*ಬೆಳಗಾವಿಯಲ್ಲಿ ಘೋರ ದುರಂತ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮನೆಯಲ್ಲಿ ಮದುವೆಗೆ ಸಮ್ಮತಿ ನೀಡದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಆಟೋದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗೋಕಾಕದ ಹೊರವಲಯದ ಚಿಕ್ಕನಂದಿ ಗ್ರಾಮದಲ್ಲಿ ನಡೆದಿದೆ.
ಮುನವಳ್ಳಿ ನಿವಾಸಿಗಳಾದ ರಾಘವೇಂದ್ರ ಜಾಧವ್ (28) ಹಾಗೂ ರಂಜಿತಾ ಚೋಬರಿ (26) ಮೃತ ಪ್ರೇಮಿಗಳು. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ.
ಇವರ ಮದುವೆಗೆ ಮನೆಯಲ್ಲಿ ಸಮ್ಮತಿ ನೀಡದೇ ರಂಜಿತಾಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ನಡೆಸಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗೋಕಾಕ್ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೂ ಇಂದು ಬೆಳಗ್ಗೆ ಇಬ್ಬರು ಒಂದೇ ಆಟೋದಲ್ಲಿ ಬಂದಿದ್ದರು. ನಿರ್ಜನ ಪ್ರದೇಶದಲ್ಲಿ ಬಂದು ಆಟೋದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಆಗಿರಬಹುದು ಹಾಗಾಗಿ ಸೂಕ್ತ ತನಿಖೆ ಆಗಲಿ ಎಂದು ಮೃತ ಯುವಕನ ಕುಟುಂಬಸ್ಥರು ಆಗ್ರಹಿಸಿದ್ದಾರೆ.