾಗಿ ಇದ್ದಿದ್ದು ಯಾರು? ಇವನ ಅಣ್ಣನೇ ಅಲ್ವಾ? ಆತನೇ ತಾನೇ ಈ ಒಪ್ಪಂದಕ್ಕೆ ಸಹಿ ಹಾಕಿದ್ದು. ಲೂಟಿ ಹೊಡೆದ ಭೂಮಿಯನ್ನು ಯಾರ ಹೆಸರಿಗೆ ಮಾಡಲು ಹೊರಟಿದ್ದಾರೆ ಅವರು? 2,000 ಎಕರೆ ಭೂಮಿಯನ್ನು ಯಾರ ಹೆಸರಿಗೆ ಮಾಡಿಕೊಳ್ಳೊಕೆ ಹೊರಟಿದ್ದಾರೆ? ಅವರ ಕುಟುಂಬವೇ ನುಂಗಲು ಹೊರಟಿದೆ. ಇಂಥವರು ನಮ್ಮ ಕುಟುಂಬದ ಬಗ್ಗೆ ಮತಾಡ್ತಾರೆ ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ರಾಜ್ಯವನ್ನು ಮಾರಾಟ ಮಾಡುತ್ತಿದ್ದಾರೆ:
ಶಿಕ್ಷಣ ಇಲಾಖೆಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸಂಬಂಧಿಸಿ ಡಿ.ಕೆ.ಶಿವಕುಮಾರ್ ಅವರು ಸಭೆ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯವನ್ನು ಮಾರಾಟ ಮಾಡಲು ಹೊರಟಿದ್ದಾರೆ ಇವರು. ಬಡ ಮಕ್ಕಳಿಗೆ ಶಿಕ್ಷಣ ಕೊಡಲು ಇವರಿಗೆ ಯೋಗ್ಯತೆ ಇಲ್ಲ. ನಮ್ಮ ರಾಜ್ಯದಲ್ಲಿಯೇ ಈಸ್ಟ್ ಇಂಡಿಯಾ ಕಂಪನಿಗಳಿವೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷ್ಯ ಬೇಕಾ ಎಂದು ಪ್ರಶ್ನಿಸಿದರು.
ನನಗೆ ಜನ ರೆಸ್ಟ್ ಕೊಟ್ಟಿದ್ದಾರಂತೆ. ಇವರಿಗೂ ರೆಸ್ಟ್ ಕೊಡುವ ಕಾಲ ಹತ್ತಿರದಲ್ಲೇ ಇದೆ. ನನಗೆ ಬೆದರಿಕೆ ಹಾಕುವುದು ಬೇಡ. ಗುತ್ತಿಗೆದಾರರಿಗೆ ಬೆದರಿಕೆ ಹಾಕಿದಂತೆ ನನಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ. ನೀವು, ನಿಮ್ಮ ಅಣ್ಣ ಬೆದರಿಕೆ ನಮಗೆ ಹಾಕಲು ಆಗಲ್ಲ ಎಂದು ಡಿಕೆ ಸಹೋದರರ ವಿರುದ್ಧ ಹರಿಹಾಯ್ದರು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ 40 ಪರ್ಸೆಂಟ್ ಬಗ್ಗೆ ತನಿಖೆ ಮಾಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ ಅವರು; 2016-17ರಲ್ಲಿ ಜಾಬ್ ಕಾರ್ಡ್ ದು ಇದೇ ನಾಗಮೋಹನ್ ದಾಸ್ ಅವರ ಬಳಿ ತನಿಖೆ ಮಾಡಿಸಿದ್ದರು. ಅದು ಎಲ್ಲಿದೆ? ಆ ವರದಿ ಕಥೆ ಏನಾಯಿತು? ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದಲ್ಲಿ ತನಿಖೆ ಎಂದರು. ಬಹುಶಃ ಅವರು ಒಪ್ಪಿಲ್ಲ ಅಂತ ಕಾಣುತ್ತೆ. ಹಾಗಾಗಿ ಇವರಿಗೆ ವಹಿಸಿದ್ದಾರೆ ಅನಿಸುತ್ತದೆ ಎಂದು ತರಾಟೆಗೆ ತೆಗೆದುಕೊಂಡರು ಅವರು.
ನಾಗಮೋಹನ್ ದಾಸ್ ಅವರ ಕೈಲಿ ತನಿಖೆ ಮಾಡಿಸಿ, ಆ ವರದಿ ಹಾಗೆ ಇಟ್ಟುಕೊಳ್ಳುತ್ತಾರೆ ಅಷ್ಟೆ. ಅದರ ಫಲಿತಾಂಶ ಹೇಗಿರುತ್ತದೆ ಎನ್ನುವುದು ಗೊತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಜತೆಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ