ಪ್ರಗತಿವಾಹಿನಿ ಸುದ್ದಿ, ದುಬೈ – ಪ್ರಪಂಚದಾದ್ಯಂತ ಕ್ರಿಕೆಟ್ ಪ್ರಿಯರ ಎದೆಬಡಿತ ಹೆಚ್ಚಿಸುವ ಭಾರತ- ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಇಂದು ಸಾಕ್ಷಿಯಾಗಲಿದೆ.
ಟಿ-೨೦ ವಿಶ್ವ ಕಪ್‌ನ ಭಾರತ- ಪಾಕಿಸ್ತಾನ ನಡುವಿನ ಹಣಾಹಣಿ ಇಂದು ಸಂಜೆ ೭.೩೦ರಿಂದ ದುಬೈ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ.
ಟೆಸ್ಟ್ ಕ್ರಿಕೇಟ್ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿ ಅತ್ಯಂತ ಹೈ ವೋಲ್ಟೇಜ್ ಪಂದ್ಯ ಎಂದು ಬಿಂಬಿತವಾಗುತ್ತಿತ್ತು. ಆದರೆ ಒನ್ ಡೆ, ಬಳಿಕ ಟಿ-೨೦ ಕ್ರಿಕೇಟ್ ಪಂದ್ಯಗಳು ಹೆಚ್ಚು ಜನಪ್ರಿಯಗೊಂಡಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳು ಕ್ರಿಕೇಟ್ ಪ್ರಿಯರನ್ನು ಅಕ್ಷರಶಃ ಭಾವೋದ್ವೇಗಗೊಳಿಸುತ್ತಿವೆ. ಎರಡೂ ದೇಶದ ನಡುವಿನ ರಾಜಕೀಯ ವೈಮನಸ್ಯ ಸೇರಿದಂತೆ ಹಲವು ಕಾರಣಗಳಿಗಾಗಿ ಈ ಪಂದ್ಯಗಳಿಗೆ ಎಲ್ಲಿಲ್ಲದ ಮಹತ್ವವಿದೆ. ಇಂದೂ ಸಹ ಜಗತ್ತಿನ ಬದ್ಧ ವೈರಿಗಳ ನಡುವಿನ ಪಂದ್ಯವನ್ನು ವೀಕ್ಷಿಸಲು ಪ್ರಪಂಚದಾದ್ಯಂತ ಕ್ರಿಕೆಟ್ ಪ್ರಿಯರು ತುದಿಗಾಲಮೇಲೆ ನಿಂತಿದ್ದಾರೆ.
ಭಾರತದ್ದೇ ಮೇಲುಗೈ
ಒನ್ ಡೆ ವಿಶ್ವ ಕಪ್ ಮತ್ತು ಟಿ-೨೦ ವಿಶ್ವಕಪ್ ಇತಿಹಾಸದಲ್ಲಿ ಭಾರತ -ಪಾಕಿಸ್ತಾನದ ಹಣಾಹಣಿಯಲ್ಲಿ ಈವರೆಗೆ ಭಾರತವೇ ಮೇಲುಗೈ ಸಾಧಿಸುತ್ತ ಬಂದಿದೆ. ೨೦೦೭ರಲ್ಲಿ ನಡೆದ ಮೊದಲ ಟಿ-೨೦ ವಿಶ್ವಕಪ್‌ನಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು. ಅಂದಿನಿಂದ ಈವರೆಗೆ ಪಾಕಿಸ್ತಾನದೆದುರು ಟಿ-೨೦ ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಉಳಿದಿದೆ. ಇದು ಪಾಕ್‌ನ ಕ್ರಿಕೇಟ್ ಪ್ರೇಮಿಗಳಿಗೆ ನುಂಗಲಾರದ ತುತ್ತಾಗಿದೆ. ಪ್ರಸ್ತುತ ಭಾನುವಾರ ನಡೆಯುವ ಪಂದ್ಯದಲ್ಲಿ ಭಾರತ ತನ್ನ ಗೆಲುವಿನ ನಾಗಾಲೋಟ ಮುಂದುವರೆಸುವ ಹಂಬಲದಲ್ಲಿದ್ದರೆ ಪಾಕಿಸ್ತಾನ ಸೋಲಿನ ಸರಣಿಯನ್ನು ಮುರಿಯುವ ಕನಸು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯ ಮತ್ತಷ್ಟು ರೋಚಕವಾಗುವ ಸಾಧ್ಯತೆ ಹೆಚ್ಚಿದೆ.
ಅಸಮಧಾನದ ನಡುವೆ
ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಕಾರಣಕ್ಕೆ ಪಾಕ್ ಜೊತೆಗೆ ಕ್ರಿಕೆಟ್ ಪಂದ್ಯ ಬೇಡ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ. ಹಾಗಾಗಿ ಈ ಪಂದ್ಯದ ಬಗ್ಗೆ ಅನೇಕ ಭಾರತೀಯರಲ್ಲಿ ಅಸಮಧಾನವೂ ಇದೆ.
ಇನ್ನು ೨೦೦೭ರಲ್ಲಿ ವಿಶ್ವ ಕಪ್ ಗೆದ್ದ ತಂಡದ ನಾಯಕ ಧೋನಿ ಈ ಪಂದ್ಯದಲ್ಲಿ ಮೆಂಟರ್ ಆಗಿ ಮತ್ತು ವಿರಾಟ್ ಕೋಹ್ಲಿ ನಾಯಕನಾಗಿರುವ ಹಿನ್ನೆಲೆಯಲ್ಲಿ ಭಾರತದ ತಂಡ ಅತ್ಯಂತ ಸಶಕ್ತವಾಗಿದ್ದು ಪಂದ್ಯ ಗೆಲ್ಲುವ ಫೆವರಿಟ್ ಎನಿಸಿಕೊಂಡಿದೆ.
https://pragati.taskdun.com/bs-sport/former-captain-kapil-dev-had-a-heart-attack-treatment-of-angio-plasty/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ