ಪ್ರಗತಿವಾಹಿನಿ ಸುದ್ದಿ, ಕಾರವಾರ –: ಪ್ರಧಾನಿ ಮೋದಿ ಭಾರತಾದ್ಯಂತ ಕೋವಿಡ್-೧೯ ತಡೆಗಟ್ಟುವ ನಿಟ್ಟಿನಲ್ಲಿ ಜನತಾ ಕರ್ಫ್ಯೂಗೆ ಕರೆ ನೀಡಿದ್ದು, ಉತ್ತರಕನ್ನಡ ಜಿಲ್ಲೆಯ ಜನತೆಯೂ ಭಾಗಿಯಾಗಲು ಜಿಲ್ಲಾಧಿಕಾರಿ ಡಾ. ಕೆ ಹರೀಶ್‌ಕುಮಾರ್ ಕರೆ ನೀಡಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮಾರ್ಚ್ ೨೨ ರಂದು ಜಿಲ್ಲೆಗೆ ತುರ್ತು ಅಗತ್ಯತೆಗಾಗಿ ಮಾತ್ರ ಬರಲು ಅವಕಾಶವಿದ್ದು, ರೈಲ್ವೆ, ಬಸ್, ಸೇರಿದಂತೆ ಎಲ್ಲಾ ಬಗೆಯ ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್‌ಪೋಸ್ಟ್‌ಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ.
ಜನತಾ ಕರ್ಫ್ಯೂನಿಂದಾಗಿ ಸಂತೆ, ಮೆಡಿಕಲ್ ಇನ್ನಿತರ ಸೇವೆಗಳಿಗೆ ತಾತ್ಕಾಲಿವಾಗಿ ಬಂದ್ ಘೋಷಿಸಲಾಗಿದ್ದು, ಜನತೆ ದಿನ ನಿತ್ಯದ ಅವಶ್ಯಕ ಸಾಮಗ್ರಿಗಳಿಗಾಗಿ ಪರದಾಡಬೇಕಿಲ್ಲಾ. ಸಾಧ್ಯವಾದ ಮಟ್ಟಿಗೆ ಮನೆಬಾಗಿಲಿಗೆ ಪೂರೈಸುವ ವ್ಯವಸ್ಥೆಯನ್ನು ಮಾಡಲಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕವಾಗಿರುತ್ತದೆ ಎಂದರು.
ಜಿಲ್ಲೆಗೆ ಕೊರೋನಾ ಬರುವುದಿಲ್ಲಾ ಎಂಬ ನಿಷ್ಕಾಳಜಿ ಭಾವನೆಯನ್ನು ಬಿಟ್ಟು ಮುಂಜಾಗೃತ ಕ್ರಮಗಳನ್ನು ಪಾಲಿಸಿದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ರೋಶನ್ ಮಾತನಾಡಿ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜನತೆಯಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಸೈರನ್ ವ್ಯವಸ್ಥೆ ಮಾಡಲಾಗಿದ್ದು, ಜನತಾ ಕರ್ಫ್ಯೂ ಆರಂಭದ ಸೈರನ್ ಮುಂಜಾನೆ ೬:೫೦ ಕ್ಕೆ, ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳು, ಪೂಲೀಸ್ ಸಿಬ್ಬಂದಿಗಳ ಅವಿರತ ಪ್ರಯತ್ನಕ್ಕಾಗಿ ಚಪ್ಪಾಳೆಯ ಮೂಲಕ ಅಭಿನಂದನೆಗಳನ್ನು ಸಲ್ಲಿಸುವ ಸಲುವಾಗಿ ಸಂಜೆ ೫ ಗಂಟೆಗೆ ಅರ್ಧ ನಿಮಿಷದ ಸೈರನ್, ರಾತ್ರಿ ೯ ಗಂಟೆಗೆ ಜನತಾ ಕರ್ಫ್ಯೂ ಮುಕ್ತಾಯದ ಸೈರನ್ ಹಾಕಲಾಗುವುದು. ಭಾನುವಾರದಂದು ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗುತ್ತಿದ್ದು, ಕಚೇರಿ ಕೆಲಸದ ನಿಮಿತ್ತ ಯಾರೂ ಹೊರಬರಬಾರದು ಎಂದರು.
ಜನತಾ ಕರ್ಫ್ಯೂ ಕಟ್ಟು ನಿಟ್ಟಾಗಿ ನಡೆಯುವಂತೆ ತಹಶೀಲ್ದಾರ್, ಪಿಡಿಒ ಹಾಗೂ ಗ್ರಾಮಲೆಕ್ಕಿಗರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿದರೆ ಎಫ್ಐಆರ್ ದಾಖಲು
ಜನತಾ ಕರ್ಫ್ಯೂ ಕರೆ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆದೇಶ ಉಲ್ಲಂಘನೆ ಮಾಡಿದ ವ್ಯಕ್ತಿಗಳ ವಿರುಧ್ಧ ಐಪಿಸಿ ಸೆಕ್ಷನ್ ೧೮೮ ಪ್ರಕಾರ ಎಫ್‌ಐಆರ್ ದಾಖಲಿಸಲಾಗುವುದು ಎಂದು ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದರು.
ಮುಂದಿನ ಒಂದುವಾರಗಳ ಕಾಲ ಯಾವುದೇ ಧಾರ್ಮಿಕ, ಸಾಂಸ್ಕೃತಿಕ, ಖಾಸಗಿ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು, ಮುಂದೂಡುವಂತೆ ಸೂಚಿಸಲಾಗಿದೆ ಎಂದರು.
ಕ್ಷೇತ್ರಕಾರ್ಯದಲ್ಲಿ ನಿರತವಾಗಿರುವ ಸಿಬ್ಬಂದಿಗಳು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಹಾಗೂ ಮುನ್ನೆಚ್ಚರಿಕ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು ಎಂದು ಸೂಚಿಸಿದರು. ಜನತೆ ಸಾಧ್ಯವಾದಷ್ಟು ಮಟ್ಟಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅನಗತ್ಯ ಬೇಟಿಗಳನ್ನು ಮಾಡದೆ ಪ್ರಜ್ಞಾವಂತರು ಈ ಬಗ್ಗೆ ಹೆಚ್ಚಿನ ಗಮನವಹಿಸಬೇಕಾದ ಅಗತ್ಯತೆ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಿ. ಎನ್. ಅಶೋಕ್‌ಕುಮಾರ್ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾಧ್ಯಮ ಮಿತ್ರರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ