ಪ್ರಗತಿವಾಹಿನಿ ಸುದ್ದಿ; ಹಾವೇರಿ: ಮುಂದಿನ ಫೆಬ್ರವರಿಯಲ್ಲಿ ಕರ್ನಾಟಕದಲ್ಲಿ ಇಂಡಿಯಾ ಎನರ್ಜಿ ವೀಕ್ 2023 ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿಯವರು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿ.ಐ.ಎನ್.ಪಿ. ಡಿಸ್ಟಿಲರೀಸ್ ಆ್ಯಂಡ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್ ಇವರು ಶಿಗ್ಗಾಂವಿ ತಾಲ್ಲೂಕಿನ ಕೋಣನಕೇರಿ ಗ್ರಾಮದಲ್ಲಿ ಆಯೋಜಿಸಿದ್ದ 3000 ಕೆ.ಎಲ್.ಪಿ.ಡಿ. ಎಥನಾಲ್ ಹಾಗೂ ಸಕ್ಕರೆ ಕಾರ್ಖಾನೆಯ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ದೇಶವಿದೇಶಗಳಿಂದ ಸುಮಾರು 10 ಸಾವಿರ ಪ್ರತಿನಿಧಿಗಳು ಭಾಗವಹಿಸುತ್ತಿದ್ದು, ಇಂಧನ ಉತ್ಪಾದನೆ, ನೀತಿಗಳ ಬಗ್ಗೆ ಚಿಂತನೆ ನಡೆಯುವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಹೆಚ್ಚು ಆರ್ ಎಂಡ್ ಡಿ ಕೇಂದ್ರಗಳನ್ನು ಹೊಂದಿರುವ ಬೆಂಗಳೂರು ನಗರದಲ್ಲಿ ಇಂಧನ ಸಪ್ತಾಹವನ್ನು ಆಚರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದರು.
ಎಥನಾಲ್ ಕಾರ್ಖಾನೆ ಸ್ಥಾಪನೆಗೆ ಶೇ.6 ಬಡ್ಡಿ ಸಹಾಯಧನ :
ಎಥನಾಲ್ ಕಾರ್ಖಾನೆಗಳಿಗೆ ಬಹಳ ಬೇಡಿಕೆಯಿದ್ದು, ಇದರ ಸ್ಥಾಪನೆಗೆ ಶೇ. 6 ಬಡ್ಡಿ ಸಹಾಯಧನ ಹಾಗೂ ಶೇ.95 ರಷ್ಟು ಆರ್ಥಿಕ ನೆರವು ನೀಡಲಾಗುತ್ತಿದೆ. ಹಾವೇರಿ ಜಿಲ್ಲೆಯಲ್ಲಿ ಸಂಕೂರು, ಹಿರೇಕೆರೂರುಗಳಲ್ಲಿ ಎಥನಾಲ್ ಘಟಕಗಳಿದ್ದು ಇನ್ನೂ ಹೆಚ್ಚಿನ ಕಾರ್ಖಾನೆಗಳು ಬರಲಿದ್ದು, ಇವುಗಳಿಗೆ ಸರ್ಕಾರ ಅನುಮತಿಯನ್ನು ನೀಡಲಿದೆ. ಎಥನಾಲ್ ಕಾರ್ಖಾನೆಗಳಿಂದ ರೈತರ ಅಭ್ಯುದಯ, ಸ್ಥಳೀಯರಿಗೆ ಉದ್ಯೋಗ ಹಾಗೂ ಸರ್ಕಾರಕ್ಕೆ ಆದಾಯಗಳನ್ನು ಕಾಣಬಹುದಾಗಿದೆ ಎಂದರು.
ಎಥನಾಲ್ ಕಾರ್ಖಾನೆಗಳಿಂದ ಸ್ಥಳೀಯರಿಗೆ ಉದ್ಯೋಗ :
ಮುಂದಿನ 50 ವರ್ಷಗಳಲ್ಲಿ ಜೈವಿಕ ಇಂಧನಕ್ಕೆ ಬಹಳ ಬೇಡಿಕೆ ಬರುತ್ತದೆ. ಪರಿಸರ , ಆರ್ಥಿಕತೆ ಹಾಗೂ ಇಂಧನಶಕ್ತಿ ಇವುಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಇವುಗಳ ಸಮತೋಲನವನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕತೆಯಲ್ಲಿ ಅಭಿವೃದ್ಧಿ ಕಾಣಬಹುದಾಗಿದೆ. ಕರ್ನಾಟಕ ಪ್ರಗತಿಪರ ರಾಜ್ಯವಾಗಿದ್ದು, ದೇಶದ ಮುಂದಿನ ಭವಿಷ್ಯ ಬರೆಯುವ ಕಾರ್ಯ ರಾಜ್ಯದಲ್ಲಾಗುತ್ತಿದೆ. ಕರ್ನಾಟಕ ಇಂದು ಚಿಂತನೆ ಮಾಡಿ ಕಾರ್ಯರೂಪಕ್ಕೆ ತರುವುದನ್ನು ಭಾರತ ನಂತರ ಮಾಡುತ್ತದೆ. ಆ ಶಕ್ತಿ ಕರ್ನಾಟಕ ರಾಜ್ಯಕ್ಕಿದೆ. ಈ ಕಾರ್ಖಾನೆಯಲ್ಲಿ ಶಿಗ್ಗಾಂವ್ ಕ್ಷೇತ್ರದ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ದೊರೆಯಲಿ ಹಾಗೂ ಮುಂದಿನ ದಿನಗಳಲ್ಲಿ ಕಾರ್ಖಾನೆ ವಿಸ್ತರಣೆಯಾಗಲಿ ಎಂದು ಮುಖ್ಯಮಂತ್ರಿಗಳು ಹಾರೈಸಿದರು.
ಎಥನಾಲ್ ಉತ್ಪಾದನೆ ಹಾಗೂ ಸ್ಥಳೀಯರಿಗೆ ಉದ್ಯೋಗ
ಮುರುಗೇಶ್ ನಿರಾಣಿಯವರು ದೇಶದ ಅತಿಹೆಚ್ಚು ಸಕ್ಕರೆ, ಆಲ್ಕೋಹಾಲ್ ಎಥನಾಲ್ ಉತ್ಪಾದನೆ ಮಾಡುತ್ತಿದ್ದಾರೆ. 400.ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಕಾರ್ಖಾನೆ ಪ್ರಾರಂಭಿಸಲು ಶಿವರಾಂ ಹೆಬ್ಬಾರ್ ಅವರಿಗೆ ಚಾಕಚಕ್ಯತೆ ಇದೆ. ಈ ಭಾಗದ ರೈತರನ್ನು ಉತ್ತಮವಾಗಿ ನೋಡಿಕೊಳ್ಳುವಂತೆ, ಯುವಕರಿಗೆ ಉದ್ಯೋಗ ನೀಡುವಂತೆ ಅವರನ್ನು ಕೋರಿದ್ದು, ಅದನ್ನು ಅವರು ನೆರವೇರಿಸುವ ವಿಶ್ವಾಸವಿದೆ ಎಂದರು. ನೇರವಾಗಿ ಸುಮಾರು 500 ಜನಕ್ಕೆ ಉದ್ಯೋಗ ದೊರೆಯಲಿದ್ದು, ಪರೋಕ್ಷವಾಗಿ 2-3 ಸಾವಿರ ಜನಕ್ಕೆ ಉದ್ಯೋಗ ನೀಡಲಿದ್ದಾರೆ. ಕಬ್ಬು ಅರೆಯುವ ಸಾಮರ್ಥ್ಯ 300 ಕೆ.ಎಲ್.ಪಿ.ಡಿ, ಡಿಸ್ಟಿಲರಿ ಕೂಡ ಇದ್ದು, ಅದರಿಂದ ಎಥನಾಲ್ ಉತ್ಪಾದನೆಯೂ ಆಗುತ್ತದೆ ಎಂದರು.
ಜೈವಿಕ ಇಂಧನಕ್ಕೆ ಮಹತ್ವ:
ನಮ್ಮ ದೇಶದ ಮುಂದಿರುವ ಸವಾಲುಗಳನ್ನು ಹೇಗೆ ಬಗೆಹರಿಸಬೇಕೆಂದು ನಮ್ಮ ಪ್ರಧಾನ ಮಂತ್ರಿಗಳು ಪ್ರಧಾನಿಯಾದ ಕೂಡಲೇ ದೂರದೃಷ್ಟಿಯಿಂದ ಚಿಂತನೆ ಮಾಡಿದ್ದವರು. ಆರ್ಥಿಕತೆ ಬೆಳೆಯಲು ವಿದ್ಯುತ್ ಉತ್ಪಾದನೆ, ಜೊತೆಗೆ ಪರಿಸರದ ರಕ್ಷಣೆಯೂ ಆಗಬೇಕು. ಜೈವಿಕ ಇಂಧನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ವಾಜಪೇಯಿ ಅವರ ಕಾಲದಲ್ಲಿ ಎಥನಾಲ್ ಘಟಕ ಪ್ರಾರಂಭ ವಾಯಿತು. 2024 ಕ್ಕೆ ಶೇ 10 ರಷ್ಟು ಗುರಿ ಸಾಧಿಸಬೇಕೆಂದಿತ್ತು. ಆದರೆ 2022 ಕ್ಕೇ ಈ ಗುರಿ ಸಾಧಿಸಲಾಗಿದೆ. 2025 ಕ್ಕೆ ಶೇ 20 ರಷ್ಟು ಎಥನಾಲ್ ಸೇರಿಸಲಾಗುವುದು ಎಂದು ತೀ ರ್ಮಾನಿಸಲಾಗಿದೆ. ದೇಶದ ಶೇ 20 ರಷ್ಟು ತೈಲ ಆಮದು ಕಡಿಮೆಯಾಗಲಿದೆ. ಆರ್ಥಿಕ ಹೊರೆ ಕಡಿಮೆಯಾಗಿ, ಸ್ವಚ್ಛ ಇಂಧನದ ಉತ್ಪಾದನೆಯೂ ಸಾಧ್ಯವಾಗುತ್ತದೆ. ಇದು ದೂರದೃಷ್ಟಿಯ ನಾಯಕನ ಕೆಲಸ. ಬಹಳಷ್ಟು ತೈಲ ಉತ್ಪಾದಿಸುವ ಸಂಸ್ಥೆಗಳು ಇದನ್ನು ಸ್ವೀಕರಿಸಿರಲಿಲ್ಲ. ದಿಟ್ಟ ನಾಯಕತ್ವದ ವಿಚಾರವಿದ್ದಾಗ ಸಮಸ್ಯೆಗಳು ತಾನೇತಾನಾಗಿ ನಿವಾರಣೆಯಾಗುತ್ತವೆ. ನರೇಂದ್ರ ಮೋದಿಯವರು ಬಂದ ನಂತರ ಇದಕ್ಕೆ ಚಾಲನೆ ದೊರಟು, ಸ್ವಚ್ಛ ಇಂಧನ, ಇಂಧನದ ದಕ್ಷತೆಯೂ ಇದೆ. ಎನ್.ಡಿ.ಎ. ಸರ್ಕಾರ, ಮೋದಿಯವರ ನಾಯಕತ್ವ ಬಂದ ಮೇಲೆ ಇದೆಲ್ಲವೂ ಸಾಧ್ಯವಾಗಿವೆ. ಎಥನಾಲ್ ಘಟಕಕ್ಕೆ ಬೇಡಿಕೆ ಬಹಳ ಇದೆ ಎಂದರು.
ಶಿವರಾಂ ಹೆಬ್ಬಾರರ ಪರಿಶ್ರಮ:
ಶಿವರಾಂ ಹೆಬ್ಬಾರ್ ಅವರ ಹೆಸರಿನಲ್ಲಿ ಶಿವ ಹಾಗೂ ರಾಮ ಇಬ್ಬರೂ ಇದ್ದಾರೆ. ಶಿವನ ಹಾಗೆ ಸಾಧನೆ, ರಾಮನ ಹಾಗೆ ನ್ಯಾಯವನ್ನೂ ಒದಗಿಸುತ್ತಾರೆ. ದೇವರ ಆಶೀರ್ವಾದ ಅವರ ಮೇಲಿದೆ. ಅವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಪರಿಶ್ರಮದಿಂದ ದುಡಿದು ಮೇಲೆ ಬಂದವರು. ಅವರ ಮಗ ವಿವೇಕ, ಹೆಸರಿನ ತಕ್ಕ ಹಾಗೆ ವಿವೇಕಿ ಹಾಗೂ ಜ್ಞಾನಿಯಾಗಿದ್ದು, ಆತನ ಪರಿಶ್ರಮದಿಂದ ಇವೆಲ್ಲವೂ ಸಾಧ್ಯವಾಗಿದೆ. ಅವರ ಕುಟುಂಬದ ವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಚಿವರಾದ ಶಿವರಾಂ ಹೆಬ್ಬಾರ್, ಮುರುಗೇಶ್ ನಿರಾಣಿ, ಆರ್.ಅಶೋಕ್, ಬಿ.ಎ. ಬಸವರಾಜ,ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಸಂಸದರಾದ ಜಿ.ಎಂ.ಸಿದ್ದೇಶ್ವರ ಮೊದಲಾದವರು ಉಪಸ್ಥಿತರಿದ್ದರು.
*ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರ ಗೌರವ ಧನ ಹೆಚ್ಚಳ*
https://pragati.taskdun.com/gram-panchayathhonorariumincrease/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ