*ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ : ಚನ್ನರಾಜ ಹಟ್ಟಿಹೊಳಿ*

ಪತ್ರಕರ್ತರು ಬೆಳಗಾವಿಯಲ್ಲಿ ಹಾಗೂ ಖಾನಾಪುರದಲ್ಲಿ ಮಾಡುವ ಕೆಲಸದಲ್ಲಿ ವ್ಯತ್ಯಾಸವಿದೆ: ಮೊಹಮ್ಮದ ರೋಷನ್
ಪ್ರಗತಿವಾಹಿನಿ ಸುದ್ದಿ, ಖಾನಾಪುರ: “ಪತ್ರಕರ್ತರು ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುವುದು ಸುಲಭ. ಆದರೆ ಖಾನಾಪುರದಂತಹ ಬೆಟ್ಟಗುಡ್ಡ ಹಾಗೂ ದಟ್ಟ ಅರಣ್ಯ ಪ್ರದೇಶದಿಂದ ಸುತ್ತುವರೆದಿರುವ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಅತ್ಯಂತ ಸವಾಲಿನ ಕೆಲಸ” ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅಭಿಪ್ರಾಯ ಪಟ್ಟರು.
ಪಟ್ಟಣದ ಶಿವಸ್ಮಾರಕ ಸಭಾಗೃಹದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಏರ್ಪಡಿಸಿದ್ದ ತಾಲ್ಲೂಕುಮಟ್ಟದ ಪತ್ರಿಕಾ ದಿನಾಚರಣೆ, ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ, ತಾಲ್ಲೂಕಿನ ಹಿರಿಯ ಪತ್ರಕರ್ತರ ಹಾಗೂ ಹಿರಿಯ ಪತ್ರಿಕಾ ವಿತರಕರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, “ದಟ್ಟ ಕಾನನದಿಂದ ಸುತ್ತುವರೆದಿರುವ ಈ ತಾಲ್ಲೂಕು ನಿಸರ್ಗದತ್ತ ಪ್ರಕೃತಿಯಿಂದ ಶ್ರೀಮಂತವಾಗಿದೆ. ಅರಣ್ಯ ಪ್ರದೇಶದಲ್ಲಿ ವನ್ಯಜೀವಿ-ಮಾನವ ಸಂಘರ್ಷದ ಸಂದರ್ಭಗಳಲ್ಲಿ ಪತ್ರಕರ್ತರು ದಿಟ್ಟತನದಿಂದ ವರದಿ ಮಾಡುವ ಪ್ರಸಂಗಗಳು ಎದುರಾಗುತ್ತವೆ. ಈ ಭಾಗದಲ್ಲಿ ಪತ್ರಕರ್ತರ ಸಂಘವು ಎಲ್ಲ ಭಾಷೆಯ ಪತ್ರಕರ್ತರನ್ನು ಸಂಘಟಿಸಿ ಎಲ್ಲರೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿರುವುದು ಖುಷಿಯ ವಿಷಯ” ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, “ಖಾನಾಪುರ ತಾಲ್ಲೂಕಿನ ಪತ್ರಕರ್ತರು ತಮ್ಮ ನೈಜ ವರದಿಗಳ ಮೂಲಕ ಸರ್ಕಾರವನ್ನು ಎಚ್ಚರಿಸಿ ಜನಸೇವೆ ಮಾಡುತ್ತಿದ್ದಾರೆ” ಎಂದರು.
ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ಪತ್ರಕರ್ತರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ತಮ್ಮ ಹರಿತವಾದ ಬರವಣಿಗೆಯಿಂದ ಎಚ್ಚರಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಂಗವಾಗಿ 42 ವರ್ಷಗಳ ಕಾಲ ತರುಣಭಾರತ ದಿನಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ ಪ್ರಕಾಶ ದೇಶಪಾಂಡೆ ಹಾಗೂ ವಿವಿಧ ಕನ್ನಡ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ ಜಗದೀಶ ಹೊಸಮನಿ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದ ದಿನಪತ್ರಿಕೆ ವಿತರಕರನ್ನು ಸಂಘದ ವತಿಯಿಂದ ಗೌರವಿಸಿ ಸತ್ಕರಿಸಲಾಯಿತು. ಪತ್ರಕರ್ತರಿಗೆ ತಾಲ್ಲೂಕು ಕೇಂದ್ರದಲ್ಲಿ ಪತ್ರಿಕಾ ಭವನ ನಿರ್ಮಿಸಲು ನಿವೇಶನ ಒದಗಿಸಬೇಕು ಮತ್ತು ಬೆಳಗಾವಿ ಮಹಾನಗರಪಾಲಿಕೆ ಮಾದರಿಯಂತೆ ಖಾನಾಪುರದ ಪತ್ರಕರ್ತರಿಗೆ ಆರೋಗ್ಯವಿಮೆ ಸೇವೆಯನ್ನು ನೀಡಬೇಕು ಎಂದು ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ಮಾಜಿ ಶಾಸಕರಾದ ಅರವಿಂದ ಪಾಟೀಲ, ದಿಗಂಬರ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು, ಸಿಬ್ಬಂದಿ, ರಾಜಕೀಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ವಿವೇಕ ಕುರಗುಂದ ಕಾರ್ಯಕ್ರಮ ನಿರ್ವಹಿಸಿದರು. ಶಾಸಕರ ಮಾದರಿ ಕನ್ನಡ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ಕಾಶೀಮ ಹಟ್ಟಿಹೊಳಿ ಸ್ವಾಗತಿಸಿದರು. ಪಿರಾಜಿ ಕುರಾಡೆ ಪ್ರಾಸ್ತಾವಿಕ ಮಾತನಾಡಿದರು. ಪ್ರಸನ್ನ ಕುಲಕರ್ಣಿ ವಂದಿಸಿದರು.