ಅಥಣಿ ಕ್ಷೇತ್ರದಿಂದ ಅಧಿಕ ಮತಗಳು ಬರುತ್ತವೆ ಎಂಬ ನಿರೀಕ್ಷೆ ಇದೆ: ಸಚಿವ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ: ಅಥಣಿ ಮತಕ್ಷೇತ್ರದಿಂದ ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಹೆಚ್ಚಿನ ಮತಗಳು ಬರುತ್ತವೆ ಎಂಬ ನಿರೀಕ್ಷೆ ಇದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಅಥಣಿ ತಾಲೂಕಿನ ಐಗಳಿ ಕ್ರಾಸ್ ನಲ್ಲಿ ಹಮ್ಮಿಕೊಂಡಿದ್ದ ತೇಲಸಂಗ, ಐಗಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸ್ಥಳೀಯ ಶಾಸಕರು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಅಥಣಿ ಕ್ಷೇತ್ರವನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ನಿಮ್ಮ ತಾಲೂಕಿಗೆ ನೀರಾವರಿ ಯೋಜನೆ ಸೇರಿದಂತೆ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಾಕಷ್ಟು ಸಭೆ, ಸಮಾರಂಭಗಳಲ್ಲಿ ಹೇಳಿದ್ದೇನೆ. ಈಗ ಚುನಾವಣೆಗೆ ನಾಲ್ಕೈದು ದಿನಗಳು ಮಾತ್ರ ಬಾಕಿ ಇದ್ದು, ಬೂತ್ ಮಟ್ಟದಲ್ಲಿ ಕೆಲಸ ಮಾಡಿ. ಇನ್ನು ಅಥಣಿ ಕ್ಷೇತ್ರದಲ್ಲಿ ಎಲ್ಲರಿಗೂ ಕಾರ್ಡಗಳು ಮುಟ್ಟಿಲ್ಲವೆಂಬ ಮಾಹಿತಿ ಇದೆ. ಕಡಿಮೆ ಅವಧಿ ಇರುವುದರಿಂದ ಎಲ್ಲರಿಗೂ ಗ್ಯಾರಂಟಿ ಕಾರ್ಡುಗಳನ್ನು ಮುಟ್ಟಿಸುವ ಕೆಲಸವಾಗಬೇಕೆಂದು ಸಲಹೆ ನೀಡಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಇಂದಿನವರೆಗಿನ ರಾಜಕೀಯ ಬೆಳವಣಿಗೆ ನೋಡಿದರೆ ಜಯ ಈಗಾಗಲೇ ಕಾಂಗ್ರೆಸ್ ಪಕ್ಷದ ಬಾಗಿಲಿಗೆ ನಿಂತಿದೆ. ಆದ್ದರಿಂದ ಕಾರ್ಯಕರ್ತರು ಚುನಾವಣೆ ಬಗ್ಗೆ ನಾಲ್ಕೈದು ದಿನ ಹಗಲಿರುಳು ಶ್ರಮಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ವಿರೋಧ ಪಕ್ಷದ ವೈಫಲ್ಯವನ್ನು ಜನತೆಗೆ ತಿಳಿಸಿ, ನಮ್ಮ ಪಕ್ಷದ ಅಭಿವೃದ್ಧಿಗಳನ್ನು, ಸಿಎಂ ಸಿದ್ದರಾಮಯ್ಯನವರು ನಮಗೆ ನೀಡಿದ ಅನುದಾನದ ಬಗ್ಗೆಯೂ ತಿಳಿಸಿ, 2 ಸಾವಿರ ಕೋಟಿ ಅನುದಾನ ಅಥಣಿಗೆ ಸಿಕ್ಕಿದೆ. ಸಿಎಂ, ಸಚಿವ ಸತೀಶ್ ಜಾರಕಿಹೊಳಿ ಅವರು ನಮ್ಮ ಕ್ಷೇತ್ರದ ಮೇಲೆ ಬಹಳ ವಿಶ್ವಾಸ ಇಟ್ಟಿದ್ದಾರೆ. ಕಾರಣ ಪ್ರಿಯಂಕಾ ಜಾರಕಿಹೊಳಿ ಅವರನ್ನು ಗೆಲ್ಲಿಸುವ ಮೂಲಕ ಅವರ ಇಟ್ಟ ವಿಶ್ವಾಸ ಉಳಿಸಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಸದಾಶಿವ ಬೂಟಾಳೆ, ತೇಲಸಂಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೋಘ ಸಿದ್ದ ಕೊಬ್ಬರಿ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜಾನನ ಮಂಗಸೂಳಿ, ಅನೀಲ್ ಸುಳೆಬಾವಿ, ಪತ್ತಾರ ವಕೀಲರು, ಟಕ್ಕಣ್ಣವರ್ ವಕೀಲರು, ಬಸವರಾಜ ಬೂಟಾಳೆ, ಕೆಪಿಸಿಸಿ ಸದಸ್ಯ ಚಿದಾನಂದ ಮುಗಳಿ, ಶೇಖರ ನ್ಯಾಮಗೌಡ, ರಾಜಾ ಸಲೀಂ, ರಜಾಕ್ ಮುಲ್ಲಾ, ನಿಖಿತಾ ಗದಾಡೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ