ಅಶೋಕ ಚಂದರಗಿ
ಬೆಳಗಾವಿ ಮಹಾನಗರ ಪಾಲಿಕೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಹಾರಾಷ್ಟ್ರ ಏಕೀಕರಣ ಸಮಿತಿಯು ಮತದಾನದ ಮುನ್ನವೇ ಸೋಲೊಪ್ಪಿಕೊಂಡಿದೆಯೆ?
ರಾಜಕೀಯ ಪಕ್ಷಗಳು ಮೊದಲ ಬಾರಿಗೆ ಚುನಾವಣೆ ಕಣದಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತಮ್ಮ ಬಲಾಬಲ ಪರೀಕ್ಷೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ ಏಲ್ಲ 58 ವಾರ್ಡುಗಳಿಗೆ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿ ವಿಫಲವಾಗಿರುವ ಮ.ಏ.ಸಮಿತಿಯು ಕೇವಲ 23 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿರುವುದು ಈ ನಾಡದ್ರೋಹಿ ಸಂಘಟನೆಯು ಅವಸಾನದ ಅಂಚಿಗೆ
ಬಂದು ನಿಂತಿರುವದು ಸಾಬೀತಾದಂತಾಗಿದೆ.
1984 ರಲ್ಲಿ ಬೆಳಗಾವಿ ನಗರಸಭೆಯು ಮಹಾನಗರ ಪಾಲಿಕೆಯಾಗಿ ಪರಿವರ್ತನೆಗೊಂಡ ನಂತರ ಇದೇ
ಮೊದಲ ಬಾರಿಗೆ ಸಮಿತಿಯು ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹರಸಾಹಸಪಡುತ್ತಿದೆ. ಪ್ರತಿ ಬಾರಿಯೂ ಸಾಕಷ್ಟು ಮೊದಲೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿದ್ದ ಸಮಿತಿಯು ಅಚ್ಚ ಕನ್ನಡ ಪ್ರದೇಶಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಸಾಕಷ್ಟು ಉದಾಹರಣೆಗಳಿವೆ. ಸಮಿತಿಯ ಅಧಿಕೃತ ಅಭ್ಯರ್ಥಿಗಳಾಗಲು ಭಾರೀ ಪೈಪೋಟಿ ನಡೆಯುತ್ತಿದ್ದ ದಿನಗಳನ್ನು ಬೆಳಗಾವಿ ನಾಗರಿಕರು ಕಂಡಿದ್ದಾರೆ. ಸಮಿತಿಯ ನಾಯಕರು ತಮ್ಮ ಕಾರ್ಯಾಲಯದಲ್ಲಿ ಕುಳಿತೇ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿದ್ದರು. ತಮ್ಮ ಆದೇಶದ ವಿರುದ್ಧ ನಡೆದುಕೊಳ್ಳುವ ಮರಾಠಿಗರ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಿದ ಅನೇಕ ಘಟನೆಗಳೂ ಸಹ ನಡೆದುಹೋಗಿವೆ.
ಆದರೆ ಸಮಿತಿಯ ನಾಯಕರು ಈಗ ವಾರ್ಡಿನ ಪಂಚರ ಮೊರೆ ಹೋಗಿದ್ದಾರೆ . ಪಂಚರು ಮಾಡಿದ್ದೇ ಅಂತಿಮ ಎಂದು ಹೇಳಿ ಅಭ್ಯರ್ಥಿಗಳನ್ನು ಹೇರುವುದನ್ನು ಕೈಬಿಟ್ಟಿದ್ದಾರೆ. ಅಷ್ಟರಮಟ್ಟಿಗೆ ಸಮಿತಿ ದುರ್ಬಲಗೊಂಡಿದೆ.
ರಾಜಕೀಯ ಪಕ್ಷಗಳ ಟಿಕೆಟ್ ಪಡೆಯುವುದೆಂದರೆ ಒಂದು ದೊಡ್ಡ ಅಪರಾಧವೆಂಬಂತೆ ಸಮಿತಿಯ ನಾಯಕರು ಬಿಂಬಿಸುವ ಕಾಲವೂ ಒಂದಿತ್ತು. ಆದರೆ ಇಂದು ಅನೇಕರು ಬಿಜೆಪಿ, ಕಾಂಗ್ರೆಸ್
ಪಕ್ಷಗಳ ಟಿಕೆಟ್ ಪಡೆದು ಕಣಕ್ಕಿಳಿದಿರುವುದು ಸಮಿತಿಗೆ ಆಘಾತ ಉಂಟು ಮಾಡಿದೆ. ಕಣದಲ್ಲಿರುವ ನಾಲ್ಕೈದು ಮರಾಠಿಗರಲ್ಲಿ ಯಾರೇ ಗೆದ್ದರೂ ಅವರಿಗೆ ಎಮ್.ಇ.ಎಸ್.ಬಣ್ಣ ಬಳೆಯಲು
ಸಿದ್ಧರಾಗಿಯೇ ಕುಳಿತಿರುವ ಅದರ ನಾಯಕರು ಚುನಾವಣೆಯ ಫಲಿತಾಂಶದ ನಂತರ ಅಧಿಕಾರಕ್ಕಾಗಿ
ಮಹಾರಾಷ್ಟ್ರದ ನಾಯಕರ ಬೆಂಬಲ ಪಡೆಯುವ ಕಸರತ್ತನ್ನೂ ಸಹ ನಡೆಸಲಿದ್ದಾರೆ. ಅಲ್ಲಿ ಶಿವಸೇನಾ ನೇತೃತ್ವದ ಸರಕಾರದಲ್ಲಿ ಕಾಂಗ್ರೆಸ್ ಸಹ ಇರುವುದು ಗಮನಾರ್ಹ. ಆದರೆ ಕರ್ನಾಟಕದ
ಕಾಂಗ್ರೆಸ್ ನಾಯಕರು ಮಹಾರಾಷ್ಟ್ರದ ಮುಖನೋಡಿ ಇಲ್ಲಿ ಆಟವಾಡಲಾರರು. ಆಡಿದರೆ ಇಲ್ಲಿ
ಏನಾಗಬಹುದು ಎಂದು ತಿಳಿಯದವರು ಅವರಲ್ಲ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ