*ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರಕ್ಕೆ ನಿರ್ಬಂಧ ಸರ್ಕಾರದ ಅಧಿಕಾರದ ದುರುಪಯೋಗ*

ನಿಷೇಧಾಜ್ಞೆ ಕೂಡಲೇ ಹಿಂಪಡೆಯಿರಿ: ಹಿಂದೂ ಜನಜಾಗೃತಿ ಸಮಿತಿ ಆಗ್ರಹ
ಪ್ರಗತಿವಾಹಿನಿ ಸುದ್ದಿ: ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರುಗೆ ವಿಜಯಪುರ ಜಿಲ್ಲೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವ ಕ್ರಮವನ್ನು ಹಿಂದೂ ಜಾಗೃತ ಸಮಿತಿ ಖಂಡಿಸಿದೆ.
ಕಾಡಸಿದ್ದೇಶ್ವರ ಸ್ವಾಮೀಜಿಯವರುಗೆ ವಿಜಯಪುರ ಪ್ರವೇಶ ನಿರ್ಬಂಧವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಹಿಂದೂ ಜಾಗೃತ ಸಮಿತಿ ವಕ್ತಾರ ಮೋಹನ್ ಗೌಡ ಒತ್ತಾಯಿಸಿದ್ದಾರೆ.
ಕರ್ನಾಟಕ ಸರ್ಕಾರವು ಧಾರ್ಮಿಕ ಭಾವನೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಕಾರಣವನ್ನು ನೀಡಿ, ವಿಜಯಪುರ ಜಿಲ್ಲೆಗೆ ಪೂಜನೀಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಪ್ರವೇಶವನ್ನು ಎರಡು ತಿಂಗಳ ಕಾಲ ನಿಷೇಧಿಸಿರುವ ಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ನಮ್ಮ ನಾಡಿನ ಶ್ರೇಷ್ಠರಾದ ಸಮಾಜ ಪರಿವರ್ತನೆಗೆ ಯೋಗದಾನ ನೀಡುತ್ತಿರುವ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಕಳೆದ 25 ವರ್ಷಗಳಿಂದ ನಿಸ್ವಾರ್ಥ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕೋಟಿ ಜನರ ಹೃದಯದಲ್ಲಿ ಭಕ್ತಿ, ನೈತಿಕತೆ ಮತ್ತು ಸನಾತನ ಸಂಸ್ಕೃತಿಯ ಪ್ರಜ್ವಲಿತ ದೀಪ ಬೆಳಗಿಸಿದ್ದಾರೆ. ಅವರ ಮೇಲಿನ ಈ ನಿಷೇಧವು ಸನಾತನ ಗೌರವಪೂರ್ಣ ಸಂತ ಪರಂಪರೆಗೆ ಮಾಡಿದ ಅಪಮಾನವಾಗಿದೆ. ಇದು ಸರಕಾರದ ಅಧಿಕಾರದ ದುರುಪಯೋಗ ಮತ್ತು ಸಂತರ ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಂದು ಕಡೆ ಸರಕಾರವು ಸರಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣವನ್ನು ಮಾಡುತ್ತದೆ ಮತ್ತೊಂದು ಕಡೆ ಕಾನೂನು ಚೌಕಟ್ಟಿನಲ್ಲಿ ಸಮಾಜ ಪರಿವರ್ತನೆಯ ಕಾರ್ಯ ಮಾಡುವ ಸ್ವಾಮೀಜಿಗಳ ಮೇಲೆ ನಿಷೇಧವನ್ನು ಹೇರುತ್ತಿದೆ. ಭಾರತದಲ್ಲಿ ಹಿಂದೂ ಸಂತರು ಒಂದು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧ ಹೇರಬಹುದು, ಆದರೆ ಭಾರತದ ಯಾವುದೇ ರಾಜ್ಯ ಅಥವಾ ಜಿಲ್ಲೆಯಲ್ಲಿ ಮತಾಂತರ ಮಾಡುವ ಮಿಷನರಿಗಳಿಗೆ ನಿಷೇಧವಿಲ್ಲ, ಲವ್ ಜಿಹಾದಿ ಕೃತ್ಯಗಳಿಗೆ ನಿಷೇಧವಿಲ್ಲ, ಗಲಭೆ ಸೃಷ್ಟಿಸುವವರ ಮೇಲೆ ನಿಷೇಧವಿಲ್ಲ, ಮೂರ್ತಿಗಳನ್ನು ಒಡೆಯುವವರ ಮೇಲೆ ನಿಷೇಧವಿಲ್ಲ, ಗೋಮಾತೆಯನ್ನು ಖಾಸಾಯಿಕಾನೆಗಳಲ್ಲಿ ಕೊಲ್ಲುವುದರ ಮೇಲೆ ನಿಷೇಧವಿಲ್ಲ, ಆದರೆ ಗೋರಕ್ಷಣೆ, ಸಂಸ್ಕೃತಿ ರಕ್ಷಣೆ, ಧರ್ಮರಕ್ಷಣೆ ಮಾಡುವ ಒಬ್ಬ ಹಿಂದೂ ಸಂತರ ಮೇಲೆ ನಿಷೇಧ ಹೇರಲಾಗುತ್ತದೆ. ನಾವು ಭಾರತದಲ್ಲಿದ್ದೇವೋ ಪಾಕಿಸ್ತಾನದಲ್ಲಿದ್ದೇವೋ ? ಅಸದುದ್ದೀನ್ ಓವೈಸಿಯಂಥವರು ರಾಜಾರೋಷವಾಗಿ ಪ್ರಚೋದನಕಾರಿ ಭಾಷಣ ನೀಡುವರು, ಆದರೆ ಅವರ ಹೆಸರಿನಲ್ಲಿ ಎಂದೂ ನಿಷೇಧದ ಕೂಗು ಕೇಳಿ ಬರಲಿಲ್ಲ, ಕೇವಲ ಹಿಂದೂ ಸಂತರನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾಮೀಜಿಯವರ ಕೆಲ ಪ್ರಮುಖ ಸಮಾಜಮುಖಿ ಸೇವಾ ಕಾರ್ಯಗಳು ಇಂತಿವೆ:
೧. 28 ದೇಶೀಯ ತಳಿಯ 2000 ಗೋವುಗಳನ್ನು ಸಾಕಿ ಗೋಸಂರಕ್ಷಣೆಗೆ ಜೀವಮಾನದ ಸೇವೆ ಸಲ್ಲಿಸುತ್ತಿದ್ದಾರೆ.
೨. ಕಳೆದ 8 ವರ್ಷಗಳಿಂದ 400 ಕ್ಕೂ ಹೆಚ್ಚು ಮಕ್ಕಳಿಗೆ “ಊಟ, ವಸತಿ, ಶಿಕ್ಷಣ ಮಾರಾಟಕ್ಕಲ್ಲ” ಎಂಬ ಸಂಕಲ್ಪದೊಂದಿಗೆ ಭಾರತೀಯ ಪರಂಪರೆಯ ಗುರುಕುಲ ಶಿಕ್ಷಣ ನೀಡುತ್ತಿದ್ದಾರೆ.
೩. 600 ಕ್ಕೂ ಹೆಚ್ಚು ವಯೋವೃದ್ಧರಿಗೆ ಗೌರವಧನ ನೀಡಿ ಸಾಕಿ ಸಲಹುತ್ತಿದ್ದಾರೆ.
೪. ಆಯುರ್ವೇದ ಮತ್ತು ಅಲೋಪೆಥಿಕ್ ಆಸ್ಪತ್ರೆಗಳನ್ನು ನಿರ್ಮಿಸಿ ಲಕ್ಷಾಂತರ ಬಡವರಿಗೆ ಅತಿ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
೫. 1000 ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ದತ್ತು ಪಡೆದು ಉಚಿತ ಊಟ, ವಸತಿ, ಶಿಕ್ಷಣ ಮತ್ತು ಉದ್ಯೋಗದ ಅವಕಾಶ ಒದಗಿಸುತ್ತಿದ್ದಾರೆ.
೬. 500 ಕ್ಕೂ ಹೆಚ್ಚು ಹಿಂದುಳಿದ ಶಾಲೆಗಳನ್ನು ದತ್ತು ಪಡೆದು ಅಲ್ಲಿ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.
೭. 100 ಕ್ಕೂ ಹೆಚ್ಚು ಬ್ರಹ್ಮಚಾರಿಗಳನ್ನು ತರಬೇತುಗೊಳಿಸಿ ವೀರ ಸನ್ಯಾಸಿಗಳನ್ನಾಗಿ ರೂಪಿಸುತ್ತಿದ್ದಾರೆ.
೮. ಕಳೆದ 20 ವರ್ಷಗಳಿಂದ 15 ಲಕ್ಷಕ್ಕೂ ಅಧಿಕ ರೈತರಿಗೆ ಸಾವಯವ, ನೈಸರ್ಗಿಕ ಹಾಗೂ ಗೋಆಧಾರಿತ ಕೃಷಿಯ ಮಾರ್ಗದರ್ಶನ ನೀಡಿದ್ದಾರೆ.
೯. 10000 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿ ದೇಶದಾದ್ಯಂತ ಹಂಚುತ್ತಿದ್ದಾರೆ.
೧೦. ಭಾರತದಲ್ಲಿ ಮೊದಲ ಬಾರಿಗೆ ಸಾವಯವ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಿ ಲಕ್ಷಾಂತರ ರೈತರಿಗೆ ವಿಷಮುಕ್ತ ಕೃಷಿಯ ಜ್ಞಾನ ನೀಡುತ್ತಿದ್ದಾರೆ.
ಇಂತಹ ಅಪಾರ ಧಾರ್ಮಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಸೇವೆ ಮಾಡುತ್ತಿರುವ ಒಬ್ಬ ಸ್ವಾಮೀಜಿಯವರ ಮೇಲೆ ಸರ್ಕಾರ ನಿಷೇಧ ವಿಧಿಸಿರುವುದು ಧರ್ಮ, ಸಂಸ್ಕೃತಿ ಮತ್ತು ಮಾತುಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ದುಃಖಕರ ಹಾಗೂ ಅಸಂವಿಧಾನಿಕ ಕ್ರಮವಾಗಿದೆ. ಇದನ್ನು ಹಿಂದೂ ಜನಜಾಗೃತಿ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಮತ್ತು ಈ ಮುಂದಿನ ಬೇಡಿಕೆಯನ್ನು ಇಡುತ್ತದೆ.
೧. ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ಮೇಲಿನ ಈ ಸಂವಿಧಾನಬಾಹಿರ ನಿಷೇಧವನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು.
೨. ಸನಾತನ ಧರ್ಮದ ಗೌರವವನ್ನು ಕಾಯುವ ಸತ್ಪುರಷರ ವಿರುದ್ಧ ರಾಜಕೀಯ ಅಥವಾ ಧಾರ್ಮಿಕ ದ್ವೇಷದಿಂದ ಪ್ರೇರಿತ ಕ್ರಮಗಳನ್ನು ಕೈಗೊಳ್ಳಬಾರದು.
ಹಿಂದೂಗಳ ಹೃದಯಗಳಲ್ಲಿ ಗೌರವ ಪಡೆದಿರುವ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರು ಜನರ ಏಕತೆ, ಧರ್ಮ, ಮತ್ತು ನೈತಿಕತೆಯ ಚೇತನಾಶಕ್ತಿಯಾಗಿದ್ದಾರೆ. ಇಂತಹ ಸ್ವಾಮೀಜಿಯವರ ಧ್ವನಿಯನ್ನು ಅಡಗಿಸಲು ಪ್ರಯತ್ನಿಸುವುದು ಸಮಾಜದ ಹಿತಕ್ಕೆ ವಿರುದ್ಧವಾಗಿದೆ ಎಂದು ಹಿಂದೂ ಜಾಗರಣ ಸಮಿತಿ ತಿಳಿಸಿದೆ.