ಬೇರೆ ಜಿಲ್ಲೆಯ ರೋಗಿಗಳನ್ನು ಕಿಮ್ಸ್‌ಗೆ ಕಳುಹಿಸದಂತೆ ಸೂಚನೆ ನೀಡಿ
ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –
ಇಲ್ಲಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸುತ್ತಲಿನ ಜಿಲ್ಲೆಗಳಿಂದ ರೋಗಿಗಳನ್ನು ಕಳುಹಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಮಾಜಿ ಸಭಾಪತಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿವಾದಾತ್ಮಕ ಪತ್ರ ಬರೆದಿದ್ದಾರೆ.
ಕಿಮ್ಸ್ ಅನುದಾನದ ಕೊರತೆಯಿಂದ ಬಳಲುತ್ತಿದೆ. ಔಷಧದ ಕೊರತೆ ಇದೆ. ಜೊತೆಗೆ ರೋಗಿಗಳು ದೂರದಿಂದ ಬರುವ ವೇಳೆಗೆ ಸಾಯುವ ಸ್ಥಿತಿ ತಲುಪಿರುತ್ತಾರೆ. ಇದರಿಂದ ಕಿಮ್ಸ್ ಹೆಸರು ಹಾಳಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಹೆಚ್ಚಿನ ಅನುದಾನ ಕೊಡಿ ಎಂದು ಕೇಳುವ ಬದಲು ರೋಗಿಗಳನ್ನು ಕಳುಹಿಸದಂತೆ ಪತ್ರ ಬರೆದಿರುವುದು ವಿವಾದಕ್ಕೆ ಆಸ್ಪದ ಕೊಡುವಂತಿದೆ. ಎಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತದೆಯೋ ಅಲ್ಲಿಗೆ ರೋಗಿಗಳನ್ನು ಕರೆತರುವ ಹಕ್ಕು ಎಲ್ಲರಿಗೂ ಇರುತ್ತದೆ. ಉತ್ತರ ಕನ್ನಡ, ಹಾವೇರಿಯಂತಹ ಜಿಲ್ಲೆಗಳಲ್ಲಿ ಚಿಕಿತ್ಸೆಗೆ ಉತ್ತಮ ಆಸ್ಪತ್ರೆಗಳೇ ಇಲ್ಲ. ಅವರೆಲ್ಲ ಅವಲಂಭಿಸಿರುವುದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯನ್ನೇ.
ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ –
ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಸುಮಾರು ೬೦ ವರ್ಷಗಳಿಂದ ಈ ಭಾಗದ ಜನರಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯವನ್ನು ಒದಗಿಸುತ್ತಾ ಬಹಳ ಹೆಸರುವಾಸಿಯಾಗಿದೆ.
ಈ ಹೆಸರುವಾಸಿಯಿಂದ ಸುತ್ತಮುತ್ತಲಿನ ಜಿಲ್ಲೆಗಳಿಂದ ಅನೇಕ ಜನರು ವೈದ್ಯಕೀಯ ಸೌಲಭ್ಯಕ್ಕಾಗಿ ಈ ಕಾಲೇಜು/ಆಸ್ಪತ್ರೆಯನ್ನೇ ಅವಲಂಬಿಸಿರುತ್ತಾರೆ. ಇದರಿಂದ ಸ್ಥಳೀಯವರಿಗೆ ಸರಿಯಾದ ಔಷಧ ಸೌಲಭ್ಯಗಳು ದೊರೆಯುತ್ತಿಲ್ಲ. ಈ ಸಂಸ್ಥೆಯಲ್ಲಿ ಪ್ರಸ್ತುತ ೧೨೦೦ ಹಾಸಿಗೆ ಸೌಲಭ್ಯ ಹೊಂದಿದ್ದು, ಇನ್ನೂ ೬೦೦ ಹಾಸಿಗೆ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.
ಆಸ್ಪತ್ರೆಯ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಒಳ ಮತ್ತು ಹೊರ ರೋಗಿಗಳ ಸಂಖ್ಯೆಯ ಶೇ ೪೦ ರಷ್ಟು ರೋಗಿಗಳು ಸುತ್ತಮುತ್ತಲಿನ ಜಿಲ್ಲೆಗಳಿಂದಲೇ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಇದರಿಂದ ಧಾರವಾಡ ಜಿಲ್ಲೆಯ ರೋಗಿಗಳಿಗೆ ಔಷದೋಪಚಾರ ಸರಿಯಾಗಿ ದೊರೆಯುತ್ತಿಲ್ಲ. ಸುತ್ತಲಿನ ಜಿಲ್ಲೆಗಳಾದ ಹಾವೇರಿ, ಗದಗ, ಬೆಳಗಾವಿ, ಕಾರವಾರ, ಬಾಗಲಕೋಟೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗಳು ಇದ್ದಾಗ್ಯೂ ಈ ಕಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಜನರು ಬರುತ್ತಿದ್ದಾರೆ.
ಸಂಸ್ಥೆಯ ಹೆಸರು ಕೆಡುವ ಸಾಧ್ಯತೆ
ಇದಲ್ಲದೇ ತೀವ್ರ ಕಾಯಿಲೆಯನ್ನು ಹೊಂದಿರುವ ರೋಗಿಗಳನ್ನು ಕೊನೆ ಘಳಿಗೆಯಲ್ಲಿ ಈ ಸಂಸ್ಥೆಗೆ ಕಳುಹಿಸುತ್ತಿರುವುದರಿಂದ, ಇನ್ನೂ ತಪಾಸಣೆ ವೇಳೆಯಲ್ಲಿಯೇ ಸತ್ತಿರುವ ಅನೇಕ ಉದಾಹರಣೆಗಳಿವೆ. ಸಾವಿನ ಸಂಖ್ಯೆ ಹೆಚ್ಚಾಗುವುದರಿಂದ ಈ ಸಂಸ್ಥೆಯ ಹೆಸರು ಕೆಡುವ ಸಾಧ್ಯತೆ ಇದೆ. ಇದಲ್ಲದೇ ಹೊರರಾಜ್ಯದಿಂದ ಬರುವ ರೋಗಿಗಳು ಹೈಜನಿಕ್ ಇಲ್ಲದೇ ಹೆಚ್ಚಿನ ಸಾವು ಸಂಭವಿಸುತ್ತಿವೆ. ಅಲ್ಲದೇ ಇಲ್ಲಿ ತೀವ್ರ ನಿಗಾ ಘಟಕಗಳ ಕೊರತೆ ಇದ್ದು, ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಸರ್ಕಾರವು ಬಳ್ಳಾರಿ ವೈದ್ಯಕೀಯ ಸಂಸ್ಥೆಗೆ ೧೨೫ ಕೋಟಿ, ಮೈಸೂರು ವೈದ್ಯಕೀಯ ಸಂಸ್ಥೆಗೆ ೧೮೫ ಕೋಟಿ ಮತ್ತು ಬೆಂಗಳೂರು ವೈದ್ಯಕೀಯ ಸಂಸ್ಥೆಗೆ ೨೭೫ ಕೋಟಿ ಅನುದಾನ ನೀಡಿ ಹುಬ್ಬಳ್ಳಿಯ ವೈದ್ಯಕೀಯ ಸಂಸ್ಥೆಗೆ ಕೇವಲ ೧೪೫ ಕೋಟಿಗಳಷ್ಟು ಮೊತ್ತವನ್ನು ನೀಡುತ್ತಿದೆ.
ಅನುದಾನ ಕೊರತೆ
ಸರ್ಕಾರವು ಹಂಚಿಕೆ ಮಾಡುತ್ತಿರುವ ಅನುದಾನವು ಕೊರತೆ ಬೀಳುತ್ತಿದೆ. ಈ ಸಂಸ್ಥೆಗೆ ಸುಮಾರು ೧೪೫ ಕೋಟಿ ಮೊತ್ತವನ್ನು ನೀಡುತ್ತಿದ್ದು, ಇದರಲ್ಲಿ ವೇತನಕ್ಕಾಗಿ ಸುಮಾರು ೧೧೫ ಕೋಟಿಗಳಷ್ಟು ಬಳಕೆಯಾಗುತ್ತಿದೆ. ಸುಮಾರು ೫ ಕೋಟಿ ಮೊತ್ತದಷ್ಟು ರಸ್ತೆ, ನೌಕರರ ವಸತಿ ಗೃಹ, ಇತ್ಯಾದಿಗಾಗಿ ಮತ್ತು ಸಾಮಾನ್ಯ ವೆಚ್ಚಗಳಾಗಿ ಬಳಸಲಾಗುತ್ತಿದೆ.
೧೩ ಕೋಟಿಗಳಷ್ಟು ನಿವೃತ್ತ ನೌಕರರ ಪಿಂಚಣಿ, ಪ.ಜಾತಿ ಮತ್ತು ಪಂಗಡಗಳ ನಿಧಿ ಮತ್ತು ಸಂಚಿತನಿಧಿ ಮೇರೆಗೆ ನಿಯುಕ್ತಿಗೊಂಡ ನೌಕರರ ವೇತನಕ್ಕಾಗಿ ಬಳಕೆಯಾಗುತ್ತಿದೆ. ಔಷದೋಪಚಾರಕ್ಕೆ ಅನುದಾನ ಕೊರತೆಯಾಗುತ್ತಿದ್ದು ಇದುವರೆಗೆ ಸುಮಾರು ೧೭ ಕೋಟಿಯಷ್ಟು ಮೊತ್ತವನ್ನು ಬಳಕೆ ಮಾಡಲಾಗುತ್ತಿದೆ.
ಬೇರೆ ವೈದ್ಯಕೀಯ ಸಂಸ್ಥೆಗಳಲ್ಲಿ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಕಡಿಮೆ ಇದ್ದಾಗ್ಯೂ ಅನುದಾನವನ್ನು ಹೆಚ್ಚು-ಹೆಚ್ಚಾಗಿ ನೀಡುತ್ತಿದ್ದು, ರಾಜ್ಯದಲ್ಲಿಯೇ ಅತೀ ಹೆಚ್ಚಿನ ಒಳ-ಹೋರ ರೋಗಿಗಳನ್ನು ಹೊಂದಿರುವ ಕಿಮ್ಸ್‌ಗೆ ನೀಡುತ್ತಿರುವ ಅನುದಾನವು ಕಡಿಮೆ ಆಗುತ್ತಿದೆ. ಮೊದಲು ರಾಜ್ಯದಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯಗಳು ಇರುತ್ತಿರಲಿಲ್ಲ. ಆಗ ಅನಿವಾರ್ಯವಾಗಿ ರೋಗಿಗಳು ಕಿಮ್ಸ್‌ಗೆ ಬರುತ್ತಿದ್ದರು. ಈಗ ಎಲ್ಲ ಕಡೆಗಳಲ್ಲಿಯೂ ವೈದ್ಯಕೀಯ ಮಹಾವಿದ್ಯಾಲಯಗಳು ಸ್ಥಾಪನೆ ಆಗಿವೆ.
ಕಿಮ್ಸ್‌ಗೆ ಕಳುಹಿಸದಂತೆ ಸೂಚಿಸಿ
ಆದ್ದರಿಂದ, ಕಿಮ್ಸ್ ಸುತ್ತಲಿರುವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವೈದ್ಯಕೀಯ ಕಾಲೇಜುಗಳು ಇದ್ದು, ಅಲ್ಲಿ ಚಿಕಿತ್ಸೆಗೆ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಅರ್ನಿವಾರ್ಯವಾದರೆ ಮಾತ್ರ ಇಲ್ಲಿಗೆ ಕಳುಹಿಸಬೇಕು. ಪೋಸ್ಟ್ ಮಾರ್ಟಮ್ ಮಾಡಲು ಸಹ ಇಲ್ಲಿಗೆ ಕಳುಹಿಸುತ್ತಾರೆ.
ನನ್ನ ಅನಿಸಿಕೆ ಇಷ್ಟೆ, ಅಲ್ಲಿ ಔಷಧ ಖರ್ಚಾಗದೇ ಹಾಗೆ ಉಳಿದು ಹಾಳಾಗುವುದು. ಇಲ್ಲಿ ಅಂದರೆ ಕಿಮ್ಸ್‌ನಲ್ಲಿ ಹೆಚ್ಚು ಔಷಧ ಬೇಕಾಗಿ ಒಮ್ಮೊಮ್ಮೆ ಔಷಧವನ್ನು ಹೊರಗಡೆಯಿಂದ ತರುವ ಅನಿವಾರ್ಯತೆ ಸಹಜವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡಿ ಎಲ್ಲರಿಗೂ ನ್ಯಾಯ ಸಿಗುವಂತೆ ಮಾಡಬೇಕು.
ಅಲ್ಲಿಯ ರೋಗಿಗಳನ್ನು ಕಿಮ್ಸ್‌ಗೆ ಕಳುಹಿಸದಂತೆ ಸಂಬಂಧಪಟ್ಟ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಕೋರುತ್ತೇನೆ. ಅಲ್ಲದೇ ಜಿಲ್ಲೆಯಲ್ಲಿನ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡುವ ಸಂಬಂಧ ಹೆಚ್ಚುವರಿ ತೀವ್ರ ನಿಗಾ ಘಟಕಗಳನ್ನು ತೆರೆಯಲು ಕ್ರಮ ಕೈಗೊಂಡು ಹೆಚ್ಚಿನ ಅನುದಾನ ಬಿಡುಗಡೆಗೆ ಕೋರುತ್ತೇನೆ.
ಉತ್ತರ ಕರ್ನಾಟಕದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ತಾವು ಈ ಭಾಗದ ಜನರ ಆಶೋತ್ತರಗಳಿಗೆ ಪ್ರೇರಣೆ ನೀಡುತ್ತೀರೆಂಬ ಆಶಾ ಭಾವನೆಯನ್ನು ಹೊಂದಿರುತ್ತೇನೆ ಮತ್ತು ತಕ್ಷಣವೇ ತಾರತಮ್ಯ ಸರಿಪಡಿಸಲು ಅಧಿಕಾರಿಗಳಿಗೆ ಆದೇಶಿಸುತ್ತೀರೆಂದು ಭಾವಿಸಿರುತ್ತೇನೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.(ಪ್ರಗತಿವಾಹಿನಿ ಸುದ್ದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ