ಪ್ರಗತಿವಾಹಿನಿ ಸುದ್ದಿ; ಹಾಸನ: ರಾಜ್ಯದಲ್ಲಿ ಮತ್ತೊಂದು ನವಜಾತ ಶಿಶು ಮಾರಾಟ ಜಾಲ ಪತ್ತೆಯಾಗಿದೆ. ಮಗು ಹುಟ್ಟಿದ ಒಂದೇ ದಿನಕ್ಕೆ ಹೆತ್ತ ತಾಯಿಯೇ ಕಂದಮ್ಮನನ್ನು ಮಾರಾಟ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಎರಡು ತಿಂಗಳ ಹಿಂದೆ ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ತಾಯಿ ಸೇರಿ ಐವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ನವೆಂಬರ್ 15ರಂದು ಹೊಸಳ್ಳಿ ಗ್ರಾಮದ ಮಹಿಳೆ ಗಿರಿಜಾ ಗಂಡು ಮಗುವಿಗೆ ಜನ್ಮ ನೀಡಿದ್ದಳು. ನವೆಂಬರ್ 16ರಂದು ಚಿಕ್ಕಮಗಳೂರು ಮೂಲದ ಉಷಾ ಎಂಬುವವರಿಗೆ ಮಗು ಮಾರಾಟ ಮಾಡಿದ್ದಾಳೆ.
ಮಕ್ಕಳ ರಕ್ಷಣಾಧಿಕಾರಿಗಳು ಈ ಪ್ರಕರಣ ಪತ್ತೆ ಮಾಡಿದ್ದು, ಅಧಿಕಾರಿ ಕಾಂತರಾಜು ಸಕಲೇಶಪುರ ಠಾಣೆಯಲ್ಲಿ ದೂರು ದಾಖಲಿಸಿ ಪ್ರಕರಣದ ತನಿಖೆಗೆ ಮನವಿ ಮಾಡಿದ್ದರು. ಹೊಸಳ್ಳಿ ಸುಬ್ರಹ್ಮಣ್ಯ ಎಂಬುವವರ ತೋಟದ ಮನೆಯಲ್ಲಿ ವಾಸವಾಗಿದ್ದ ಗಿರಿಜಾ ನ.15ರಂದು ಹೆತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಮಗು ಜನಿಸಿದ ಒಂದೇ ದಿನಕ್ಕೆ ಮಗುವನ್ನು ಚಿಕ್ಕಮಗಳುರು ಮೂಲದ ಮಹಿಳೆಗೆ ಮಾರಿದ್ದಳು.
ಪ್ರಕರಣ ಸಂಬಂಧ ನವಜಾತ ಶಿಶುವಿನ ತಾಯಿ ಗಿರಿಜಾ, ಮಗು ಖರೀದಿಸಿದ್ದ ಮಹಿಳೆ ಉಷಾ, ಮಗು ಮಾರಾಟಕ್ಕೆ ಕುಮ್ಮಕ್ಕು ನೀಡಿದ್ದ ಆರೋಪದಲ್ಲಿ ಸುಬ್ರಹ್ಮಣ್ಯ, ಶ್ರೀಕಾಂತ್ ಹಾಗೂ ಆಶಾ ಕಾರ್ಯಕರ್ತೆ ಸುಮಿತ್ರಾ ಎಂಬುವವರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಕಾನೂನು ಬಾಹಿರವಾಗಿ ಮಗುವನ್ನು ಮಹಿಳೆಗೆ ಹಸ್ತಾಂತರಿಸಿರುವುದು ಬಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ