ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ಇಂದಿನ ಲಿಂಗಾಯತ ಸಮುದಾಯಕ್ಕೆ ತಲುಪಿಸುವ ನಿಟ್ಟಿನಲ್ಲಿ ಹಾನಗಲ್ ಕುಮಾರ ಶಿವಯೋಗಿಗಳು ಮಠಾಧೀಶರನ್ನು ತಯಾರು ಮಾಡುವ ಮಾರ್ಗ ಹಾಕಿಕೊಟ್ಟ ಮಹಾಪುರುಷರು,” ಎಂದು ಗದಗ-ಡಂಬಳ ತೋಂಟದ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ನಗರದ ಕಾರಂಜಿ ಮಠದ 22ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಹಾನಗಲ್ ಕುಮಾರ ಶಿವಯೋಗಿಗಳ 155ನೇ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸನ್ಯಾಸ ಪರಂಪರೆಯು ಸಾಮಾಜಿಕ ಹಿತ ಕಾಯುವ, ಸಮಾಜಕ್ಕಾಗಿ ನಿರಂತರ ಮಾರ್ಗದರ್ಶನ ನೀಡುವ ಮುಖೇನ ತಮ್ಮ ಇಡೀ ಜೀವನ ಮುಡುಪಾಗಿಡುವ ಜೀವನವಾಗಿದ್ದು ಸಮುದಾಯದಲ್ಲಿ ಸಂಸ್ಕಾರ ನೀಡಿ ಧರ್ಮ ಜಾಗೃತಿ ಮೂಡಿಸುವದಕ್ಕಾಗಿ ಮೀಸಲಿದ್ದು, ಇಂದು ನಮ್ಮಂಥ ಮಠಾಧೀಶರು ಅಂಥ ಮಾರ್ಗದಲ್ಲಿ ಸಾಗುವಂತಾಗಬೇಕು,” ಎಂದರು.
“ಲಿಂಗಾಯತ ಮಠಗಳು ಧರ್ಮ ಪ್ರಸಾರದೊಂದಿಗೆ ಶಿಕ್ಷಣ ಕ್ಷೇತ್ರಗಳಲ್ಲೂ ಅಗಾಧ ಸೇವೆ ಮಾಡುತ್ತಿವೆ. ಅದರೊಂದಿಗೆ ಕನ್ನಡ ನಾಡು, ನುಡಿ, ಗಡಿ, ಜಲ ವಿಷಯವಾಗಿ ಲಿಂಗಾಯತ ಮಠಗಳು ಹೋರಾಟ ಮಾಡುವಲ್ಲಿ ಮುಂಚೂಣಿಯಲ್ಲಿವೆ.
ಹಾನಗಲ್ ಶಿವಯೋಗಿಗಳ ಪ್ರೇರಣೆ ಕೆಎಲ್ಇ ಸಂಸ್ಥೆಗೆ ಹೆಚ್ಚಿನ ಬಲ ನೀಡಿದ್ದು ಈಗ ಇತಿಹಾಸ. ಹೀಗಾಗಿ ಲಿಂಗಾಯತ ಸಮುದಾಯದ ಏಳಿಗೆಯಲ್ಲಿ ನಮ್ಮಂಥ ಮಠಾಧೀಶರ ಜವಾಬ್ದಾರಿ ಹೆಚ್ಚಿದೆ” ಎಂದು ಕರೆ ನೀಡಿದರು.
ನೇತೃತ್ವ ವಹಿಸಿದ್ದ ಹಾವೇರಿ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ, “ಬಸವಾದಿ ಶಿವ ಶರಣರ ತತ್ವದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಪ್ರತಿ ತಿಂಗಳು ಮಾಸಿಕ ಶಿವಾನುಭವ ಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಸಮುದಾಯದ ವಿವಿಧ ಮಹನೀಯರನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದೆ” ಎಂದರು.
75 ವರ್ಷ ಪೂರೈಸಿದ ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರನ್ನು ಕಾರ್ಯಕ್ರಮದಲ್ಲಿ ಶ್ರೀಮಠದಿಂದ ಸತ್ಕರಿಸಲಾಯಿತು. ಸತ್ಕಾರ ಸ್ವೀಕರಿಸಿ ಮಾತನಾಡಿದ ಕೋರೆ ಅವರು, ” 75 ವರ್ಷ ವಯಸ್ಸಾಗಿರುವುದು ನನ್ನ ದೇಹಕ್ಕೆ, ನಮ್ಮ ನಾಡಿನ ಪೂಜ್ಯರ, ಹಿರಿಯರ ಆಶೀರ್ವಾದದಿಂದ ನನ್ನ ಮನಸ್ಸಿಗೆ ಈಗಲೂ 25 ರ ಹರೆಯವೇ ಇದೆ. ಕೆಎಲ್ಇ ಸಂಸ್ಥೆಯ ಮುಖೇನ ನಮ್ಮ ಸಮುದಾಯದ ಸೇವೆಯನ್ನು ಮತ್ತಷ್ಟು ಮಾಡುತ್ತೇನೆ” ಎಂದರು.
ಶೇಗುಣಸಿ ವಿರಕ್ತಮಠದ ಮಹಾಂತ ಮಹಾಸ್ವಾಮಿಗಳು ಪ್ರವಚನ ‘ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಜೀವನ ದರ್ಶನ’ ಕುರಿತು ಪ್ರವಚನ ನೀಡಿದರು.
ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿ, ” ಶ್ರೀಮಠದ ಉದ್ಘಾಟನೆ ಆದದ್ದು ಕರ್ನಾಟಕ ರಾಜ್ಯೋತ್ಸವದಂದು. ಕನ್ನಡ ನಾಡು, ನುಡಿಗಾಗಿ ಶ್ರಮಿಸಿದ ಮಹನೀಯರನ್ನು ಸ್ಮರಿಸುತ್ತ ಕನ್ನಡದ ಮಕ್ಕಳಿಗೆ ಕನ್ನಡ ಅನ್ನದ ಭಾಷೆಯಾಗಬೇಕು. ಹಾನಗಲ್ಲ ಶ್ರೀಗಳ ಕುರಿತು ಐದು ದಿನಗಳವರೆಗೆ ನಿರಂತರ ಪ್ರವಚನ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು” ಎಂದು ಕೋರಿದರು.
ಕಾರಂಜಿ ಮಠದ ಡಾ. ಶಿವಯೋಗಿ ದೇವರು ಸಮ್ಮುಖ ವಹಿಸಿದ್ದ ಕಾರ್ಯಕ್ರಮದಲ್ಲಿ ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನೂರಾರು ಸಂಖ್ಯೆಯಲ್ಲಿ ಭಕ್ತರು, ಕನ್ನಡಾಭಿಮಾನಿಗಳು ಸೇರಿದ್ದರು. ಶ್ರೀಮಠದ ಮಾತೃ ಮಂಡಳಿಯ ವಚನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೊ. ಶ್ರೀಕಾಂತ ಶಾನವಾಡ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಎ. ಕೆ. ಪಾಟೀಲ ನಿರೂಪಿಸಿದರು.
ವಕೀಲ ವಿ. ಕೆ. ಪಾಟೀಲ ವಂದಿಸಿದರು.
ಡಿಆರ್ ಇಒ ದಿಂದ ರಾಷ್ಟೀಯ ಮಟ್ಟದ ಪ್ರಶಸ್ತಿ ಪಡೆದ ಜಿಐಟಿ ಮಾಜಿ ವಿದ್ಯಾರ್ಥಿಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ