*ನಂದಗಡ ಮಾರ್ಕೆಟಿಂಗ್ ಸೊಸೈಟಿಯಲ್ಲಿ ದೊಡ್ಡ ಮೊತ್ತದ ಅವ್ಯವಹಾರ: ತನಿಖೆಗೆ ಚನ್ನರಾಜ ಹಟ್ಟಿಹೊಳಿ ಆಗ್ರಹ*

ಪ್ರಗತಿವಾಹಿನಿ ಸುದ್ದಿ; ತಾಲ್ಲೂಕಿನ ನಂದಗಡದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ (ಮಾರ್ಕೆಟಿಂಗ್ ಸೊಸೈಟಿ) ದೊಡ್ಡ ಮೊತ್ತದ ಆರ್ಥಿಕ ಅವ್ಯವಹಾರ ನಡೆದಿದೆ. ಸಂಘದ ಕಳೆದ ಮೂರು ವರ್ಷಗಳ ಲೆಕ್ಕ ತಪಾಸಣಾ ವರದಿ ಸಂಗ್ರಹಿಸಲಾಗಿದೆ. ವರದಿಯಲ್ಲಿ ಲೆಕ್ಕ ಪರಿಶೋಧಕರು ಸಂಘದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಹೀಗಾಗಿ ಸಹಕಾರ ನಿಯಮಗಳನ್ನು ಗಾಳಿಗೆ ತೂರಿ ನಡೆದಿರುವ ಈ ಅವ್ಯವಹಾರದ ತನಿಖೆಯನ್ನು ಕೈಗೊಳ್ಳಬೇಕು ಎಂದು ಸಹಕಾರ ಸಚಿವರಿಗೆ ಪತ್ರ ಬರೆಯಲಾಗುತ್ತದೆ” ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಪಟ್ಟಣದ ಶಾಂತಿನಿಕೇತನ ಶಾಲೆಯ ಸಭಾಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, “ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ಹೆಸರಲ್ಲಿ ಮುಂಗಡ ಸಾಲ ಪಡೆದಿರುವ ಬಗ್ಗೆ ದಾಖಲೆಗಳಿವೆ. ಸಂಘದ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿ ಸತ್ಯಾಂಶಗಳನ್ನು ಮರೆಮಾಚಲಾಗಿದೆ. ಸಂಘದ ಆಡಳಿತ ಮಂಡಳಿ ತಮ್ಮ ಸ್ವಂತ ಲಾಭಕ್ಕಾಗಿ ಸಹಕಾರ ನಿಯಮಾವಳಿಗಳನ್ನು ಗಾಳಿಗೆ ತೂರಿ ಕರ್ತವ್ಯಲೋಪ ಎಸಗಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸಂಘದಲ್ಲಿ 1.50 ರಿಂದ 2 ಕೋಟಿ ಮೊತ್ತವನ್ನು ಸರಿಯಾದ ಕಾರಣ ನಮೂದಿಸದೇ ಮುಂಗಡ ರೂಪದಲ್ಲಿ ವಿತರಿಸಲಾಗಿದೆ. ಸಂಘದ ಹಣಕಾಸಿನ ಕೊರತೆ ನೀಗಿಸಲು ವಿವಿಧ ವಾಣಿಜ್ಯ ಸಂಸ್ಥೆಗಳಿಂದ ಲಕ್ಷಾಂತರ ಮೊತ್ತವನ್ನು ಸಿ.ಸಿ ಸಾಲ ಪಡೆದು ಅದಕ್ಕೆ ಬಡ್ಡಿ ಪಾವತಿಸಲಾಗಿದೆ. ಮುಂಗಡ ವಿತರಿಸಿದ ಬಗ್ಗೆ ಸಂಘದ ಸಭೆಗಳಲ್ಲಿ ಚರ್ಚೆಯಾಗದೇ ಮುಂಗಡದ ಹಣವನ್ನು ನಗದು ರೂಪದಲ್ಲಿ ನೀಡುವ ಮೂಲಕ ಆದಾಯ ತೆರಿಗೆಯ ಕಾಯ್ದೆಗಳನ್ನು ಉಲ್ಲಂಘಿಸಲಾಗಿದೆ. ಮುಂಗಡ ನೀಡಿದ ಬಗ್ಗೆ ದಾಖಲೆಗಳನ್ನು ನಿರ್ವಹಿಸಿಲ್ಲ. ಈ ಎಲ್ಲ ಅಂಶಗಳನ್ನು ಉಲ್ಲೇಖಿಸಿ ಸಂಘದ ಅವ್ಯವಹಾರ ನಡೆದಿರುವ ಬಗ್ಗೆ ಸಚಿವರಿಗೆ ದಾಖಲೆಗಳ ಸಮೇತ ದೂರನ್ನು ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತದೆ. ಜೊತೆಗೆ ಮುಂಬರುವ ವಿಧಾನ ಮಂಡಳ ಅಧಿವೇಶನದಲ್ಲೂ ಈ ವಿಷಯ ಪ್ರಸ್ತಾಪಿಸಲಾಗುವುದು” ಎಂದು ವಿವರಿಸಿದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ನಂದಗಡ ಮಾರ್ಕೆಟಿಂಗ್ ಸೊಸೈಟಿಯ ಕಳೆದ ಮೂರು ವರ್ಷಗಳ ಲೆಕ್ಕಪರಿಶೋಧನೆಯು ಪೂರ್ಣಗೊಂಡಿದ್ದು, ಅದರಲ್ಲಿನಲ್ಲಿ ಹಲವಾರು ಆರ್ಥಿಕ ಅಕ್ರಮಗಳು ಬೆಳಕಿಗೆ ಬಂದಿವೆ. ಸಹಕಾರ ನಿಯಮದಡಿ ಅವಕಾಶ ಇಲ್ಲದಿದ್ದರೂ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರ ಹೆಸರಲ್ಲಿ ಮುಂಗಡ ಹಣವನ್ನು ತೆಗೆದುಕೊಂಡಿರುವುದು ಹಾಗೂ ನಿಯಮ ಮೀರಿ ನಗದು ಹಣದ ವ್ಯವಹಾರ ನಡೆಸಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬ ಮಾಹಿತಿ ಲಭಿಸಿದೆ. ಅಲ್ಲದೇ ಈ ಸಂಘದ ಮೂಲಕ ಪಡಿತರ ವಿತರಣೆ, ಮಂಗಲ ಕಾರ್ಯಾಲಯ ಹಾಗೂ ಗ್ಯಾಸ್ ಏಜೆನ್ಸಿಗಳಿದ್ದು, ಇವುಗಳ ವ್ಯವಹಾರದಲ್ಲೂ ಪಾರದರ್ಶಕತೆಯ ಕೊರತೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ನಾನೂ ಸಹ ಸಂಘದ ಅವ್ಯವಹಾರದ ಕುರಿತ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಮತ್ತು ಸಚಿವರನ್ನು ಆಗ್ರಹಿಸುತ್ತಿದ್ದೇನೆ” ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮೃಣಾಳ ಹೆಬ್ಬಾಳಕರ, ಭರಮಾಣಿ ಪಾಟೀಲ, ರಾಜು ಸಿದ್ಧಾಣಿ, ಕೆ.ಪಿ ಪಾಟೀಲ, ಯಶವಂತ ಬಿರ್ಜೆ, ಲಕ್ಷ್ಮಣ ಕಸರ್ಲೇಕರ, ಪ್ರಕಾಶ ತಿರವೀರ ಹಾಗೂ ಇತರರು ಇದ್ದರು.